ಕರಾವಳಿ

ಯಮನ್ ಯಾತನೆಯಲ್ಲಿ ಆರು ಭಟ್ಕಳಿಗರು: ಸಹಾಯಕ್ಕಾಗಿ ಸರಕಾರಕ್ಕೆ ಮೊರೆ

Pinterest LinkedIn Tumblr

5555

ಭಟ್ಕಳ, ಮಾ.31: ಕಳೆದ ಐದಾರು ದಿನಗಳಿಂದ ಮಧ್ಯಪ್ರಾಚ್ಯ ರಾಷ್ಟ್ರವಾದ ಯಮನ್‌ನಲ್ಲಿ ಅಂತಃಕಲಹವೇರ್ಪಟ್ಟಿದ್ದು, ಸುಮಾರು 3,500ಕ್ಕೂ ಹೆಚ್ಚು ಭಾರತೀಯರು ಜೀವ ಭಯದಿಂದ ನರಳುತ್ತಿದ್ದಾರೆ. ಆ ಪೈಕಿ ಸುಮಾರು 500ರಷ್ಟು ಮಂದಿ ಕನ್ನಡಿಗರಾಗಿದ್ದು, ಭಟ್ಕಳದ ಎರಡು ಕುಟುಂಬಗಳ 6 ಮಂದಿ ಇದ್ದಾರೆ.

ಈ ಕುರಿತು ದೂರವಾಣಿಯಲ್ಲಿ ಮಾತನಾಡಿದ ಇಲ್ಲಿನ ಆಝಾದ್ ನಗರದ ನಿವಾಸಿ, ಪ್ರಸ್ತುತ ಕುಟುಂಬ ಸಮೇತ ಕಳೆದ ಹಲವಾರು ವರ್ಷಗಳಿಂದ ಯಮನ್‌ನ ಅದೆನ್ ನಗರದಲ್ಲಿ ವಾಸಿಸುತ್ತಿರುವ ಮುಹಮ್ಮದ್ ಯೂನೂಸ್ ಶಾಬಂದ್ರಿ ಸಂಕಷ್ಟದಲ್ಲಿರುವ ಕನ್ನಡಿಗರ ಸಂರಕ್ಷಣೆಗಾಗಿ ಭಾರತ ಸರಕಾರವನ್ನು ಒತ್ತಾಯಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದ್ದಾರೆ.

ಯಮನ್‌ನ ರಾಜಧಾನಿ ಸನಾ ನಗರದಲ್ಲಿ ಹೆಚ್ಚಿನ ಭಾರತೀಯರು ವಾಸವಾಗಿದ್ದು, ಭಾರತ ಸರಕಾರವು ಸನಾ ನಗರದಲ್ಲಿರುವ ಭಾರತೀಯ ಪ್ರಜೆಗಳಿಗೆ ಮಾತ್ರ ಸಹಾಯ ನೀಡುತ್ತಿದೆ. ಆದೆನ್ ನಗರದಲ್ಲಿಯೂ ಸುಮಾರು 500 ಮಂದಿ ಭಾರತೀಯರು ವಾಸವಾಗಿದ್ದಾರೆ. ಇವರಿಗೆ ಭಾರತ ಸರಕಾರ ಸುರಕ್ಷಾ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ನಮ್ಮ ಮನೆಗಳ ಮೇಲೆ ಯಾವ ಸಮಯದಲ್ಲಿ ಬಾಂಬುಗಳು ಬೀಳಲಿವೆ ಎಂದು ಹೇಳಲಿಕ್ಕೆ ಆಗದು. ನಮ್ಮ ಕಣ್ಣು ಮುಂದೆಯೇ ಯಮ ಸ್ವರೂಪಿ ದೃಶ್ಯಗಳು ನಡೆಯುತ್ತಿವೆ. ನಾವು ಇಲ್ಲಿ ಜೀವಭಯದಿಂದ ನರಳುತ್ತಿದ್ದೇವೆ. ಬಾಂಬುಗಳ ಸದ್ದು ನಮ್ಮ ಕಿವಿಗಳನ್ನು ಕಿವುಡನ್ನಾಗಿ ಮಾಡಿವೆ. ನಾವು ಜೀವಂತವಾಗಿ ನಮ್ಮ ಕುಟುಂಬವನ್ನು ಸೇರುತ್ತೇವೆಯೋ ಇಲ್ಲವೋ ಎನ್ನುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಆದ್ದರಿಂದ ಸರಕಾರ ಆದಷ್ಟು ಬೇಗನೆ ನಮ್ಮನ್ನು ಇಲ್ಲಿಂದ ಸ್ವದೇಶಕ್ಕೆ ಕರೆಸಿಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದು ಅವರು ದೈನ್ಯಭಾವದಿಂದ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಯೂನೂಸ್ ಕುಟುಂಬದಲ್ಲಿ ಮೂವರು ಮಕ್ಕಳು, ಪತ್ನಿ ಹಾಗೂ ಇನ್ನೋರ್ವ ಷಾಯಿಕ್ ರುಕ್ನುದ್ದೀನ್ ಎನ್ನುವವರು ಸೇರಿದ್ದಾರೆ. ಈ ಆರು ಮಂದಿ ಈಗಾಗಲೇ ಭಟ್ಕಳದ ತಮ್ಮ ಕುಟುಂಬದವರನ್ನು ಸಂಪರ್ಕಿಸಿದ್ದು, ಅವರು ಸುರಕ್ಷಿತವಾಗಿದ್ದಾರೆ.

Write A Comment