ಉಪ್ಪಳ : ಕಳೆದ ಒಂಬತ್ತು ದಿನಗಳಿಂದ ವೇದಮಂತ್ರ, ಹೋಮ ಧೂಮದಿಂದ ಆವತವಾಗಿದ್ದ ಕಾಸರಗೋಡು ಜಿಲ್ಲೆಯ ಉಪ್ಪಳದ ಕೊಂಡೆವೂರಿನಲ್ಲಿ ರವಿವಾರ ಮಹಾಯಾಗ ಪೂರ್ಣಾಹುತಿ ನಡೆದಿದ್ದು, ಆಶ್ರಮ ಭಕ್ತ ಸಾಗರದಲ್ಲಿ ತುಂಬಿತ್ತು. ಚತುರ್ವೇದ ಸಂಹಿತಾ ಹಾಗೂ ಬಹತ್ ಗಾಯತ್ರೀ ಘತ ಸಂಪ್ರಾಪ್ತಿ ಮಹಾಯಾಗಗಳ ಪೂರ್ಣಾಹುತಿಯ ದಿನವಾದ ಭಾನುವಾರ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ನಾನಾ ಕಡೆಯಿಂದ ಸುಮಾರು 30 ಸಾವಿರಕ್ಕಿಂತಲೂ ಹೆಚ್ಚು ಭಕ್ತಾಧಿಗಳು ಪಾಲ್ಗೊಂಡಿದ್ದರು. ಬೆಂಗಳೂರು, ಮುಂಬಯಿ, ಗೋವಾ ಕೇರಳದ ಅನೇಕ ಜಿಲ್ಲೆಗಳಿಂದ ಆಗಮಿಸಿ ಮಹಾಯಾಗದಲ್ಲಿ ಪಾಲ್ಗೊಂಡರು. ಶಾಲಾ ವಠಾರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.
ಬೆಳಗ್ಗಿನಿಂದಲೇ ಉಪ್ಪಳ ಪೇಟೆಯಿಂದ ಆಶ್ರಮಕ್ಕೆ ಬರುವ ರಸ್ತೆ ವಾಹನಳಿಂದ ತುಂಬಿ ತುಳುಕುತ್ತಿತ್ತು. ಕಾರ್ಯಕ್ರಮದ ನಾನಾ ಕಡೆ ಕಾರ್ಯಕರ್ತರ ಅಚ್ಚುಕಟ್ಟಾದ ವ್ಯವಸ್ಥೆ ಎಲ್ಲರ ಮನ ಗೆದ್ದಿತ್ತು. ಭಕ್ತಾದಿಗಳಿಗೆ ಎರಡು ಕಡೆಯಲ್ಲಿ ಅನ್ನದಾನ ವ್ಯವಸ್ಥೆ ಮಾಡಲಾಗಿದ್ದು, ಸಂಜೆ 5ರವರೆಗೂ ಭೋಜನ ವ್ಯವಸ್ಥೆಮಾಡಲಾಗಿತ್ತು.
ಬೆಳಗ್ಗೆ ಪುಣ್ಯಾಹ, ಗೋಪೂಜೆ, ಗಣಹೋಮ, ಋಕ್, ಯಜು, ಸಾಮ , ಅಥರ್ವ ಸಂಹಿತಾ ಯಾಗ, ಸರಸ್ವತೀ ಹವನ, ಗೋವು ತುಲಾಭಾರ ನಡೆದು 6.31ಕ್ಕೆ ಗಾಯತ್ರೀ ಘತ ಸಂಪ್ರಾಪ್ತಿ ಯಾಗ ಆರಂಭಗೊಂಡಿತು. ಬಳಿಕ ಗಾಯತ್ರೀ ದೇವಿ ಹಾಗೂ ಭಗವಾನ್ ನಿತ್ಯಾನಂದ ಸ್ವಾಮಿ ಮಹಾಪೂಜೆ, 11ರಿಂದ 12.30ರವರೆಗೆ ಚತುರ್ವೇದ ಯಾಗಗಳ ಪೂರ್ಣಾಹುತಿ ನಡೆಯಿತು. ನಂತರ ಅನ್ನಸಂತರ್ಪಣೆ ಪ್ರಾರಂಭವಾಯಿತು.
