ಮಂಗಳೂರು,ನ.11 : ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ನಿಷೇಧ ಮಾಡುವ ಸರಕಾರದ ಯೋಜನೆಯಲ್ಲಿ ಅಡಕೆ ಮತ್ತು ಅಡಕೆ ಉತ್ಪನ್ನಗಳನ್ನು ನಿಷೇಧಿಸುವ ಯಾವುದೇ ಪ್ರಸ್ತಾಪವಿಲ್ಲ, ಪಾನ್ ಮಸಾಲ ಮತ್ತು ಸುಗಂಧಿತ ಅಡಕೆಯನ್ನು ನಿಷೇಧಿಸುವುದಿಲ್ಲ ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಭರವಸೆ ನೀಡಿದ್ದಾರೆ.
ಕ್ಯಾಂಪ್ಕೊ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಆರೋಗ್ಯ ಸಚಿವರನ್ನು ಭೇಟಿಯಾದ ಸಂದರ್ಭದಲ್ಲಿ ಗುಟ್ಕಾ, ಜರ್ದಾ, ಕೈನಿ ಮುಂತಾದ ತಂಬಾಕು ಉತ್ಪನ್ನಗಳನ್ನು ನಿಷೇಧಿಸುವ ಪ್ರಸ್ತಾಪ ಮಂತ್ರಿಮಂಡಲದ ಮುಂದೆ ಇದೆ. ಆದರೆ ಅಡಕೆ ಬೆಳೆಗಾರರ ಹಿತಕ್ಕೆ ಧಕ್ಕೆ ಬರುವಂತಹ ಯಾವುದೇ ಕ್ರಮಗಳನ್ನು ಸರಕಾರ ಕೈಗೊಳ್ಳದು ಎಂದು ಸಚಿವರು ಸ್ಪಷ್ಟಪಡಿಸಿದರು.
ತಾಜಾ ತಂಬಾಕನ್ನು ಅಡಕೆ ಮತ್ತು ವೀಳ್ಯದೆಲೆಯೊಂದಿಗೆ ಜಗಿಯುವುದು ಪರಂಪರಾಗತವಾಗಿ ಬಂದಿರುವುದರಿಂದ ತಾಜಾ ತಂಬಾಕನ್ನು ನಿಷೇಧಿಸಬಾರದೆಂದು ಆಗ್ರಹಪಡಿಸಿದರು. ಅಲ್ಲದೆ ತಾಜಾ ತಂಬಾಕು ನಿಷೇಧದಿಂದ ಸಾವಿರಾರು ಪಾನ್ವಾಲಾಗಳ ಜೀವನ ನಿರ್ವಹಣೆಗೆ ಧಕ್ಕೆ ಆಗುವುದೆಂದು ಸಚಿವರಿಗೆ ಮನವರಿಕೆ ಮಾಡಿದರು.
ಈ ಬಗ್ಗೆ ಸಚಿವರು ಸೂಕ್ತ ಪರಿಶೀಲನೆ ನಡೆಸುವುದಾಗಿ ತಿಳಿಸಿದರಲ್ಲದೆ, ಸುಗಂಧಿತ ತಂಬಾಕು ನಿಷೇಧದಿಂದ ಅಡಕೆ ಬೆಳೆಗಾರರು ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯವಿಲ್ಲವೆಂದು ತಿಳಿಸಿದರು.
ಕ್ಯಾಂಪ್ಕೊ ನಿಯೋಗದಲ್ಲಿ ಸಂಸ್ಥೆಯ ಅಧ್ಯಕ್ಷರ ಜತೆಗೆ ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ ಮತ್ತು ದಕ್ಷಿಣ ಕನ್ನಡ ಸಹಕಾರಿ ಒಕ್ಕೂಟದ ಅಧ್ಯಕ್ಷ ಹರೀಶ್ ಆಚಾರ್ ಉಪಸ್ಥಿತರಿದ್ದರು.