ಬೆಂಗಳೂರು, ಡಿ.15: ದಕ್ಷಿಣ ಕನ್ನಡದಲ್ಲಿ ನಿಷೇಧಕ್ಕೊಳಗಾಗಿದ್ದ ಕಂಬಳವನ್ನು ನಡೆಸಲು ರಾಜ್ಯ ಹೈಕೋರ್ಟ್ ಹಸಿರು ನಿಶಾನೆ ತೋರಿದೆ. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಂಬಳವನ್ನು ಉಡುಪಿ ಜಿಲ್ಲಾಧಿಕಾರಿಗಳು ನಿಷೇಧ ಮಾಡಿದ್ದರು. ಇದನ್ನು ಪ್ರಶ್ನಿಸಿ ಜಿಲ್ಲಾ ಕಂಬಳ ಸಮಿತಿ ಹೈಕೋರ್ಟ್ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರ ಏಕಸದಸ್ಯ ಪೀಠ ಕೋಣಗಳಿಗೆ ಹಿಂಸೆಯಾಗದಂತೆ ಕಂಬಳ ನಡೆಸಲು ಅನುಮತಿ ನೀಡಿದ್ದಾರೆ.
ಇದರಿಂದ ಕಂಬಳಕ್ಕೆ ತೊಂದರೆಯಾಗುತ್ತದೆ ಎಂಬ ದಕ್ಷಿಣ ಕನ್ನಡ ಜನತೆಗಿದ್ದ ಆತಂಕ ದೂರವಾಗಿದೆ. ತಮಿಳುನಾಡಿನಲ್ಲಿ ಜೆಲ್ಲಿ ಕಟ್ಟನ್ನು ನಿಷೇಧಿಸಲಾಗಿತ್ತು. ಅದೇ ಮಾದರಿಯಲ್ಲಿ ಕಂಬಳವನ್ನು ನಿಷೇಧಿಸಬೇಕೆಂದು ಕೆಲವು ಸಂಘಸಂಸ್ಥೆಗಳು ಸುಪ್ರೀಂಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಕ್ರೀಡೆಯನ್ನು ನಿಷೇಧಿಸಿದ್ದರು.
ಆದರೆ ಜಿಲ್ಲಾ ಕಂಬಳ ಸಮಿತಿ ಜಲ್ಲಿ ಕಟ್ಟಿಗೂ, ಕಂಬಳಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕಂಬಳ ಕ್ರೀಡೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಈ ಕಂಬಳದಲ್ಲಿ ಬಳಸುವ ಕೋಣಗಳನ್ನು ಮಕ್ಕಳಂತೆ ನೋಡಿಕೊಳ್ಳಲಾಗುತ್ತದೆ. ಇವುಗಳಿಗೆ ಯಾವುದೇ ಹಿಂಸೆ ನೀಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಕೋಣಗಳಿಗೆ ಹಿಂಸೆ ನೀಡದಂತೆ ಕಂಬಳ ನಡೆಸುವುದಾದರೆ ನ್ಯಾಯಾಲಯದ ಆಕ್ಷೇಪವೇನಿಲ್ಲ ಎಂದು ಹೇಳಿದ ನ್ಯಾಯಾಲಯ, ಕಂಬಳಕ್ಕೆ ಅನುಮತಿ ನೀಡಿದೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನರ ಹೋರಾಟಕ್ಕೆ ಜಯ ಲಭಿಸಿದೆ.