6.41ರಿಂದ ಗಾಯತ್ರಿ ಘತ ಸಂಪ್ರಾಪ್ತಿ ಮಹಾಯಾಗದ ಪೂರ್ಣಾಹುತಿಯ ನೆರೆದ ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿತು. ಬಳಿಕ ಧನ್ವಂತರಿ ದೇವರ ಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆ, ಮಂತ್ರಾಕ್ಷತೆ , ಪ್ರಸಾದ ವಿತರಣೆಯೊಂದಿಗೆ ಯಾಗ ಸಮಾರೋಪಗೊಂಡಿತು. ರಾತ್ರಿ 9ಕ್ಕೆ ಧನ್ವಂತರಿ ದೇವರ ವಿಸರ್ಜನೆ ನಡೆಯಿತು. ಏ.21ರಂದು ಸಂಜೆ 3ಕ್ಕೆ ಘತವನ್ನು ಸೇವೆ ಮಾಡಿಸಿದ ಭಕ್ತರಿಗೆ ನೀಡಲಾಗುವುದು ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.
ಗೋವು ತುಲಾಭಾರ :
ಗುರುವಾರ ಗೋ ತುಲಾಭಾರ ಕಾರ್ಯಕ್ರಮ ನಡೆಯಿತು. ಆಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಗೋವು ತುಲಾಭಾರವನ್ನು ಸಾಮೂಹಿಕ ಪ್ರಾರ್ಥನೆಯನ್ನು ಮಾಡುವುದರ ಮೂಲಕ ನೆರವೇರಿಸಲಾಯಿತು. ಮಹಾ ಯಾಗದ ಸಂದರ್ಭದಲ್ಲಿ ಪ್ರತಿನಿತ್ಯ ಪೂಜಿಸಲಾಗುವ ಗೋಮಾತೆಯ ತುಲಾಭಾರ ನಡೆಯಿತು. ಕೊಂಡೆವೂರು ಶ್ರೀಗಳು, ಕಟೀಲಿನ ಅನಂತ ಪದ್ಮನಾಭ ಅಸ್ರಣ್ಣರ ದಿವ್ಯ ಉಪಸ್ಥಿತಿಯಲ್ಲಿ, ಯಾಗ ಪ್ರಧಾನ ಸಮಿತಿಯ ನಾರಾಯಣ ಬೆಂಗಳೂರು, ಗೋಪಾಲ್ ಬಂದ್ಯೋಡ್, ದಿವಾಕರ ಸಾಮಾನಿ ಮತ್ತು ಆಶಾಜ್ಯೋತಿ ರೈ ಅವರ ಸಮ್ಮುಖದಲ್ಲಿ ಬೆಂಗಳೂರಿನ ಇ.ಎಸ್. ರಾಮ್ ಭಟ್, ಕಿರಣ್ ಭಟ್ ಹಾಗೂ ಭಕ್ತಾದಿಗಳು ಬೆಲ್ಲದ ಮೂಲಕ ಗೋ ತುಲಾಭಾರ ಸೇವೆ ನಡೆಸಿದರು.
