ಕುಂದಾಪುರ: ಸಮಾಜದ ಶಾಂತಿ ಕದಡುವ ಮನೋಭಾವ ಹೊಂದಿರುವ ಕೆಲವು ವ್ಯಕ್ತಿಗಳು ನೀಡುವ ಪ್ರಚೋದನಾತ್ಮಕ ಹೇಳಿಕೆಗಳು ಹಾಗೂ ಸಂದೇಶಗಳಿಂದಾಗಿ ನೆಮ್ಮದಿಯ ವಾತಾವರಣಕ್ಕೆ ಧಕ್ಕೆ ತರುವಂತಹ ಘಟನೆಗಳೀಗೆ ಅವಕಾಶ ನೀಡದೆ ಶಾಂತಿ ಕಾಪಾಡುವಂತೆ ಗಂಗೊಳ್ಳಿಯ ನಾಗರೀಕರಿಗೆ ಮನವಿ ಮಾಡುವುದಾಗಿ ರಾಜ್ಯದ ಪ್ರಸಾರ ಹಾಗೂ ಮಾಹಿತಿ ಸಚಿವ ಆರ್.ರೋಶನ್ ಬೇಗ್ ನುಡಿದರು.
ಭಾನುವಾರ ಸಂಜೆ ಭಟ್ಕಳಕ್ಕೆ ಹೋಗುವ ದಾರಿಯಲ್ಲಿ ಕುಂದಾಪುರದ ಅರಣ್ಯ ಇಲಾಖೆಯ ಪ್ರವಾಸಿ ಬಂದಿರದಲ್ಲಿ ಮುಸ್ಲಿಂ ಮುಖಂಡರ ನಿಯೋಗದೊಂದಿಗೆ ಮಾತುಕತೆ ನಡೆಸಿದ ಅವರು ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಸಾಮಾಜಿಕ ತಾಣಗಳ ಹಾಗೂ ಮೊಬೈಲ್ ಸಂದೇಶಗಳ ಮೂಲಕ, ಪ್ರಚೋದನೆಗಳು ಸೃಷ್ಟಿಯಾಗುತ್ತಿದೆ. ಧಾರ್ಮಿಕ ಶೃದ್ದೆಯ ಸ್ಥಾನಗಳನ್ನು ಆಕ್ರಮಿಸುತ್ತಿರುವ, ಇವುಗಳ ನಿಯಂತ್ರಣದ ಬಗ್ಗೆ ಈಗಾಗಲೆ ಕೇಂದ್ರ ಸರ್ಕಾರದ ಪ್ರಮುಖರೊಂದಿಗೆ ಮಾತುಕತೆ ನಡೆಸಲಾಗಿದೆ. ಸದ್ಯದಲ್ಲಿಯೇ ಕೇಂದ್ರ ಸಚಿವ ಜೇಟ್ಲಿಯವರನ್ನು ಭೇಟಿ ಮಾಡಿ ಇದರ ದುರ್ಬಳಿಕೆಯನ್ನು ಕಾನೂನು ಮೂಲಕ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಕೇಂದ್ರದಲ್ಲಿ ಪತ್ರಿಕಾ ಭವನದ ನಿರ್ಮಾಣಕ್ಕಾಗಿ ಪತ್ರಕರ್ತರ ಸಂಘದಿಂದ ಕೋರಿಕೆಗಳು ಬಂದಲ್ಲಿ, ಸಂಬಂಧಿಸಿದ ಅಧಿಕಾರಿಗಳಿಗೆ ಈ ಕುರಿತು ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ಸಚಿವ ರೋಷನ್ ಬೇಗ್ ಇದೆ ಸಂದರ್ಭದಲ್ಲಿ ತಿಳಿಸಿದರು.
