ಕುಂದಾಪುರ: ಅಮಾಸೆಬೈಲು ಗ್ರಾಮದ ರಟ್ಟಾಡಿ ಎಂಬಲ್ಲಿ ವಿವಾಹಿತ ಮಹಿಳೆ ಹಾಗೂ ಯುವಕ ಒಂದೇ ದಿನ ನಾಪತ್ತೆಯಾಗಿರುವ ಪ್ರಕರಣ ಶುಕ್ರವಾರ ಹೊಸ ತಿರುವು ಪಡೆದುಕೊಂಡಿದ್ದು, ಇಬ್ಬರನ್ನೂ ಕೂಡಲೇ ಪತ್ತೆ ಹಚ್ಚಲು ಆಗ್ರಹಿಸಿ ಹಿಂದೂಪರ ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳು ಅಮಾಸೆಬೈಲು ಠಾಣೆ ಎದುರು ಪ್ರತಿಭಟನೆ ನಡೆಸಿದವು.
ಅಮಾಸೆಬೈಲು ರಟ್ಟಾಡಿ ಗ್ರಾಮದ ವಿವಾಹಿತೆ ಮಧುರಾ ಹೆಬ್ಬಾರ್ (22) ಹಾಗೂ ಇದೇ ಪರಿಸರದ ಸರ್ಫರಾಜ್(27) ನಾಪತ್ತೆಯಾಗಿರುವ ಬಗ್ಗೆ ಗುರುವಾರ ಅಮಾಸೆಬೈಲು ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ವಿವಾಹಿತೆಯನ್ನು ಲವ್ ಜೆಹಾದ್ ಹೆಸರಿನಲ್ಲಿ ಅಪಹರಿಸಲಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿರುವ ವಿಹಿಂಪ, ಬಜರಂಗದಳ, ಪ್ರಜ್ಞಾ ಯುವಕ ಮಂಡಲ ಗೋಳಿಯಂಗಡಿ, ದುರ್ಗಾಪರಮೇಶ್ವರಿ ಭಜನಾ ಮಂಡಳಿ ಆರ್ಡಿ, ಅಭಿಮಾನಿ ಸ್ಪೋರ್ಟ್ಸ್ ಕ್ಲಬ್ ಆರ್ಡಿ, ಪರಿಸರದ ನಾಗರಿಕರು, ಅಮಾಸೆಬೈಲು ರಿಕ್ಷಾ ಹಾಗೂ ವಾಹನ ಚಾಲಕ, ಮಾಲೀಕರು ಠಾಣೆ ಎದುರು ಪ್ರತಿಭಟನೆ ನಡೆಸಿ ನಾಪತ್ತೆಯಾದವರನ್ನು ತಕ್ಷಣ ಪತ್ತೆ ಹಚ್ಚುವಂತೆ ಆಗ್ರಹಿಸಿದರು.
ಅವರಿಬ್ಬರು ಒಂದೇ ದಿನ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅನುಮಾನಗಳಿವೆ. ತಕ್ಷಣ ಅವರಿಬ್ಬರನ್ನು ಪತ್ತೆ ಹಚ್ಚಬೇಕು ಎಂದು ಪ್ರತಿಭಟನಾಕಾರರು ಎಸ್‌ಐ ಸುನಿಲ್ ಅವರಿಗೆ ಮನವಿ ಸಲ್ಲಿಸಿದರು. ಅಮಾಸೆಬೈಲು ಪರಿಸರದ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ನೀಡಲಾಗಿತ್ತು.