ಕರಾವಳಿ

ಭಾರತ ಮತ್ತು ಶ್ರೀಲಂಕಾದ ಸಂಬಂಧ ಅತಿ ಪ್ರಾಚೀನವಾದುದು; ಮಣಿಪಾಲದಲ್ಲಿ ಶ್ರೀಲಂಕಾ ಪ್ರಧಾನಿ ಡಿ.ಎಂ. ಜಯರತ್ನೆ

Pinterest LinkedIn Tumblr

D.M. Jayaratne_manipala_Programme (4)

ಉಡುಪಿ: ಭಾರತ ಮತ್ತು ಶ್ರೀಲಂಕಾದ ಸಂಬಂಧ ಇತ್ತೀಚಿನದ್ದಲ್ಲ. ಅತಿ ಪ್ರಾಚೀನವಾದುದು. ಭಾರತದ ಮಹಾಕಾವ್ಯ ರಾಮಾಯಣದಲ್ಲಿ ಶ್ರೀಲಂಕಾದ ಸಂಬಂಧ ಬೆಳಕಿಗೆ ಬರುತ್ತದೆ. ಕ್ರಿಸ್ತ ಪೂರ್ವ 543ರಲ್ಲಿ ಭಾರತದ ದೊರೆ ವಿಜಯ ಸಿಂಹಳಕ್ಕೆ ಕಾಲಿಡುವ ಮೂಲಕ ಖಚಿತ ಚರಿತ್ರೆ ಆರಂಭಗೊಳ್ಳುತ್ತದೆ. ಕ್ರಿಸ್ತ ಪೂರ್ವ 250ರಲ್ಲಿ ಮೌರ್ಯ ದೊರೆ ಅಶೋಕ ಚಕ್ರವರ್ತಿಯ ಮಗ ಭಿಕ್ಕು ಮಹೀಂದ್ರ ಶ್ರೀಲಂಕಾಕ್ಕೆ ಬೌದ್ಧ ಧರ್ಮದ ಸಂದೇಶ ಸಾರಲು ಬಂದಿದ್ದರು. ಭಾರತ ಮತ್ತು ಶ್ರೀಲಂಕಾದ ಸ್ನೇಹಕ್ಕೆ ಅಲ್ಲಿಂದ ಇಲ್ಲಿವರೆಗೆ ಯಾವುದೇ ಧಕ್ಕೆ ಬಂದಿಲ್ಲ ಎಂದು ಶ್ರೀಲಂಕಾ ಪ್ರಧಾನಮಂತ್ರಿ ಡಿ. ಎಂ. ಜಯರತ್ನೆ ಹೇಳಿದ್ದಾರೆ.

ಜಯರತ್ನೆ ಅವರು ಮಣಿಪಾಲ ವಿಶ್ವವಿದ್ಯಾಲಯದ ವಿವಿಧ ವಿದ್ಯಾಸಂಸ್ಥೆಗಳ ಪದವಿಧರರಿಗೆ ಘಟಿಕೋತ್ಸವದಲ್ಲಿ ಪ್ರದವಿ ಪ್ರದಾನ ಮಾಡಿ ಅವರು ಶನಿವಾರ ಮಣಿಪಾಲ ಗ್ರೀನ್ಸ್‌ನಲ್ಲಿ ಮಾತನಾಡಿದರು.

D.M. Jayaratne_manipala_Programme (5) D.M. Jayaratne_manipala_Programme (3)  D.M. Jayaratne_manipala_Programme (1) D.M. Jayaratne_manipala_Programme D.M. Jayaratne_manipala_Programme (2)

Jayaratne_Visit_Manipala

ಉನ್ನತ ಶಿಕ್ಷಣದಿಂದ ನಾವು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ವ್ಯಕ್ತಿತ್ವ ನಿರ್ಮಾಣ ಮತ್ತು ಸಮಾಜದ ಆರ್ಥಿಕ ವರ್ಗಾವಣೆಯಲ್ಲಿ ಶಿಕ್ಷಣ ದಿಕ್ಸೂಚಿಯಂತೆ ಕೆಲಸ ಮಾಡುತ್ತದೆ. ಹೆತ್ತವರು ಮೌಲ್ಯಗಳನ್ನು ನೀಡಿ ಬೆಳೆಸುತ್ತಾರೆ. ಶಿಕ್ಷಕರು ವಜ್ರಕ್ಕೆ ಹೊಳಪು ನೀಡುವಂತೆ ನಿಮ್ಮ ವ್ಯಕ್ತಿತ್ವಕ್ಕೆ ಹೊಳಪು ನೀಡುತ್ತಾರೆ. ಆಗ ನಿಮಗೊಂದು ಗೌರವ ಬರುತ್ತದೆ. ಇಂದು ಪದವಿ ಪಡೆದ ವಿದ್ಯಾರ್ಥಿಗಳು ಮೌಲ್ಯಯುತ ವಜ್ರಗಳಾಗಿ ಸಮಾಜದಲ್ಲಿ ಹೊಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಕಲಿಕೆಗೆ ಕೊನೆ ಎಂಬುದಿಲ್ಲ.ಘಟಿಕೋತ್ಸವ ಎನ್ನುವುದು ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕ್ಯಾಲೆಂಡರ್‌ನಲ್ಲಿ ವಿಶೇಷ ದಿನ. ಈ ದಿನ ಎನ್ನುವುದು ವಿದ್ಯಾರ್ಥಿಗಳ ಪಾಲಿಗೆ ಕೊನೇಯ ದಿನ ಎಂದು ತಿಳಿದುಕೊಳ್ಳಬಾರದು. ಮತ್ತೊಂದು ಪಯಣದ ಆರಂಭ ಎಂದು ತಿಳಿಯಬೇಕು.

