ಕುಂದಾಪುರ: ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾರದ ಹಿಂದೆ ಬ್ರಾಹ್ಮಣ ಮನೆತನದ ಗೃಹಿಣಿಯ ಜೊತೆ ಪರಾರಿಯಾಗಿ ಸೋಮವಾರ ಕುಂದಾಪುರ ಠಾಣೆಗೆ ಹಾಜರಾಗಿದ್ದ ಅನ್ಯಮತೀಯ ಯುವಕನ ಮನೆಗೆ ಸ್ಥಳೀಯರ ಗುಂಪೊಂದು ಬೆಂಕಿ ಹಚ್ಚಲು ಯತ್ನ ನಡೆಸಿದ ಘಟನೆ ಮಂಗಳವಾರ ನಸುಕಿನ ಜಾವ ಬೆಳಕಿಗೆ ಬಂದಿದೆ. ಸ್ಥಳೀಯರ ಮಾಹಿತಿಯ ಮೇರೆಗೆ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಘಟನೆಯ ವಿವರ: ಅಮಾಸೆಬೈಲು ನಿವಾಸಿ ಮಧುರಾ(24) ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಈಕೆಯನ್ನು ಸರ್ಫರಾಜ್(28) ಎಂಬಾತ ಕರೆದೊಯ್ದಿದ್ದಾನೆ, ಇದೊಂದು ಲವ್ ಜಿಹಾದ್ ಕೃತ್ಯ ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿತ್ತು.
ಪೊಲೀಸರು ತನಿಖೆ ನಡೆಸಿ ಜೋಡಿಯನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ಸೋಮವಾರ ಠಾಣೆಗೆ ಕರೆದುಕೊಂಡು ಬಂದಿದ್ದರು. ಮಹಿಳೆ ಗಂಡನ ಮನೆಗೆ ಹೋಗಲು ನಿರಾಕರಿಸಿದ್ದು, ಕೊನೆಗೆ ಪೊಲೀಸರು ಕುಂದಾಪುರದ ಮಹಿಳಾ ಠಾಣೆಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯದಲ್ಲಿ ನ್ಯಾಯಾಧೀಶರು ಆಕೆಯನ್ನು ಪ್ರತ್ಯೇಕವಾಗಿ ಕರೆದು ಹೇಳಿಕೆ ಪಡೆದುಕೊಂಡಿದ್ದು, ಆಕೆ ಗಂಡನ ಮನೆಗೂ , ಯುವಕನ ಜೊತೆಗೂ ಹೋಗಲೊಪ್ಪದೆ ಇದ್ದ ಕಾರಣಕ್ಕೆ ಆಕೆಯ ಮನೆಯವರ ಜೊತೆಗೆ ಕಳುಹಿಸಿಕೊಡಲಾಗಿತ್ತು.
ಘಟನೆಯ ಬಳಿಕ ಅಮಾಸೆಬೈಲು ಸುತ್ತಮುತ್ತ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಸರ್ಫರಾಜ್ ಮನೆಯವರು ಮನೆ ತೊರೆದು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಮಂಗಳವಾರ ನಸುಕಿನ ಜಾವ ಸರ್ಫರಾಜ್ ಮನೆಯ ಸುತ್ತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಮಸೀದಿಗೆ ನಮಾಝ್ಗೆಂದು ತೆರಳುವ ವೇಳೆ ಸ್ಥಳೀಯರು ಇದನ್ನು ಗಮನಿಸಿ ಕೂಡಲೇ ಅಮಾಸೆಬೈಲು ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಸ್ಥಳಕ್ಕೆ ಕಂದಾಪುರ ವ್ರತ್ತನಿರೀಕ್ಷಕ ದಿವಾಕರ ಮೊದಲಾದವರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.