ಮಂಗಳೂರು,ನ.12: ತನ್ನ ಕೆಳಗಿನ ಅಧಿಕಾರಿಣಿಯ ಜೊತೆ ಅಶ್ಲೀಲವಾಗಿ ಮಾತನಾಡಿ ಆಕೆಯನ್ನು ಬೆಡ್‍ಗೆ ಕರೆದಿರುವ ಆರೋಪ ಎದುರಿಸುತ್ತಿದ್ದ ಎಸಿಪಿ ಜಗನ್ನಾಥ್ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ತಮ್ಮ ಮೇಲಿನ ಆರೋಪ ಮೇಲ್ನೋಟಕ್ಕೆ ಸಾಬೀತುಗೊಂಡಿರುವ ಕಾರಣ ಪ್ರಕರಣದ ವಿಚಾರಣೆಗಾಗಿ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಮೂರನೇ ಜೆಎಂಎಫ್‍ಸಿ ನ್ಯಾಯಾಲಯ ತಿಳಿಸಿದೆ.
ತೀವ್ರ ಕೆಲಸದ ಒತ್ತಡದ ನಡುವೆಯೂ ಒಂದೇ ಒಂದು ರಜೆಯನ್ನು ಮಂಜೂರು ಮಾಡದೆ, ರಾತ್ರಿ ಪಾಳಿಯ ಕೆಲಸಕ್ಕೆ ನಿರಂತರವಾಗಿ ನೇಮಿಸಿ ಮಾನಸಿಕ ಕಿರುಕುಳ ನೀಡಿದಲ್ಲದೆ ತನ್ನ ಜೊತೆ ಅಶ್ಲೀಲವಾಗಿ ಮಾತ ನಾಡಿ ಮಂಚಕ್ಕೆ ಕರೆದಿರುವುದಾಗಿ ಆರೋಪಿಸಿ ಎಎಸ್‍ಐ ಶ್ರೀಕಲಾ ಅವರು, ಎಸಿಪಿ ಜಗನ್ನಾಥ್ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸ್ ಆಯುಕ್ತರು ತಂಡ ವೊಂದನ್ನು ರಚಿಸಿ ಪ್ರಕರಣದ ವಿಚಾರಣೆಯನ್ನು ಅವರಿಗೆ ವರ್ಗಾಯಿಸಿದ್ದರು. ಆದರೆ ಈ ತನಿಖಾ ತಂಡ ಸರಿಯಾಗಿ ವಿಚಾರಣೆಯನ್ನು ನಡೆಸದೆ, ಎಎಸ್‍ಐ ಅವರು ಆರೋಪಿಸಿದಂತೆ ನಡೆದಿಲ್ಲ ಎಂದು ತಿಳಿಸಿತ್ತು ಎಂದು ದೂರಿ ಶ್ರೀಕಲಾ ಅವರು ಮೂರನೇ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.
ನ್ಯಾಯಾಲಯ ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಮಹಿಳಾ ಠಾಣಾ ಇನ್ಸ್‍ಪೆಕ್ಟರ್ ಕಲಾವತಿ ಅವರಿಗೆ ಆದೇಶಿಸಿತ್ತು. ನ್ಯಾಯಾಲಯದ ನಿರ್ದೇ ಶನದಂತೆ ದೂರು ದಾಖಲಿಸಿಕೊಂಡ ಕಲಾವತಿ ಅವರು, ಎಸಿಪಿಯನ್ನು ವಿಚಾರಣೆ ಮಾಡುವ ಗೋಜಿಗೆ ಹೋಗದೆ ನ್ಯಾಯಾಲಯಕ್ಕೆ `ಬಿ’ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ಸಂತ್ರಸ್ತೆ ಶ್ರೀಕಲಾ ಅವರು, ತನ್ನ ಆರೋಪಕ್ಕೆ ಪೂರಕವಾದ ಸಾಕ್ಷಿ ಒದಗಿಸಿದ್ದರು. ಸಾಕ್ಷಿಯನ್ನು ಪರಿಶೀಲಿಸಿದ ನ್ಯಾಯಾಲಯ ಕಲಾವತಿ ಅವರ ವರದಿಯನ್ನು ತಳ್ಳಿ ಹಾಕಿದ್ದು ಎಸಿಪಿ ಮೇಲಿನ ಆರೋಪ ಮೇಲ್ನೋಟಕ್ಕೆ ಸತ್ಯ ಎಂದು ಕಂಡು ಬಂದಿರುವ ಕಾರಣ ಕೂಡಲೇ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಇದರ ಜೊತೆ ರೈಟ್ರ್ ಮೋಹನ್ ಎಂಬವರಿಗೂ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.
ನ್ಯಾಯಾಲಯ ಸಮನ್ಸ್ ಜಾರಿ ಮಾಡಿರುವ ಕಾರಣದಿಂದ ಎಸಿಪಿ ಜಗನ್ನಾಥ್ ಖುದ್ದು ನ್ಯಾಯಾಲಯಕ್ಕೆ ಹಾಜರಾಗಲೇ ಬೇಕಿದ್ದು ಇಲ್ಲವಾದಲ್ಲಿ ಬಂಧನ ವಾರೆಂಟ್ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.