ಕರಾವಳಿ

ಮಕ್ಕಳ ಮತ್ತು ಮಹಿಳೆಯರ ದೌರ್ಜನ್ಯದ ವಿರುದ್ಧ ಮುಕ್ತ ಸಂವಾದ .

Pinterest LinkedIn Tumblr

prajna_council_photos_1

ಮಂಗಳೂರು, ನ. 12: ಹಾಡು ಹಾಗೂ ನೃತ್ಯದ ಮೂಲಕ ಮಕ್ಕಳ ಹಕ್ಕುಗಳ ಮೇಲೆ ಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ರಮವೊಂದನ್ನು ನಗರದ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನಲ್ಲಿ ನಡೆಸಲಾಯಿತು.

ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಸಬಲೀಕರಣದೆಡೆಗೆ ಪ್ರಜ್ಞಾದ ದಿಟ್ಟ ಹೆಜ್ಜೆಗಳು ಎಂಬ ಜಿಲ್ಲಾಡಳಿತದ ಮುಖ್ಯಸ್ಥರೊಂದಿಗೆ ಫಲಾನುಭವಿಗಳ ಮುಕ್ತ ಸಂವಾದದಲ್ಲಿ ರಾಣಿಪುರ ಶಾಲೆಯ ವಿದ್ಯಾರ್ಥಿಗಳು ಮಕ್ಕಳ ಹಕ್ಕುಗಳ ಬಗ್ಗೆ ವಿಶೇಷ ಗಮನವನ್ನು ಹಾಡಿನ ಮೂಲಕ ಜನರ ಮನ ಸೆಳೆದರು. ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಬಂಟ್ವಾಳ ಮತ್ತು ಮಂಗಳೂರಿನ 25 ಶಾಲೆಗಳಲ್ಲಿ ಸಮಿತಿಗಳನ್ನು ರಚಿಸಿರುವುದಾಗಿ ತಮ್ಮ ಕಿರು ಪ್ರಹಸನದ ಮೂಲಕ ವ್ಯಕ್ತ ಪಡಿಸಿದ ಮಕ್ಕಳು, ಅವರು ಅನುಭವಿಸುತ್ತಿರುವಂತಹ ಸಮಸ್ಯೆಗಳನ್ನು ಗ್ರಾ.ಪಂ. ಅಧ್ಯಕ್ಷರ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.

prajna_council_photos_4prajna_council_photos_2

ಕಾರ್ಯಕ್ರಮದಲ್ಲಿ ವಿವಿಧ ರೀತಿಯ ದೌರ್ಜನ್ಯಕ್ಕೊಳಗಾಗಿ ಪ್ರಜ್ಞಾ ಸಲಹಾ ಕೇಂದ್ರದಿಂದ ಹೊಸ ಬದುಕು ರೂಪಿಸಿಕೊಂಡ ಮಹಿಳೆಯರು, ಮಕ್ಕಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಬಾಲ ಕಾರ್ಮಿಕೆಯಿಂದ ಹಿಡಿದು ಅನಿಮೇಶನ್ ವರೆಗೆ ‘‘ನನಗೆ ಓದಬೇಕೆಂಬ ಹಂಬಲವಿದ್ದರೂ, ಮನೆಯಲ್ಲಿನ ಬಡತನದಿಂದಾಗಿ ನನ್ನ ತಾಯಿ ನನ್ನನ್ನು ಚಿಕ್ಕಮಂಗಳೂರಿನ ಮನೆಯೊಂದರಲ್ಲಿ ಮನೆ ಕೆಲಸಕ್ಕೆ ಸೇರಿಸಿದ್ದರು. ಅಲ್ಲಿ ಮನೆ ಮಾಲಕರ ಹಿಂಸೆ ತಾಳಲಾರದೆ ಮಂಗಳೂರಿನ ಮನೆಯೊಂದಕ್ಕೆ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿಂದ ತಪ್ಪಿಸಿಕೊಂಡು ಪ್ರಜ್ಞಾಕ್ಕೆ ಸೇರುವಂತಾಯಿತು. ಅಲ್ಲಿ ನನ್ನ ಚಿತ್ರಕಲೆಯ ಹವ್ಯಾಸವನ್ನು ಕಂಡ ಗೀತಾ ಮೇಡಂ ನನಗೆ ಕಂಪ್ಯೂಟರ್‌ನಲ್ಲಿ ಅನಿಮೇಶನ್ ಕಲಿಯಲು ಪ್ರೋತ್ಸಾಹಿಸಿದರು’’ ಎಂದು ಮುಬೀನಾ ಎಂಬವರು ತಮ್ಮ ಅನುಭವ ಹಂಚಿಕೊಂಡರು.

prajna_council_photos_3

prajna_council_photos_5

ಸರ್ವ ಶಿಕ್ಷಾ ಅಭಿಯಾನ ಮತ್ತು ಪ್ರಜ್ಞಾ ಸಲಹಾ ಕೇಂದ್ರದಡಿ ಕಾರ್ಯಾಚರಿಸುತ್ತಿರುವ ಚಿಣ್ಣರ ತಂಗುಧಾಮದ ವೀಣಾ ಮಾತನಾಡಿ, ತಂಗುಧಾಮವು 270 ಮಕ್ಕಳನ್ನು ಹೊಂದಿದ್ದು, 30 ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. 117 ಮಕ್ಕಳನ್ನು ತಂಗುಧಾಮದ ಮೂಲಕ ಶಾಲೆಗೆ ಹೋಗುತ್ತಿದ್ದಾರೆ ಎಂದು ತಿಳಿಸಿದರು. ಸರಕಾರದ ಯೋಜನೆಗಳನ್ನು ಸರಕಾರದ ಮೂಲಕ ಜಾರಿಗೆ ತರುವಲ್ಲಿ ಹಲವಾರು ಮಾನದಂಡಗಳಿರುತ್ತವೆ. ಆದರೆ ಸರಕಾರೇತರ ಸಂಸ್ಥೆಗಳು ಈ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗಿದ್ದು, ಪ್ರಜ್ಞಾ ಸಲಹಾ ಕೇಂದ್ರ ಆ ನಿಟ್ಟಿನಲ್ಲಿ ಉತ್ತಮ ಕಾರ್ಯ ನಡೆಸುತ್ತಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅಭಿಪ್ರಾಯಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಗಣೇಶ್ ಮಾತನಾಡಿದರು. ಪ್ರಜ್ಞಾ ಸಲಹಾ ಕೇಂದ್ರ ಹಿಲ್ಡಾ ರಾಯಪ್ಪನ್, ವಾಸುದೇವ ಕಾಮತ್ ಉಪಸ್ಥಿತರಿದ್ದರು. ಧನಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

Write A Comment