ಮಂಗಳೂರು, ನ.20 : ಜನವಸತಿ ಪ್ರದೇಶವಾದ ಪಾವೂರು ಉಳಿಯ ದ್ವೀಪದ ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಸ್ಥಳೀಯರ ಆರೋಪವಿಂದು ವಿಧಾನ ಪರಿಷತ್ ಸದಸ್ಯ ಹಾಗೂ ಅಧಿಕಾರಿಗಳ ಕಣ್ಣೆದುರಲ್ಲೇ ಸಾಬೀತಾಗಿದೆ. ಅಕ್ರಮ ಮರಳುಗಾರಿಕೆಯಿಂದಾಗಿ ಜನ ಸಾಮಾನ್ಯರಿಗೆ ದ್ವೀಪದ ಸುತ್ತ ಭಯದ ವಾತಾ ವರಣ ಸೃಷ್ಟಿಯಾಗಿದೆ.
ಜಿಲ್ಲಾಧಿಕಾರಿ ಆದೇಶದ ಹೊರತಾಗಿಯೂ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಸ್ಥಳೀಯರ ಆರೋಪದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಂಗಳೂರು ತಹಶೀಲ್ದಾರರ ಜೊತೆಯಲ್ಲಿ ಪಾವೂರು ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಪಾವೂರು ಉಳಿಯ ದ್ವೀಪಕ್ಕೆ ಇಂದು ಭೇಟಿ ನೀಡಿದ್ದರು. ಆ ಸಂದರ್ಭ 10ಕ್ಕೂ ಅಧಿಕ ಮರಳು ತುಂಬಿದ ದೋಣಿಗಳಲ್ಲಿ ನೂರಾರು ಕಾರ್ಮಿಕರು ತರಾತುರಿಯಲ್ಲಿ ಜಾಗ ಖಾಲಿ ಮಾಡಿ ತೆರಳುವ ದೃಶ್ಯ ಕಂಡು ಬಂತು. ಜೊತೆಯಲ್ಲಿದ್ದ ಅಧಿಕಾರಿಗಳು ಈ ಘಟನೆಗೆ ಮೂಕ ಸಾಕ್ಷಿಯಾಗಿದ್ದು ಮಾತ್ರ ವಿಶೇಷ.
ಅಡ್ಯಾರ್ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ಪಕ್ಕದ ರಸ್ತೆಯಿಂದ ಕೊಂಚ ಸಾಗಿದಾಗ ನಾಲ್ಕು ಸುತ್ತಲೂ ನೇತ್ರಾವತಿ ನದಿ ನೀರಿನಿಂದ ಆವೃತವಾಗಿರುವ ಪಾವೂರು ಉಳಿಯ ದ್ವೀಪ ಕಾಣುತ್ತದೆ. ಇಲ್ಲಿಗೆ ತಲುಪಲು ದೋಣಿಯ ಮೂಲಕವೇ ಪ್ರಯಾಣಿಸಬೇಕು. ಸುಮಾರು 50ರಷ್ಟು ಕುಟುಂಬಗಳ 200ಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಈ ದ್ವೀಪ ಪ್ರದೇಶವದು.
ಈ ಸಮಯದಲ್ಲಿ ಹಲವಾರು ದೋಣಿಗಳಲ್ಲಿ ಮರಳು ತುಂಬಿಸುವ ಕಾಯಕ ನಡೆಯುತ್ತಿತ್ತು. ಐವನ್ ಬಳಿಯಲ್ಲಿ ಬಂದ ಮರಳು ವ್ಯಾಪಾರಿಗಳು ಐವನ್ ಡಿಸೋಜರಿಗೆ ಸಮಜಾಯಿಷಿ ನೀಡಲೆತ್ನಿಸಿದ್ದರು. ಸಹನೆಯ ಕಟ್ಟೆಯೊಡೆದಿದ್ದ ಸ್ಥಳೀಯರು ‘‘ನಮಗೆ ವಿಷ ನೀಡಿ ನೀವು ಮರಳುಗಾರಿಕೆ ನಡೆಸಿ’’ ಎಂದು ಮರಳು ವ್ಯಾಪಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘‘ನಮಗೆ ಬದುಕೇ ಇಲ್ಲವಾಗಿದೆ. ಹಿಂದೆ ಮೀನುಗಾರಿಕೆ, ಕೃಷಿಯ ಮೂಲಕ ಜೀವನ ಸಾಗಿ ಸುತ್ತಿದ್ದ ನಮಗೆ ಇಂದು ಈ ಅವ್ಯಾಹತವಾದ ಮರಳುಗಾರಿಕೆಯಿಂದ ನದಿ ವಿಸ್ತಾರವಾಗುತ್ತಿದೆ.