ವಿದ್ಯೆಯು ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಕಟ್ಟುವಂತೆ ಮಾಡುತ್ತದೆ. ನಾವು 21ನೇ ಶತಮಾನದಲ್ಲಿದ್ದೇವೆ. ಇದು ಅತ್ಯುತ್ತಮ ಕಲಿಕೆಯನ್ನು ಬೇಡುವ ಕಾಲ. ಸಾಮಾನ್ಯ ಸಮಸ್ಯೆಗಳನ್ನು ಎದುರಿಸುವ ಜತೆಗೆ ಸಾಮಾಜಿಕ ಸಮಸ್ಯೆಗಳಿಗೂ ಸ್ಪಂದಿಸುವವರಾಗಿ ಧನಾತ್ಮಕವಾಗಿ ಯೋಚಿಸುವವರಾಗಿ ಬೆಳೆಯಬೇಕು. ಮಣಿಪಾಲ ವಿಶ್ವವಿದ್ಯಾಲಯವು ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ಶಿಕ್ಷಣ ಪಡೆದವರು ಶ್ರೀಲಂಕಾ ಸೇರಿದಂತೆ ಜಗತ್ತಿನಗಲ ಹರಡಿದ್ದಾರೆ ಎಂದು ನೆನಪಿಸಿಕೊಂಡರು.

ವಿ.ವಿ. ಕುಲಾಧಿಪತಿ ಡಾ|ರಾಮದಾಸ್‌ ಎಂ. ಪೈ ಅವರು ಘಟಿಕೋತ್ಸವದ ಘೋಷಣೆ ಮಾಡಿ ಜಯರತ್ನೆಯವರನ್ನು ಗೌರವಿಸಿದರು. ಸಹಕುಲಾಧಿಪತಿ ಡಾ|ಎಚ್‌.ಎಸ್‌.ಬಲ್ಲಾಳ್‌ ಸ್ವಾಗತಿಸಿ, ಕುಲಪತಿ ಡಾ|ಕೆ.ರಾಮನಾರಾಯಣ್‌ ವಿ.ವಿ. ಬೆಳೆದುಬಂದ ಬಗೆಯನ್ನು ವಿವರಿಸಿದರು. ಕೆಎಂಸಿ ಡೀನ್‌ ಡಾ| ಪ್ರದೀಪ್‌ ಕುಮಾರ್‌ ಅತಿಥಿಗಳನ್ನು ಪರಿಚಯಿಸಿದರು. ಜಿಇ ದಕ್ಷಿಣ ಏಶ್ಯಾ ಅಧ್ಯಕ್ಷ ಮತ್ತು ಸಿಇಒ ಬನ್ಮಾಲಿ ಅಗರ್‌ವಾಲ್‌ ಅವರಿಗೆ ವಿಶಿಷ್ಟ ಪ್ರಾಕ್ತನ ವಿದ್ಯಾರ್ಥಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪತ್ರವನ್ನು ಎಂಐಟಿ ನಿರ್ದೇಶಕ ಡಾ|ವಿನೋದ ಥಾಮಸ್‌ ವಾಚಿಸಿದರು. ಪದವೀಧರರ ವಿವರಗಳನ್ನು ಮೌಲ್ಯಮಾಪನ ಕುಲಸಚಿವ ಡಾ|ಪಿ.ಎಲ್‌.ಎನ್‌.ರಾವ್‌ ನೀಡಿದರು. ಸಹಕುಲಪತಿ ಡಾ|ಎಚ್‌.ವಿನೋದ ಭಟ್‌ ಪ್ರತಿಜ್ಞಾವಿಧಿ ಬೋಧಿಸಿ, ಕುಲಸಚಿವ ಡಾ|ಜಿ.ಕೆ.ಭಟ್‌ ವಂದಿಸಿದರು.

