ಕುಂದಾಪುರ: ತಾಯಿಯ ಮೇಲೆ ಮಾರಾಂಣತಿಕ ಹಲ್ಲೆ ನಡೆಸಿದ ಮಗನು ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಕೊಡ್ಲಾಡಿಯ ಮೇಲ್‌ದಾಸನಮನೆ ಎಂಬಲ್ಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಕುಶಾಲ್ ಶೆಟ್ಟಿ (52) ಎಂದು ಗುರುತಿಸಲಾಗಿದೆ. ಮುತ್ತಮ್ಮ ಶೆಟ್ಟಿ(75) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ: ಕೊಡ್ಲಾಡಿಯ ತಮ್ಮ ನಿವಾಸದಲ್ಲಿ ತಾಯಿಯೊಂದಿಗೆ ವಾಸವಿದ್ದ ಕುಶಲ ಶೆಟ್ಟಿ ನಿತ್ಯ ಕುಡಿದು ಬಂದು ಆಸ್ತಿ ವಿಚಾರವಾಗಿ ರಂಪಪಾಟ ಮಾಡುತ್ತಿದ್ದ ಎನ್ನಲಾಗಿದೆ. ಸೋಮವಾರವೂ ಕೂಡ ತಾಯಿಯೊಂದಿಗೆ ಜಗಳವಾಡಿದ್ದ ಈತ ಮುತ್ತಮ್ಮ ಅವರು ಅಡುಗೆ ಕೋಣೆಯನ್ನು ಒರೆಸುತ್ತಿರುವಾಗ, ಕತ್ತಿ ಹಿಡಿದು ಮನಬಂದಂತೆ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ಗಾಯದ ನೋವಿನ ನಡುವೆಯೇ ದೂರವಾಣಿ ಮುಖಾಂತರ ಬೆಂಗಳೂರಿನಲ್ಲಿ ವಾಸವಿದ್ದ ಇವರ ಪುತ್ರಿ ಸರೋಜಾ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಕೂಡಲೇ ಸರೋಜಾ ಅವರು ಕೊಡ್ಲಾಡಿಯಲ್ಲಿರುವ ಸಂಬಂಧಿಕರಿಗೆ ಕರೆ ಮಾಡಿ ಮನೆಗೆ ತೆರಳುವಂತೆ ತಿಳಿಸಿದ್ದಾರೆ. ಸಂಬಂಧಿಕರು ಮನೆಗೆ ಬರುವ ವೇಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮುತ್ತಮ್ಮ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದ್ದು ಎಡಕೈಯ ಭುಜದ ಬಳಿ ಹಾಗೂ ಎಡಕಾಲಿನ ಮಣಿಗಂಟಿಗೆ ಗಂಭೀರ ಗಾಯಗೊಂಡಿದ್ದು ಕೂಡಲೇ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು.
ಘಟನೆಯ ಕುರಿತು ಕುಶಲ ಶೆಟ್ಟಿ ಸಹೋದರ ಶಿವರಾಮ ಶೆಟ್ಟಿ ಅವರು ಶಂಕರನಾರಾಯಣ ಪೊಲೀಸರಿಗೆ ಮಾಹಿತಿ ನೀಡಿದ್ದು ಅವರು ಕೊಡ್ಲಾಡಿ ನಿವಾಸಕ್ಕೆ ಸಂಜೆ ವೇಳೆ ತೆರಳಿ ಪರಿಶೀಲನೆ ನಡೆಸಿದಾಗ ಕುಶಲ ಶೆಟ್ಟಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತದೇಹವನ್ನು ಕುಂದಾಪಪುರ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷಷೆಗಾಗಿ ರವಾನಿಸಲಾಗಿತ್ತು.
ಕುಶಲ ಶೆಟ್ಟಿ ವಿವಾಹಿತರಾಗಿದ್ದು, 15 ವರ್ಷಗಳ ಹಿಂದೆ ಪತ್ನಿಯನ್ನು ಹಾಗೂ ಇಬ್ಬರು ಮಕ್ಕಳನ್ನು ತೊರೆದಿದ್ದು, ತಾಯಿಯೊಂದಿಗೆ ಕೊಡ್ಲಾಡಿಯಲ್ಲಿ ವಾಸವಿದ್ದರು. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.