ಕುಂದಾಪುರ: ಕುಗ್ರಾಮದ ಆಕೆ 15 ವರ್ಷದ ಅಪ್ರಾಪ್ತೆ. ಗಾರೆ ಕೆಲಸ ಮಾಡುವ ಆತ ಆಕೆಯ ಮನೆಯ ಗಾರೆಯ ಕೆಲಸಕ್ಕೆ ಬರುತ್ತಾನೆ. ಈಕೆಯ ಸೌಂದರ್ಯಕ್ಕೆ ಮರುಳಾದ ಆತ ಇವಳನ್ನು ಪ್ರೀತಿಸುವ ನಾಟಕವನ್ನಾಡುತ್ತಾನೆ. ಬಳಿಕ ಫ್ರೆಂಡ್‌ಶಿಪ್-ಲವ್-ಸೆಕ್ಸ್ ಎಲ್ಲವನ್ನೂ ನಿರಂತರ 9 ವರ್ಷಗಳ ಕಾಲ ಮಾಡಿದ ಆತ ಕೊನೆಗೆ ಮದುವೆಯಾಗುವುದಕ್ಕೆ ಒಲ್ಲೆಯೆನ್ನುತ್ತಾನೆ. ಹೀಗೆ ಪ್ರಾಣಕ್ಕಿಂತ ಅತಿಯಾಗಿ ಪ್ರೀತಿಸಿದ ಯುವಕ ಕೈಕೊಟ್ಟದಕ್ಕೆ ನೊಂದ ಈ ಯುವತಿ ನ್ಯಾಯಕ್ಕೆ ಮೊರೆ ಹೋಗಿ ಅನಿವಾರ್ಯವಾಗಿ ಪೊಲೀಸ್ ಮೆಟ್ಟಿಲನ್ನು ಏರಿದ್ದಾಳೆ.
ಈ ಬಗೆಗಿನ ಕಂಪ್ಲೀಟ್ ಸ್ಟೋರಿಯಿದು….
ಅಪ್ರಾಪ್ತೆಯಾಗಿದ್ದಾಗಲೇ ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ 9 ವರ್ಷಗಳ ಕಾಲ ಲೈಂಗಿಕ ಅತ್ಯಾಚಾರ ನಡೆಸಿ ಕೊನೆಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಯುವತಿ ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ಬೆಳ್ವೆ ಗ್ರಾಮ ಪಂಚಾಯಿತಿಯ ಆರ್ಡಿ ಎಂಬಲ್ಲಿ ನಡೆದಿದೆ.
ಕೊಂಜಾಡಿಯ ಬರಿಗದ್ದೆಯ ನಿವಾಸಿ ಪ್ರದೀಪ್ ನಾಯ್ಕ ಎಂಬಾತ ಅತ್ಯಾಚಾರ ನಡೆಸಿದ ಆರೋಪಿ ಎಂದು ಯುವತಿ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಘಟನೆಯ ವಿವರ: ಆರ್ಡಿ ನಿವಾಸಿ ಯುವತಿಯೊಬ್ಬಳ ಮನೆಯಲ್ಲಿ ಗಾರೆಕೆಲಸಕ್ಕೆಂದು 2005ರಲ್ಲಿ ಪ್ರದೀಪ್ ನಾಯ್ಕ ಬಂದಿದ್ದ ಎನ್ನಲಾಗಿದೆ. ಈ ಸಂದರ್ಭ 15 ವರ್ಷದವಳಾಗಿದ್ದ ಯುವತಿ ಮನೆಯಲ್ಲಿ ಒಬ್ಬಳೇ ಇದ್ದು ಆಕೆಯ ತಂದೆ ತಾಯಿ ಕೂಲಿ ಕೆಲಸಕ್ಕೆಂದು ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ಪ್ರದೀಪ ಆಕೆಯೊಂದಿಗೆ ಸಲುಗೆಯಿಂದ ಮಾತನಾಡಿದ್ದು, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದನೆನ್ನಲಾಗಿದೆ. ಹೀಗೆ ಮುಂದುವರಿದೆ ಸಲುಗೆ ಪ್ರೀತಿಯಾಗಿ ದೈಹಿಕ ಸಂಪರ್ಕಕ್ಕೂ ಬಂದಿತ್ತು. ಆದರೆ ಆಕೆಗೆ 15 ವರ್ಷವಾಗಿದ್ದರಿಂದ ಲೈಂಗಿಕ ಸಂಪರ್ಕಕ್ಕೆ ಆಕೆ ಒಪ್ಪಿರಲಿಲ್ಲ. ಆದರೆ ನಾನೇ ಮದುವೆಯಾಗುವುದಾಗಿಯೂ ಯಾವತ್ತು ನೀನು ನನ್ನವಳೆಂದು ನಂಬಿಸಿದ ಪ್ರದೀಪ್ ಅಂದಿನಿಂದ ನಿರಂತರವಾಗಿ ಲೈಂಗಿಕ ಕ್ರಿಯೆಗೆ ಆಕೆಯನ್ನು ಬಳಸಿಕೊಂಡಿದ್ದನೆಂದು ಆಕೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಇವರ ಲವ್ವಿ ಡವ್ವಿ ಬಳಿಕದ ಒಂದು ವರ್ಷದ ನಂತರ ವಿಚಾರ ಯುವತಿಯ ಮನೆಯವರಿಗೆ ತಿಳಿದಿದ್ದು, ಪ್ರದೀಪನ ಮನೆಯವರ ಜೊತೆಗೆ ಮಾತುಕತೆ ನಡೆಸಿದ ಮನೆಯವರ ಎದುರು ಕೂಡಾ ಅದೇ ಮಾತುಗಳನ್ನಾಡಿದ್ದ ಎನ್ನಲಾಗಿದೆ. ಈ ನಡುವೆ ಪ್ರದೀಪ ಆಕೆಯನ್ನು ತನ್ನ ಬೈಕಿನಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯ ಹಾಗೂ ಮುರ್ಡೇಶ್ವರಕ್ಕೂ ಕರೆದೊಯ್ದಿದ್ದಾನೆ ಎಂದು ಆಕೆ ಹೇಳಿದ್ದಾಳೆ. ಇದಾದ ನಂತರ ಮನತ್ತೆ ಮದುವೆಯ ವಿಚಾರ ಪ್ರಸ್ತಾಪ ಮಾಡಿದಾಗ ತಂಗಿಯ ಮದುವೆಯ ನಂತರ ಮದುವೆಯಾಗುವುದಾಗಿ ನಂಬಿಸಿದ್ದು, ನಂತರ ವಂಚಿಸಿದ್ದಾನೆ. ಮತ್ತೆ ಪುನಃ ಮದುವೆಯ ವಿಚಾರ ಪ್ರಸ್ತಾಪಿಸಿದಾಗ ಶಬರಿಮಲೆಗೆ ಹೋಗಿ ಬಂದು ವಿವಾಹವಾಗುವುದಾಗಿ ನಂಬಿಸಿದ್ದು, ನಂತರ ಆತ ಸಂಪರ್ಕ ಕಡಿದುಕೊಂಡಿದ್ದಾನೆ ಎಂದು ಯುವತಿ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಮೂರು ತಿಂಗಳ ಹಿಂದೆಯೇ ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಗೆ ಬಂದು ಮೌಖಿಕವಾಗಿ ದುರು ನೀಡಿದ್ದು, ಪೊಲೀಸರು ಆತನನ್ನು ಕರೆಯಿಸಿ ಮಾತುಕತೆ ನಡೆಸುವ ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗದ ಕಾರಣ ದೂರು ನೀಡಬೇಕಾಯಿತು ಎಂದು ಸಂತ್ರಸ್ಥೆ ಯುವತಿ ಪತ್ರಿಕೆಗೆ ತಿಳಿಸಿದ್ದಾಳೆ. ಅಲ್ಲದೇ ಈ ಹಿಂದೆ ಬೇರೆಯವರ ಜೊತೆಗೆ ಎರಡು ಲಕ್ಷ ರೂಪಾಯಿ ನೀಡುವುದಾಗಿಯೂ ಆಕೆಯನ್ನು ಬಿಡುವುದಾಗಿಯೂ ಸಂಧಾನಕ್ಕೆ ಬಂದಿದ್ದು,
ಇದಕ್ಕೆ ಯುವತಿ ಒಪ್ಪಲಿಲ್ಲವೆನ್ನಲಾಗಿದೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂದರ್ಭ ಭಜರಂಗದಳದ ಜಿಲ್ಲಾ ಸಹ ಸಂಚಾಲಕ ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ, ಅಭಿಮಾನಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಆರ್ಡಿ ಸಂತೋಷ್‌ಕುಮಾರ್ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜೀ ಅಧ್ಯಕ್ಷೆ ದೀಪಿಕಾ ಎಸ್ ಶೆಟ್ಟಿ ಮೊದಲಾದವರು ಹಾಜರಿದ್ದರು.