ಮಂಗಳೂರು, ನ.14: ನಂದಿತಾ ಪ್ರಕರಣವು ಆರಂಭದಲ್ಲೇ ಹಲವು ಗೊಂದಲಗಳಿಗೆ ಕಾರಣವಾಗಿದೆ. ಪ್ರಕರಣದ ಬಗ್ಗೆ ದೂರು ನೀಡುವಲ್ಲಿ ತಡವಾಗಿದೆ. ವೈದ್ಯಕೀಯ ತಪಾಸಣೆಯಲ್ಲೂ ನ್ಯೂನತೆಗಳಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಪ್ರಕರಣದ ಕುರಿತಂತೆ ರಾಜಕೀಯ ಹಸ್ತಕ್ಷೇಪವೂ ಇರುವುದು ತೋರುತ್ತಿರುವುದರಿಂದ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಮೂಲಕ ಸತ್ಯಾಂಶ ಹೊರ ಬರಲು ಸಾಧ್ಯ ಎಂದು ನ್ಯಾಯಮೂರ್ತಿ ಡಾ. ಸಂತೋಷ್ ಹೆಗ್ಡೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ದಿನೇಶ್ ಗುಂಡೂರಾವ್ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯಿಸಿದ ನ್ಯಾ. ಸಂತೋಷ್ ಹೆಗ್ಡೆ, ಭೂ ಹಗರಣದ ಕುರಿತಂತೆ ರಾಜ್ಯದ ಕೆಲ ಮಂತ್ರಿಗಳ ವಿರುದ್ಧ ಆರೋಪ ಕೇಳಿ ಬಂದಿದೆ. ಕಂದಾಯ ಅಧಿಕಾರಿಗಳೇ ಆರೋಪಗಳಲ್ಲಿ ಸತ್ಯಾಂಶವಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಸಂಶಯದ ಮೇಲೆ ಕೋರ್ಟ್ ತೀರ್ಪು ನೀಡುವುದಿಲ್ಲ. ಆರೋಪ ಸಾಬೀತಾಗಬೇಕಾಗಿದೆ. ಹಾಗಾಗಿ ಪ್ರಕರಣವನ್ನು ಲೋಕಾಯುಕ್ತಕ್ಕೆ ಒಪ್ಪಿಸುವುದು ಸೂಕ್ತ. ಈ ನಡುವೆ ಆರೋಪಕ್ಕೊಳಗಾಗಿರುವ ಮಂತ್ರಿಗಳು ತಾವಾಗಿಯೇ ಅಧಿಕಾರದಿಂದ ಹೊರಬಂದು ತನಿಖೆಗೆ ಅವಕಾಶ ನೀಡಿದರೆ ಸೂಕ್ತ ಎಂದವರು ಹೇಳಿದರು.