ಮಂಗಳೂರು, ನ. 08: ಕರ್ನಾಟಕ ರಾಜ್ಯದ ಘನವೆತ್ತ ರಾಜ್ಯಪಾಲ ವಾಜುಭಾಯಿ ವಾಲ ಅವರುನ. 10ರಂದು ಮಂಗಳೂರಿಗೆ ಭೇಟಿ ನೀಡಲಿದ್ದು, ಪಣಂಬೂರು ಕಡಲ ಕಿನಾರೆಯಲ್ಲಿ ಲಂಡನ್ ನಿರ್ಮಿತ ಹಾವರ್ ಕ್ರಾಫ್ಟ್ ಏರ್ಕುಶನ್- 196 ಮತ್ತು ಹಾವರ್ ಕ್ರಾಫ್ಟ್ ಏರ್ ಕುಶನ್ 198 ಕಾರ್ಯಾಚರಣೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಕರಾವಳಿಯಾದ್ಯಂತ ರಕ್ಷಣಾ ಕಾರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಕರಾವಳಿ ರಕ್ಷಣಾ ಪಡೆಗೆ ಮಂಜೂರಾಗಿರುವ ಈ ಎರಡು ಹಾವರ್ಕ್ರಾಫ್ಟ್ಗಳು ಇದು ನೀರಿನ ಮೇಲಲ್ಲದೆ, ಭೂಮಿಯ ಮೇಲೂ ಅತೀ ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿವೆ. ಪ್ರಸ್ತುತ ಈ ಹಾವರ್ಕ್ರಾಫ್ಟ್ಗಳು ಕೋಸ್ಟ್ಗಾರ್ಡ್ನ ಪಣಂಬೂರು ಕಚೇರಿ ಸಮೀಪದ ಕಡಲ ಕಿನಾರೆಯಲ್ಲಿ ತಂಗಿವೆ. ಕೋಸ್ಟ್ ಗಾರ್ಡ್ ರೀಜನ್ (ಪಶ್ಚಿಮ)ನ ಇನ್ಸ್ಪೆಕ್ಟರ್ ಜನರಲ್ ಎಸ್.ಪಿ.ಎಸ್. ಬಸ್ರಾ ನಿರ್ದೇಶನ ಹಾಗೂ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಲಂಡನ್ನ ಗ್ರಿಫರ್ ಹಾವರ್ವರ್ಕ್ ಲಿಮಿಟೆಡ್ನ ಪ್ರತಿನಿಧಿ ಭಾಗವಹಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಪಣಂಬೂರು ಕರಾವಳಿ ತಟ ರಕ್ಷಣಾ ಪಡೆಯ ಕಚೇರಿ ಬಳಿ ಕಾರ್ಯಕ್ರಮ ರಾಜ್ಯಪಾಲರಿಗೆ ಗೌರವ ವಂದನೆಯೊಂದಿಗೆ ಆರಂಭಗೊಳ್ಳಲಿದೆ ಎಂದು ಕರಾವಳಿ ತಟರಕ್ಷಣಾ ಪಡೆಯ ಕರ್ನಾಟಕ ಕಮಾಂಡರ್ ಹಾಗೂ ಡಿಐಜಿ ರಾಜಮಣಿ ಶರ್ಮ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ನ.8ರಂದು ‘ಅಮರ್ತ್ಯ’ ಪಣಂಬೂರು ಕಡಲ ತೀರಕ್ಕೆಭಾರತೀಯ ಕರಾವಳಿ ತಟ ರಕ್ಷಣಾ ಪಡೆಗೆ ಮಂಜೂರಾಗಿರುವ ‘ಅಮರ್ತ್ಯ’, ಅಮಲ ಹಾಗೂ ಚಾರ್ಲಿ 410 ಎಂಬ ವೇಗದ ಗಸ್ತು ಕ್ರಾಫ್ಟ್ ಗೋವಾ ಸಮುದ್ರದಲ್ಲಿ ನವೆಂಬರ್ 5ರಿಂದ ಕಾರ್ಯಾರಂಭಿಸಿದ್ದು, ಕರಾವಳಿ ತಟದಲ್ಲಿ ಕಾರ್ಯಾಚರಿಸಲಿರುವ ಅಮರ್ತ್ಯ ಕ್ರಾಫ್ಟ್ ಪಣಂಬೂರು ಕಡಲ ಕಿನಾರೆಗೆ ನಾಳೆ (ನ.8)ಆಗಮಿಸಲಿದೆ. ಕರಾವಳಿ ತಟ ರಕ್ಷಣಾ ಪಡೆಯಲ್ಲಿ ಈಗಾಗಲೇ ಕಸ್ತೂರ್ಬಾ, ಸಾವಿತ್ರಿಭಾಯಿ ಫುಲೆ, ರಾಜ್ದೂತ್ ಎಂಬ ಗಸ್ತು ವಾಹನಗಳು ಕಾರ್ಯಾಚರಿಸುತ್ತಿದ್ದು, ಅಮರ್ತ್ಯದ ಸೇರ್ಪ ಡೆಯೊಂದಿಗೆ ಗಸ್ತು ಕ್ರಾಫ್ಟ್ಗಳ ಸಂಖ್ಯೆ ನಾಲ್ಕಕ್ಕೇರಲಿದೆ. ಇದ ರೊಂದಿಗೆ ಕರಾವಳಿ ತೀರದಲ್ಲಿ ರಕ್ಷಣಾ ಕಾರ್ಯಕ್ಕೆ ಮತ್ತಷ್ಟು ಬಲ ತುಂಬಿದಂತಾಗಿದೆ ಎಂದು ರಾಜಮಣಿ ಶರ್ಮ ತಿಳಿಸಿದರು.