ದ್ವೀಪದ ಸುತ್ತ ಮರಳುಗಾರಿಕೆಗೆ ಪರವಾನಿಗೆ ಇಲ್ಲ. ಪ್ರಸ್ತುತ ನಡೆಯುತ್ತಿರುವುದು ಅಕ್ರಮ ಮರಳುಗಾರಿಕೆ ಎಂಬುದನ್ನು ಒಪ್ಪಿಕೊಂಡ ಸ್ಥಳದಲ್ಲಿ ಉಪಸ್ಥಿತರಿದ್ದ ತಹಶೀಲ್ದಾರ್ ಮೋಹನ್ ರಾವ್, ದ್ವೀಪದ ಸುತ್ತಲಿನ 1,000 ಮೀಟರ್ ವ್ಯಾಪ್ತಿಯಲ್ಲಿ ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಬೇಕಾಗಿದೆ. ಈ ಹಿಂದೆಯೂ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದ ಸಂದರ್ಭ ಇಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿತ್ತು. ದೋಣಿಗಳಲ್ಲಿ ಸಾಗುತ್ತಿದ್ದವರನ್ನು ಹಿಡಿಯುವ ವ್ಯವಸ್ಥೆ ನಮ್ಮಲ್ಲಿ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಮುಂದಿನ ರವಿವಾರ ನ.23 ರಂದು ಪೂರ್ವಾಹ್ನ 11 ಗಂಟೆಗೆ ದ್ವೀಪಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ ಎಂದು ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಐವನ್ ಡಿಸೋಜ, ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ನಾನು ಚರ್ಚಿಸುವುದಾಗಿ ಹೇಳಿದರಲ್ಲದೆ, ತಕ್ಷಣ ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.
‘‘ನನ್ನ ಕಣ್ಣೆದುರಲ್ಲೇ ಮರಳು ಉದ್ಯಮಿಗಳು ಸ್ಥಳೀಯರೊಂದಿಗೆ ತೋಳ್ಬಲ ಪ್ರದರ್ಶಿಸಿರುವುದು ನಡೆದಿದೆ. ಮರಳಿನ ಅಗತ್ಯವಿದೆ. ಆದರೆ ಅದು ಕಾನೂನು ಚೌಕಟ್ಟಿನಲ್ಲಿ ನಡೆಯಬೇಕು. ತೋಳ್ಬಲದ ಮೂಲಕ ಅಲ್ಲ. ಈ ಬಗ್ಗೆ ಸ್ಥಳೀಯ ಶಾಸಕ ಹಾಗೂ ಸಚಿವರಾದ ಯು.ಟಿ.ಖಾದರ್ ಜೊತೆಗೂ ಮಾತುಕತೆ ನಡೆಸಿದ್ದು, ಅಕ್ರಮ ಮರಳುಗಾರಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’’ ಎಂದು ಸ್ಥಳೀಯರಿಗೆ ಭರವಸೆ ನೀಡಿದರು.
ದ್ವೀಪದ ಸುತ್ತ ನಡೆಯುತ್ತಿರುವ ಮರಳುಗಾರಿಕೆಯನ್ನು ದೋಣಿಯ ಮೂಲಕ ವೀಕ್ಷಿಸಿದ ಐವನ್ ಡಿಸೋಜ ದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಇನ್ಫೆಂಟ್ ಜೀಸಸ್ ಚಾಪೆಲ್ನಲ್ಲಿ ಸ್ಥಳೀಯರ ಬೇಡಿಕೆಗಳನ್ನು ಆಲಿಸಿದರು. ಬೇಸಿಗೆಯ ಸಂದರ್ಭ ಬಾವಿಗಳಲ್ಲಿ ಉಪ್ಪು ನೀರು ಬರುತ್ತಿದ್ದು, ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ. ತೂಗುಸೇತುವೆ ನಿರ್ಮಾಣದ ಕನಸು ಇನ್ನೂ ಈಡೇರಿಲ್ಲ. ವಿದ್ಯುತ್ ಕಡಿತವಾದರೆ ಒಂದು ವಾರದವರೆಗೂ ಸಂಪರ್ಕ ಇರುವುದಿಲ್ಲ. ಮರಳುಗಾರಿಕೆ ಸಮಸ್ಯೆ ನಮ್ಮನ್ನು ತೀವ್ರವಾಗಿ ಕಾಡುತ್ತಿದೆ ಎಂದು ಸ್ಥಳೀಯರು ಹೇಳಿದರು.
ತೂಗುಸೇತುವೆಗೆ ಈಗಾಗಲೇ ಒಂದೂವರೆ ಕೋಟಿ ರೂ. ಮಂಜೂರಾಗಿರುವುದಾಗಿ ತಿಳಿದು ಬಂದಿದೆ. ಉಳಿದಂತೆ ಸ್ಥಳೀಯರು ಬಯಸುವಂತೆ ದ್ವೀಪದ ಅಭಿವೃದ್ಧಿ ಕಾಮಗಾರಿಗಾಗಿ ತಮ್ಮ ಶಾಸಕರ ನಿಧಿಯಿಂದ 5 ಲಕ್ಷ ರೂ.ಗಳನ್ನು ಒದಗಿಸುವುದಾಗಿ ಹೇಳಿದರು. ಪ್ರಸ್ತುತ ಖಾಲಿಯಾಗಿರುವ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಅಂಗನವಾಡಿ ಆರಂಭಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಲಾಗುವುದು. ಮತದಾನದ ವೇಳೆ ಸ್ಥಳೀಯ ಮತದಾರರಿಗೆ ಅನುಕೂಲವಾಗುವಂತೆ ದ್ವೀಪದಲ್ಲಿ ಮತದಾನ ಕೇಂದ್ರ ತೆರೆಯುವ ನಿಟ್ಟಿನಲ್ಲಿ ಸಂಬಂಧಪಟ್ಟವರ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು. ಜಿ.ಪಂ. ಸದಸ್ಯ ಮೆಲ್ವಿನ್ ಡಿಸೋಜ, ನಝೀರ್ ಬಜಾಲ್, ಚೇತನ್ ಕುಮಾರ್, ಅರುಣ್ ಕ್ರಾಸ್ತಾ ಹಾಗೂ ಸ್ಥಳೀಯರು ಈ ಸಂದರ್ಭ ಉಪಸ್ಥಿತರಿದ್ದರು.