ಸಂಜೆ 6.41ರಿಂದ ಗಾಯತ್ರೀ ಘೃತ ಸಂಪ್ರಾಪ್ತಿ ಯಾಗ ಸಮಾಪನ, ಧನ್ವಂತರೀ ದೇವರ ಮಹಾಪೂಜೆ, ಅಷ್ಟಾವಧಾನ ಸೇವೆ ನಡೆಯಲಿದೆ. ಸಂಜೆ 7ರಿಂದ ಧಾರ್ಮಿಕ ಸಭೆ ನಡೆಯಲಿದ್ದು, 9ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಲಯನ್ ಡಿ. ಕಿಶೋರ್ ಶೆಟ್ಟಿ ಅವರ ತಂಡದಿಂದ ‘ಸಿರಿದುರ್ಗೆ ಶಾಂಭವಿ’ ಎಂಬ ಕನ್ನಡ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಆಧ್ಯಾತ್ಮಿಕ ಧೂಮ ಎಲ್ಲೆಡೆ ಪ್ರಚುರವಾಗಲಿ -ಎಡನೀರು ಶ್ರೀಗಳು
ಕೊಂಡೆವೂರಿನಲ್ಲಿ ನಡೆಯುತ್ತಿರುವ ಮಹಾಯಾಗದ 7 ನೇದಿನ(28.3.2015 ಶನಿವಾರ) ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಮದ್ ಎಡನೀರು ಮಠದ ಪರಮ ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಈ ಧರ್ಮಭೂಮಿಯಲ್ಲಿ ಸುಲಭ ಸಾಧ್ಯವಲ್ಲದ ಈ ಯಾಗ ಧೂಮ ಆಧ್ಯಾತ್ಮಿಕ ಧೂಮವಾಗಿ ಪ್ರಚುರವಾಗಿ ದೇಶದೆಲ್ಲೆಡೆ ಸುಖ ಸಮೃದ್ಧಿ ಉಂಟಾಗಲೆಂದು ತಮ್ಮ ಆಶೀರ್ವಚನದಲ್ಲಿ ನುಡಿದರು. ಮಾಣಿಲ ಶ್ರೀಗಳು ಯಾಗದ ಸದುದ್ದೇಶ ಸಾರ್ಥಕತೆ ಆಗಬೇಕು ಎಂದರು. ಕೊಂಡೆವೂರು ಶ್ರೀಗಳು ದೇವರ ಅಂಗೈಯಲ್ಲಿರುವ ನಾವು ಯಾವುದೇ ಭಯಪಡದೇ ಒಳ್ಳೆಕೆಲಸ ಹೆಚ್ಚುಮಾಡಿ ಮುಂದಿನ ಪೀಳಿಗೆಗೆ ಕೊಡುವಂತಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್ಥಿಕ ತಜ್ಞರಾದ ಮಾಜೀ ಕೇಂದ್ರ ಮಂತ್ರಿಗಳಾದ ಡಾ.ಸುಬ್ರಹ್ಮಣ್ಯ ಸ್ವಾಮಿ ಯವರು ಮಾತನಾಡುತ್ತಾ ಎಲ್ಲಾ ರಂಗಗಳಲ್ಲಿ ಸಂಶೋಧನೆ ಮಾಡಿದ ಭಾರತ ಅನ್ಯ ಆಕ್ರಮಣಗಳಿಂದ ವಿಚಲಿತವಾಗದೇ ಇರಲು ಮಠ ಮಠಾಧೀಶರುಗಳು ಕಾರಣ, ಯುನೆಸ್ಕೋ(ಓಇಅಔ) ಪ್ರಕಾರ ಪ್ರಪಂಚದಲ್ಲಿದ್ದ 46 ನಾಗರೀಕತೆಗಳಲ್ಲಿ ಇಂದು ಉಳಿದ ಏಕೈಕ ನಾಗರೀಕತೆ ಹಿಂದೂ ನಾಗರೀಕತೆಯಾಗಿದೆ. ದೇಶದ ಎಲ್ಲಾ ಭಾಷೆಯ ಮುಖ್ಯಭಾಗ ಸಂಸ್ಕೃತ ಭಾಷೆಯಾಗಿದೆ. ಬೇರೆ ಭಾಷೆಯ ಜೊತೆ ಸಂಸ್ಕೃತವನ್ನು ಕಡ್ಡಾಯಗೊಳಿಸಬೇಕು ಎಂದು ತಮ್ಮ ಉದ್ಭೋದಕ ಭಾಷಣದಲ್ಲಿ ನುಡಿದರು.