ಭದ್ರತೆ: ಶ್ರೀಲಂಕಾ ಪ್ರಧಾನಿ ಡಿ.ಎಂ. ಜಯರತ್ನೆ ಅವರಿಗೆ ವಿಶೇಷ ಭದ್ರತೆ ನೀಡಲಾಗಿತ್ತು. ಹಾಗಾಗಿ ಅವರು ಮೆರವಣಿಗೆಯಲ್ಲಾಗಲಿ, ವೇದಿಕೆಯ ಮುಂದಿನಿಂದಾಗಲಿ ಬಾರದೆ ವೇದಿಕೆಯ ಒಳಗಿಂದ ಪ್ರವೇಶಿಸಿದರು. ಅವರು ಮಣಿಪಾಲಕ್ಕೆ ಬರುವ ಸಮಯದಲ್ಲಿ ಹೋಟೆಲ್, ಲಾಡ್ಜ್ ಮತ್ತು ಹೊರಗಿನವರು ಉಳಿದುಕೊಳ್ಳಬಲ್ಲ ಎಲ್ಲ ಅಂಗಡಿ ಕಟ್ಟಡಗಳನ್ನು ಮುಚ್ಚಲಾಗಿತ್ತು. ಮಣಿಪಾಲ ವಿಶ್ವವಿದ್ಯಾಲಯ ಕಡೆಗೆ ಬರುವ ಎಲ್ಲರ ತಪಾಸಣೆ ಮಾಡಲಾಗುತ್ತಿತ್ತು.

2013, 14ನೇ ಸಾಲಿನಲ್ಲಿ ಚಿನ್ನದ ಪದಕ ಪಡೆದವರು. ಬಿಇಯಲ್ಲಿ ಪಲ್ಲವಿ ಮಾಬೆನ್, ಬಿಫಾರ್ಮ್‌ನಲ್ಲಿ ವೋರಾ ಭವಿಷ್ಯ, ಬಿಡಿಎಸ್‌ನಲ್ಲಿ ಅಲಿಶಾ ಕನೊಡಿಯ, ಬಿಎಚ್‌ಎಂನಲ್ಲಿ ಆದಿತ್ಯ ರವಿ, ಬಿಎಸ್‌ಸಿ ನರ್ಸಿಂಗ್‌ನಲ್ಲಿ ಅನಿಶಾ ಮೆಲಾನಿಯ ಮೋನಿಸ್, ಬಿಎಜೆಸಿಯಲ್ಲಿ ಶ್ರುತಿ ಆರ್.ಮೆನನ್, ಅಲೈಡ್ ಹೆಲ್ತ್ ಸೈನ್ಸ್‌ನಲ್ಲಿ ಫಾತಿಮಾ ಮೊಹಮ್ಮದಬ್ಬಾಸ್ ರಾವ್ಜಿ, ಬಿಎಸ್‌ಸಿ ಬಯೋಟೆಕ್ನಾಲಜಿಯಲ್ಲಿ ಫಾತಿಮಾ ಜಾಹ್ರ ಮೆಹಬೂಬ್ ರಶೀದ್, ಬಿಬಿಎ ಜ್ಯುವೆಲ್ಲರಿ ಡಿಸೈನ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಆಶ್ರೀತ್, ಬಿ ಆರ್ಚ್‌ನಲ್ಲಿ ದೀಪಾ ಲಿಲ್ಲಿ ಎಡ್ಮಂಡ್, ಫಾರ್ಮ್‌ಡಿಯಲ್ಲಿ ಜೆವೆಲ್ ಮರಿಯ ಫ್ರಾನ್ಸಿಸ್, ಸ್ನಾತಕೋತ್ತರ ವಿಭಾಗದಲ್ಲಿ ಎಂಫಾರ್ಮ್‌ನಲ್ಲಿ ಸಂಚಾರಿ ಬಸು ಮಲ್ಲಿಕ್, ಎಂಎಸ್ ಕಮ್ಯುನಿಕೇಶನ್‌ನಲ್ಲಿ ಹನ್ನಾ ಸ್ಮೈಲ್ಸ್ ಜಾವಜಿ, ಎಂಎಸ್ ಇನ್‌ಫಾರ್ಮೇಶನ್ ಸೈನ್ಸ್‌ನಲ್ಲಿ ಪಲಿರಿ ವೆಂಕಟ ಆದಿತ್ಯ ಹಾಗೂ ಎಂಬಿಎಯಲ್ಲಿ ಆಶೀಶ್ ವಿಶ್ವನಾಥ ಪ್ರಕಾಶ್ ಚಿನ್ನದ ಪದಕ ಪಡೆದಿದ್ದಾರೆ.

Write A Comment