ಸಚಿವರನ್ನು ಭೇಟಿ ಮಾಡಿದ ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಖ್ವಾ ಯಾಹ್ಯಾ ಮಲ್ಪೆ, ಕುಂದಾಪುರ ತಾಲ್ಲೂಕು ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎ.ಕೆ ಸಾಹೇಬ್, ಗಂಗೊಳ್ಳಿಯ ಜಮಾತೆ ಮುಸ್ಲಿಂಮೀನ್ ಅಧ್ಯಕ್ಷ ಜಿ.ಎಂ ಇರ್ಷಾದ್, ಕಾರ್ಯದರ್ಶಿ ಎಚ್.ಅಬ್ದುಲ್, ಉಡುಪಿ ಜಿಲ್ಲಾ ಎಪಿಸಿಅರ್ ನ ತೌಫಿಕ್ ಗಂಗೊಳ್ಳಿ, ಧರ್ಮಗುರುಗಳಾದ ಉಬೇದುಲ್ಲಾ ಅಭುಬಕರ್ ನದ್ವಿ ಅವರುಗಳ ನೇತ್ರತ್ವದ ನಿಯೋU, ಗಂಗೊಳ್ಳಿಯಲ್ಲಿ ಇತ್ತೀಚೆಗೆ ನಡೆದ ಘಟನೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು ಕೆಲವೇ ವ್ಯಕ್ತಿಗಳಿಂದಾಗಿ ಅನಾದಿ ಕಾಲದಿಂದ ಬೆಳೆದು ಬಂದಿದ್ದ ಸಾಮರಸ್ಯದ ವಾತಾವರಣಕ್ಕೆ ಧಕ್ಕೆಯಾಗುತ್ತಿದೆ. ಒತ್ತಡ ತಂತ್ರಗಳ ಮೂಲಕ ತನಿಖೆ ದಾರಿ ತಪ್ಪಿಸುವ ಪ್ರಯತ್ನವಾಗುತ್ತಿದೆ.ಘಟನೆಗಳ ಕುರಿತು ದಾಖಲಾದ ದೂರುಗಳ ಹಾಗೂ ಬೆಂಕಿ ಹಚ್ಚಿರುವ ಪ್ರಕರಣದ ವೈಜ್ಞಾನಿಕ ವರದಿಯ ಮೇಲೆ ಯಾವುದೆ ಪ್ರಭಾವಗಳು ಬೀರದಂತೆ ತನಿಖೆ ನಡೆಯಬೇಕು. ತಪ್ಪಿತಸ್ಥರು ಯಾರೆ ಆಗಿದ್ದರೂ ಅವರುಗಳ ಮೇಲೆ ಕಾನೂನು ಕ್ರಮಗಳು ಜರುಗಬೇಕು. ಬೆಂಕಿ ಘಟನೆಯಿಂದ ಈಗಾಗಲೆ ನೊಂದಿರುವವರಿಗೆ ಮತ್ತೆ ಮಾನಸಿಕ ಹಿಂಸೆ ನೀಡುವ ಪ್ರಯತ್ನಗಳಾಗುತ್ತಿದ್ದು, ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡರು.
ನಿಯೋಗದ ಪ್ರಮುಖರ ಮಾತುಗಳಿಗೆ ಸ್ಪಂದಿಸಿದ ಸಚಿವರು ಸಮಾಜದಲ್ಲಿ ಶಾಂತಿ ಕಾಪಾಡಿಕೊಳ್ಳಲು ಸಮಾಜದ ಪ್ರಮುಖರು ಕಟ್ಟಿ ಬದ್ದರಾಗಬೇಕು. ವದಂತಿಗಳಿಗೆ ಪ್ರಚೋದನೆಗೆ ಒಳಗಾಗದಂತೆ ಯುವಕರಿಗೆ ಕಿವಿ ಮಾತು ಹೇಳಬೇಕು. ಘಟನೆಯಲ್ಲಿ ನಷ್ಟಕ್ಕೆ ಒಳಗಾಗಿರುವ ಸಂತೃಸ್ತರಿಗೆ ಪರಿಹಾರ ನೀಡುವ ಹಾಗೂ ಶಾಂತಿಯ ವಾತಾವರಣ ನಿರ್ಮಾಣಗೊಳ್ಳಲು ಅವಶ್ಯಕವಾಗಿರುವ ಕ್ರಮಗಳ ಕುರಿತು ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಸಮಯದಲ್ಲಿ ನಿಯೋಗದ ಸದಸ್ಯರು ಅಲ್ಲಿಗೆ ಬಂದಲ್ಲಿ ಸರ್ಕಾರದ ಮುಖ್ಯಸ್ಥರ ಭೇಟಿ ಮಾಡಿಸಿ, ಸಮಸ್ಯೆ ಪರಿಹಾರಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದರು.
ಕುಂದಾಪುರ ಉಪವಿಭಾಗಾಧಿಕಾರಿ ಚಾರುಲತಾ ಸೋಮಾಲ್, ತಹಸೀಲ್ದಾರ್ ಗಾಯತ್ರಿ ನಾಯಕ್, ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ ಇದ್ದರು.