ಅನೇಕ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಬೆಳೆಸಿ ಸಾಧನೆ ಮಾಡಿದ ಬೆಂಗಳೂರು ಆಕ್ಸಫರ್ಡ್ ಶಿಕ್ಷಣ ಸಂಸ್ಥೆಗಳ ಸಮೂಹದ ಶ್ರೀ ನರಸ ರಾಜು ಮತ್ತು ಔದ್ಯಮಿಕ ರಂಗದಲ್ಲಿ ವಿಶೇಷ ಸಾಧನೆ ಮಾಡಿ ಪ್ರಸ್ತುತ ರಷ್ಯಾದಲ್ಲಿ ಔದ್ಯಮಿಕ ಸಂಸ್ಥೆ ನಡೆಸುತ್ತಿರುವ ಶ್ರೀ ಎಡಕ್ಕಾನ ಮಹಾಬಲೇಶ್ವರ ಭಟ್ ಇವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ, ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯಿತು. ಈ ಸಭೆಯ ಸ್ವಾಗತವನ್ನು ಡಾ. ಆಶಾಜ್ಯೋತಿ ರೈಯವರು ಮಾಡಿ, ಶ್ರೀ ಹರೀಶ್ ಮಾಡ ವಂದಿಸಿ ಶ್ರೀ ಕದ್ರಿ ನವನೀತ್ ಶೆಟ್ಟಿಯವರು ನಿರೂಪಿಸಿದರು.
ಸಂಜೆ 5 ಘಂಟೆಯಿಂದ ಎಡನೀರು ಶ್ರೀಪಾದಂಗಳವರಿಂದ ಸುಶ್ರಾವ್ಯ ಭಕ್ತಿ ಸಂಗೀತ ಕಾರ್ಯಕ್ರಮ ಹಾಗೂ ರಾತ್ರಿ 9.00 ರಿಂದ ಕೋಝಿಕ್ಕೋಡಿನ ಶ್ರೀ ಎನ್. ಶ್ರೀಕಾಂತ್ ಮತ್ತು ಅಶ್ವಿನೀ ಶ್ರೀಕಾಂತ್ ಬಳಗದವರ ಸನ್ಮಥ ನೃತ್ಯ ರೂಪಕ ವನ್ನು ಭಕ್ತಾದಿಗಳು ಸವಿದರು.
ಯಾಗ ತರಂಗದಿಂದ ರೋಗ ತರಂಗ ದೂರ – ಕಟಪಾಡಿ ಶ್ರೀಗಳು
ಕೊಂಡೆವೂರಿನಲ್ಲಿ ನಡೆಯುತ್ತಿರುವ ಮಹಾಯಾಗದ ಎರಡನೇ ದಿನ (23.3.2015)ದ ಧಾರ್ಮಿಕ ಸಭೆಯಲ್ಲಿ ಆನೆಗುಂದಿ ಮಹಾಸಂಸ್ಥಾನಮ್ ಸರಸ್ವತೀ ಪೀಠಾಧೀಶ್ವರ ಪರಮ ಪೂಜ್ಯ ಅಷ್ಟೋತ್ತರ ಶತ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಯಾಗ ತರಂಗದಿಂದ ರೋಗತರಂಗ ದೂರವಾಗುತ್ತದೆ. ಹಾಲಿನಲ್ಲಿ ಅಂತರ್ಗತವಾಗಿರುವ ತುಪ್ಪದ ಹಾಗೆ ಭಗವಂತನಿದ್ದಾನೆ. ಅಂತೆಯೇ ಈ ಯಾಗದಿಂದ ಸಮಸ್ತರ ಆಶೋತ್ತರ ಈಡೇರಿಸುವ ಘೃತ ತಯಾರಾಗಲಿಎಂದು ಶುಭಾಶೀರ್ವಚನ ನೀಡಿದರು. ಪರಮಾತ್ಮನ ಸಂಕಲ್ಪದಂತೆ ಧರ್ಮ ಸಂಸ್ಥಾಪನೆಯ ಸಂಕಲ್ಪದ ಈ ಯಜ್ಞ ಸಮಸ್ಥ ಕುಟುಂಬಕ್ಕೂ ಒಳಿತನ್ನುಂಟುಮಾಡಲಿ ಎಂದು ಕೋಝಿಕ್ಕೋಡಿನ ಅದ್ವೈತಾಶ್ರಮದ ಶ್ರೀ ಶ್ರೀ ಚಿದಾನಂದ ಪುರಿ ಸ್ವಾಮೀಜಿಯವರು ಶುಭಹಾರೈಸಿದರು. ಶ್ರೀಧಾಮ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಯವರು