ಮಂಗಳೂರು,ನ.20 : ಶರವು ಶ್ರೀ ಮಹಾಗಣಪತಿ ದೇವರ 145ನೇ ದೀಪಾರಾಧನೆ ಉತ್ಸವ ಅಂಗವಾಗಿ ಬಳ್ಳಾಲ್‌ಬಾಗ್ ಹಾಗೂ ಮಣ್ಣಗುಡ್ಡೆ ಗುರ್ಜಿ ದೀಪೋತ್ಸವವು ಬುಧವಾರ ರಾತ್ರಿ ಬಹಳ ವಿಜೃಭಂಣೆಯಿಂದ ಜರಗಿತು. ಸಾವಿರಾರೂ ಮಂದಿ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಗಣಪತಿ ದೇವರ ಪ್ರಸಾದ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಮಣ್ಣಗುಡ್ಡೆ ಗುರ್ಜಿ ಸಮಿತಿ ವತಿಯಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮಣ್ಣಗುಡ್ಡೆಯಲ್ಲಿ ನಡೆಯಿತು. ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜಿನ ನಿರ್ದೇಶಕಿ ವಿಜಯಲಕ್ಷ್ಮೀ ಆರ್.ರಾವ್ ಭಜನಾ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ನಾನಾ ಭಜನಾ ಮಂಡಳಿಯಿಂದ ಭಜನೆ ನಡೆಯಿತು.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ನಿಕಟಪೂರ್ವ ಆಡಳಿತ ನಿರ್ದೇಶಕ ಡಾ.ಎಂ.ನರೇಂದ್ರ ನಾಯಕ್ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು. ಕಲಾವಿದ ಸಿತಾರ್‌ಶ್ರೀ ಕೊಚ್ಚಿಕಾರ್ ದೇವದಾಸ್ ಪೈ ಅವರಿಂದ ಕರ್ನಾಟಿಕಿ, ಹಿಂದೂಸ್ಥಾನಿ ಭಜನ್ಸ್ ಮತ್ತು ಅಭಂಗ್‌ವಾಣಿ ನಡೆಯಿತು. ಶ್ರೀಕಾಂತ್ ನಾಯಕ್ ಪುತ್ತೂರು ಅವರು ತಬಲಾ ಮತ್ತು ಉದಯ ಕುಮಾರ್ ಕಿಣಿ ರಿದಂನಲ್ಲಿ ಸಹಕರಿಸಿದರು.
ಸಭಾ ಕಾರ್ಯಕ್ರಮದಲ್ಲಿ ಹಿಮಾಲಯದಲ್ಲಿ ಸೈಕಲ್ ಪ್ರವಾಸ ಕೈಗೊಂಡ ನಾಗೇಶ್ ರಾವ್ ಹಾಗೂ ಟೀಂ ಮಂಗಳೂರು ತಂಡವನ್ನು ಸನ್ಮಾನಿಸಲಾಯಿತು. ಸುರತ್ಕಲ್ ಎನ್‌ಐಟಿಕೆಯ ನಿವೃತ್ತ ಡೀನ್ ಡಾ.ಬಿ.ಆರ್.ಸಾಮಗ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ನಿಕಟಪೂರ್ವ ಆಡಳಿತ ನಿರ್ದೇಶಕ ಡಾ.ಎಂ.ನರೇಂದ್ರ ನಾಯಕ್, ಕರ್ಣಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ಎಂ.ರಾಘವೇಂದ್ರ ಭಟ್ ಉಪಸ್ಥಿತರಿದ್ದರು.
ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಕಾರ್ಯಾಧ್ಯಕ್ಷ ಬಿ.ವಾಸುದೇವ ರಾವ್, ಉಪಾಧ್ಯಕ್ಷ ನಾಗೇಂದ್ರ ಟಿ.ಎ., ಕಾರ್ಯದರ್ಶಿ ಪಿ.ಭಾರ್ಗವ ತಂತ್ರಿ, ಮಹಿಳಾ ಘಟಕದ ಅಧ್ಯಕ್ಷೆ ಭಾನುಮತಿ ಎಸ್.ಕುಮಾರ್ ಪಾಲ್ಗೊಂಡಿದ್ದರು. ಉಪಾಧ್ಯಕ್ಷ ರಮಾನಂದ ಪಾಂಗಳ್ ಸ್ವಾಗತಿಸಿದರು. ಶ್ರೀ ಎಸ್.ಉಪಾಧ್ಯಾಯ ಪ್ರಾರ್ಥಿಸಿದರು. ಜತೆ ಕಾರ್ಯದರ್ಶಿ ರಾಜೇಂದ್ರ ಕಲ್ಬಾವಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ಕಲಾವಿದರ ಕೂಡುವಿಕೆಯಿಂದ ಸೂರಿಕುಮೇರಿ ಗೋವಿಂಧ ಭಟ್ ನಿರ್ದೇಶನದಲ್ಲಿ ತೆಂಕುತಿಟ್ಟು ಯಕ್ಷಗಾನದ ಪಾರಂಪರಿಕ ವೈಭವ ಸಂಪೂರ್ಣ ಪೂರ್ವರಂಗ ಪ್ರದರ್ಶನ ನಡೆಯಿತು.