ಭಾರತೀಯ ಕೋಸ್ಟ್ ಗಾರ್ಡ್ಗೆ ಶೀಘ್ರವೇ 3ನೆ ಮಾಲಿನ್ಯ ಪ್ರತಿಬಂಧಕ ಹಡಗು ಸೇರ್ಪಡೆ :
ಸಮುದ್ರ ತೀರಗಳಲ್ಲಿ ಗಸ್ತು ನಡೆಸುವುದರ ಜೊತೆಗೆ, ಸಮುದ್ರದಲ್ಲಿ ಉಂಟಾಗುವ ಮಾಲಿನ್ಯವನ್ನು ತಡೆಯುವಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆಗೆ ತೃತೀಯ ಮಾಲಿನ್ಯ ಪ್ರತಿಬಂಧಕ ಹಡಗು (ಪೊಲ್ಯೂಶನ್ ರೆಸ್ಪಾನ್ಸ್ ವೆಸಲ್) ಗುಜರಾತ್ ಕರಾವಳಿಗೆ ಈ ವರ್ಷದ ಅಂತ್ಯದೊಳಗೆ ಸೇರ್ಪಡೆಗೊಳ್ಳಲಿದೆ. ಭಾರತೀಯ ಕರಾವಳಿ ಪಡೆಗೆ 2010ರಲ್ಲಿ ಪ್ರಥಮ ಮಾಲಿನ್ಯ ಪ್ರತಿಬಂಧಕ ಹಡಗು ‘ಸಮುದ್ರ ಪ್ರಹರಿ’ ಸೇರ್ಪಡೆಗೊಂಡಿತ್ತು. ಅದಾದ ಬಳಿಕ ದ್ವಿತೀಯ ಮಾಲಿನ್ಯ ಪ್ರತಿಬಂಧಕ ಹಡಗು ‘ಸಮುದ್ರ ಪಹರೇದಾರ್’ ಪೂರ್ವ ಕರಾವಳಿ ತೀರಕ್ಕೆ ಸೇರ್ಪಡೆಗೊಂಡಿದ್ದರೆ, ಈ ವರ್ಷದ ಅಂತ್ಯದೊಳಗೆ ಅಥವಾ ಮುಂದಿನ ಮಾರ್ಚ್ನೊಳಗೆ ‘ಸಮುದ್ರ ಪವಕ್’ ಗುಜರಾತ್ ಕರಾವಳಿ ತೀರದ ರಕ್ಷಣಾ ಕಾರ್ಯದ ಜೊತೆ ಮಾಲಿನ್ಯ ನಿಯಂತ್ರಣ ತಡೆ ಕಾರ್ಯವನ್ನು ನಿರ್ವಹಿಸಲಿದೆ ಎಂದು ಸಮುದ್ರ ಪ್ರಹರಿಯ ಕಮಾಂಡಿಂಗ್ ಆಫೀಸರ್ ಕೈಲಾಶ್ ನೇಗಿ ತಿಳಿಸಿದರು.
ಸೋಮವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿಮಿತ್ತ ಸಮುದ್ರ ಪ್ರಹರಿಯೊಂದಿಗೆ ಕೈಲಾಶ್ ನೇಗಿ ನಿನ್ನೆ ಪಣಂಬೂರು ಕಡಲ ಕಿನಾರೆಗೆ ಆಗಮಿಸಿದ್ದಾರೆ. ಸುಸಜ್ಜಿತ ರಕ್ಷಣಾ ವ್ಯವಸ್ಥೆಗಳನ್ನು ಹೊಂದಿರುವ ಈ ಮಾಲಿನ್ಯ ಪ್ರತಿಬಂಧಕ ಹಡಗು, ಸಮುದ್ರದಲ್ಲಿ ಹಡಗುಗಳಿಂದ ಸಂಭವಿಸುವ ತೈಲ ಸೋರಿಕೆಯಂತಹ ದುರ್ಘಟನೆಗಳ ಸಂದರ್ಭ ತೈಲವು ಸಮುದ್ರ ಸೇರಿ ಮಾಲಿನ್ಯವಾಗುವುದನ್ನು ತಡೆಯುವ ಕಾರ್ಯವನ್ನು ಅತ್ಯಂತ ಕ್ಷಿಪ್ರವಾಗಿ ನಿರ್ವಹಿಸಲಿದೆ. ಏಕಕಾಲದಲ್ಲಿ ಈ ಹಡಗು 500 ಟನ್ಗಳ ತೈಲವನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನೇಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಾವರ್ಕ್ರಾಫ್ಟ್ ಎಚ್ 198ರ ಕಮಾಂಡಿಂಗ್ ಆಫೀಸರ್ ಅಮಿತಾಭ್ ಬ್ಯಾನರ್ಜಿ, ಕಮಾಂಡೆಂಟ್ ಆಫ್ ರಾಜ್ದೂತ್ ಅನುಪಮ್ ರೈ ಮತ್ತುಅಮರ್ ದೇಶ್ಪಾಂಡೆ, ಉಪಸ್ಥಿತರಿದ್ದರು.