ಉಪಸ್ಥಿತರಿದ್ದರು. ಕೊಂಡೆವೂರಿನ ಶ್ರೀಗಳು ತಮ್ಮ ದಿಕ್ಸೂಚಿ ಆಶೀರ್ವಚನದಲ್ಲಿ ಒಳ್ಳೆಯ ಕರ್ಮ ಮಾಡಿ ಭಗವಂತನೆಡೆಗೆ ಸಾಗೋಣ, ಆಯುರ್ವೇದದ ಪರಿಕಲ್ಪನೆಯಂತೆ ಈ ಪ್ರಕೃತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಡೋಣ ಎಂದು ಆಶಿಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಎಂ.ಬಿ, ಪುರಾಣಿಕ್ ರವರು ಕಾಯಕವೇ ಕೈಲಾಸವಾದ ಅಪೂರ್ವ ಸಾಧನಾಶ್ರಮ ಇದಾಗಿದೆ. ಯಜ್ಞಯಾಗಾದಿಗಳು ನಡೆಯುವಲ್ಲಿ ಕೆಟ್ಟ ಅನಿಲ ಪ್ರವೇಶಿಸದೆ ಶುದ್ಧ ವಾತಾವರಣ ನೆಲೆಸಿರುತ್ತದೆ, ಜಗತ್ತಿಗೇ ಶಾಂತಿ ಸಂದೇಶನೀಡಿದ ಭಾರತ ಎದ್ದುನಿಲ್ಲಲಿ ಎಂದು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ನುಡಿದರು.ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ಕೆ.ಟಿ. ಆಳ್ವ, ಶ್ರೀಮತಿ ಸಂಧ್ಯಾ ವಿ. ಶೆಟ್ಟಿ, ಶ್ರೀ ಕೃಷ್ಣ ಭಟ್, ಶ್ರೀ ಸುಕುಮಾರ ಶೆಟ್ಟಿ, ಡಾ. ರಮೇಶ್ ಬೆಂಗಳೂರು, ಸುರೇಶ್ ಶೆಟ್ಟಿ ಗುರ್ಮೆ ಮುಂತಾದವರು ಸದಾಶಯ ನುಡಿಗಳನ್ನು ನುಡಿದರು. ಶ್ರೀ ಮೋನಪ್ಪ ಭಂಡಾರಿ, ಶ್ರೀ ಗುರುರಾಜ ಬೈಂದೂರು, ಡಾ. ಆಶಾ ಜ್ಯೋತಿ ರೈ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಿಶೋರಿಯರಿಂದ ಪ್ರಾರ್ಥನೆ, ಶ್ರೀ ದಿವಾಕರ ಸಾಮಾನಿಯವರ ಸ್ವಾಗತ, ಶ್ರೀ ಲಕ್ಷ್ಮೀ ನಾರಾಯಣ್ ವಂದನಾರ್ಪಣೆಗೈದ ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ತಾರಾನಾಥ ಕೊಟ್ಟಾರಿಯವರು ಮಾಡಿದರು.
ಸಂಜೆ 5 ಗಂಟೆಗೆ ವಿದ್ವಾನ್ ಹಿರಣ್ಯ ವೆಂಕಟೇಶ್ ಭಟ್ ಇವರು ಧಕ್ಷಾಧ್ವರ ವಿಷಯದ ಕುರಿತು ಧಾರ್ಮಿಕ ಪ್ರವಚನ ನೀಡಿದರು. ರಾತ್ರೆ 9.00 ರಿಂದ ಸವಿಜೀವನಮ್ ನೃತ್ಯಕಲಾಕ್ಷೇತ್ರ ಕೊಂಡೆವೂರು ಇದರ ವಿದುಷಿ ಶ್ರೀವತಿ ಸವಿತಾ ಜೀವನ್ ಶಿಷ್ಯ ವೃಂದದವರಿಂದ ಕಣ್ಮನ ಸೆಳೆಯುವ ನೃತ್ಯ ವೈವಿಧ್ಯ-2015 ಕಾರ್ಯಕ್ರಮ ಜರುಗಿತು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್