ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಿಂದೂ ಸಂಘಟನೆಗಳನ್ನು ದಮನಿಸುವ ಪ್ರಯತ್ನ ನಡೆಸಿ ಇನ್ನೊಂದು ಕಡೆಯಿಂದ ಅಲ್ಪಸಖ್ಯಾತರನ್ನು ಓಲೈಸುವ ಪ್ರಯತ್ನ ನಡೆಯುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರೊ.ಎಂ.ಬಿ.ಪುರಾಣಿಕ್ ಆರೋಪಿಸಿದರು.
ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆ ಯಿಂದ ಹಿಂದೂ ಸಂಘಟನೆ ಕಾರ್ಯಕರ್ತರ ದಮನ ನೀತಿ ಮತ್ತು ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯಿದೆ ಹಾಕುವ ಕ್ರಮದ ವಿರುದ್ಧ ನಗರದ ಪುರಭವನ ಸಮೀಪದ ಗಾಂಧಿ ಪ್ರತಿಮೆ ಎದುರು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದೆರು.
ಶಾಲೆಗೆ ಹೋಗುವ ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಗೋ ಕಳ್ಳರಿಗೆ, ಅವರಿಗೆ ಬಹಿರಂಗ ಬೆಂಬಲ ಸೂಚಿಸುವವರ ವಿರುದ್ಧ ಕ್ರಮ ಕೈಗೊಳ್ಳದ ಸರಕಾರ ಇಂತಹಾ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಹೋರಾಡುವವರ ವಿರುದ್ಧ ಗೂಂಡಾ ಕಾಯಿದೆ ಹೇರುತ್ತಾರೆ. ಇಂತಹಾ ಪ್ರಕ್ರಿಯೆ ಮುಂದುವರಿದರೆ ಸರಕಾರ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ಹಿಂದೂ ಜಾಗರಣ ವೇದಿಕೆ ರಾಜ್ಯ ಸಹ ಸಂಚಾಲಕ ಸತ್ಯಜಿತ್ ಸುರತ್ಕಲ್ ಮಾತನಾಡಿ, ಕರಾವಳಿ ಭಾಗ ಸೇರಿದಂತೆ ದೇಶಾದ್ಯಂತ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗವಹಿಸಿ ಮಂಗಳೂರು ಜೈಲ್‌ನಲ್ಲಿದ್ದ ರಶೀದ್ ಮಲಬಾರಿ ವಿರುದ್ಧ ಗೂಂಡಾ ಕಾಯಿದೆ ಹೇರುವ ಧೈರ್ಯ ಸರಕಾರ ಮಾಡುತ್ತಿಲ್ಲ. ಹಿಂದೆ ಕೆಎಫ್‌ಡಿ ಮೂಲಕ ಹಲವು ಕೋಮು ಗಲಭೆ ಹುಟ್ಟು ಹಾಕಿದ್ದ ಮಾಡೂರು ಇಸುಬು ವಿರುದ್ಧ ಗೂಂಡಾ ಕಾಯಿದೆ ಹಾಕುತ್ತಿಲ್ಲ. ನಿರಂತರವಾಗಿ ಗೋವುಗಳನ್ನು ಕದ್ದು ಸಾಗಿಸಿ ಠಾಣೆಗೆ ಬಂದು ಗಲಾಟೆ ಮಾಡಿದರೂ ಅವರ ವಿರುದ್ಧ ಯಾವುದೇ ಕ್ರಮ ಇಲ್ಲ ಎಂದು ದೂರಿದರು.
ಆದರೆ ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧ ಇಲ್ಲ ಸಲ್ಲದ ಆರೋಪ ಹೊರೆಸಿ ಗೂಂಡಾ ಕಾಯಿದೆ ಬಳಕೆ ಮಾಡಲಾಗುತ್ತಿದೆ. ಸರಕಾರ ಪೊಲೀಸರನ್ನು ಬಳಸಿ ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್ ಹಾಗೂ ಮೊದೀನ್ ಬಾವ ಪರೋಕ್ಷ ಬೆಂಬಲ ನೀಡಿ ದನ ಕಳ್ಳರ ಪರ ವಕಾಲತ್ತು ಮಾಡುತ್ತಾರೆ ಎಂದು ಆರೋಪಿಸಿದರು.