ಮಂಗಳೂರು, ಎ.23: ‘ಲಕುಮಿ ಸಿನಿ ಕ್ರಿಯೇಶನ್ಸ್’ನವರ ಬಹುನಿರೀಕ್ಷಿತ ‘ಎಕ್ಕಸಕ’ ತುಳು ಸಿನಿಮಾ ಮೇ 1ರಂದು ತೆರೆಕಾಣಲಿದೆ. ಕರಾವಳಿ ಭಾಗದ ಬಹುತೇಕ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆಬರಲಿದೆ. ತುಳುರಂಗಭೂಮಿಯ ಹೆಸರಾಂತ ತಂಡವಾಗಿರುವ ಮಂಗಳೂರಿನ ‘ಲಕುಮಿ’ ಕಲಾವಿದರು ಇದರ ಸಂಸ್ಥಾಪಕ ಹಾಗೂ ಲೀಡ್ಸ್ ಗ್ರೂಪ್ ಆಫ್ ಕಂಪೆನಿಸ್‌ನ ಲಯನ್ ಕಿಶೋರ್ ಡಿ.ಶೆಟ್ಟಿ ನಿರ್ಮಾಣದಲ್ಲಿ ‘ಎಕ್ಕಸಕ’ ಸಿನಿಮಾ ಮೂಡಿಬಂದಿದೆ.
ಲ.ಚಂದ್ರಹಾಸ ಶೆಟ್ಟಿ ಹಾಗೂ ಲ.ಗಿರೀಶ್ ಶೆಟ್ಟಿಯವರು ಕೂಡಾ ನಿರ್ಮಾಪಕರಾಗಿದ್ದು, ಕನ್ನಡ ಸಿನಿಮಾರಂಗದಲ್ಲಿ ಕಳೆದ 10 ವರ್ಷಗಳಿಂದ ಹಲವಾರು ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಕೆ.ಸೂರಜ್ ಶೆಟ್ಟಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಹಿತೇಷ್ ನಾಕ್ ಹಾಗೂ ಸೋನಾಲ್ ಮೊಂತೇರೊ ಪ್ರಮುಖ ಭೂಮಿಕೆಯಲ್ಲಿದ್ದು, ತುಳುನಾಡಿನ ಖ್ಯಾತ ಕಲಾವಿದರಾದ ನವೀನ್ ಡಿ.ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸತೀಶ್ ಬೆಂದಲೆ, ರಾಘವೇಂದ್ರ ರೈ, ಸಂದೀಪ್ ಕಾಪು, ಪ್ರಸನ್ನ ಬೈಲೂರು, ಶೋಭರಾಜ್ ಪಾವೂರು, ಚೈತ್ರಶೆಟ್ಟಿ, ಮೊಹನ್ ಕೊಪ್ಪಳ ಹರೀಶ್ ವಾಸು ಶೆಟ್ಟಿ ಮೊದಲಾದವರು ತಮ್ಮ ನಟನಾ ಕೌಶಲ್ಯವನ್ನು ಮೆರೆದಿದ್ದಾರೆ.
ಉಗ್ರಂ ಕನ್ನಡ ಸಿನಿಮಾದಲ್ಲಿ ಮಿಂಚಿರುವ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ನೀಡಿರುವ ‘ಎಕ್ಕಸಕ’ ಸಿನಿಮಾಕ್ಕೆ ಕನ್ನಡ ಸಿನಿಮಾಜಗತ್ತಿನ ಹಿರಿಯಛಾಯಾಗ್ರಾಹ ಕೃಷ್ಣ ಸಾರಥಿ ಅದ್ಭುತವಾಗಿ ತನ್ನ ಪ್ರತಿಭೆಯನ್ನು ತೋರಿದ್ದಾರೆ. ನಟ ಕಿಚ್ಚ ಸುದೀಪ್‌ನ ಹಲವಾರು ಸಿನಿಮಾಗಳಲ್ಲಿ ಸಂಕಲನ ಮಾಡಿರುವ ಕೆ.ಆರ್.ಲಿಂಗರಾಜು ಇಲ್ಲಿಯೂ ತಮ್ಮ ಚಾಕಚಕ್ಯತೆಯನ್ನು ಮೆರೆದಿದ್ದಾರೆ.
ನಟ ರವಿಚಂದ್ರನ್‌ರ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಹುಲಿವನ ನಾಗರಾಜ್ ‘ಎಕ್ಕಸಕ’ ಸಿನಿಮಾದ ಧ್ವನಿ ತಾಂತ್ರಕತೆಯಲ್ಲಿ ಕೈಯಾಡಿಸಿದ್ದು, ‘ಕೊಚಾಡಿಯನ್’ ತಮಿಳ್ ಸೂಪರ್‌ಹಿಟ್ ಸಿನಿಮಾಕ್ಕೆ ಗ್ರಾಫಿಕ್ಸ್ ಕೆಲಸ ಮಾಡಿರುವ ಹೈದರಾಬಾದ್‌ನ ಸ್ಟೂಡಿಯೊದಲ್ಲಿಯೇ ಗ್ರಾಫಿಕ್ಸ್ ಕಾರ್ಯ ಮಾಡಲಾಗಿದ್ದು, ಮುಂಬೈ ಹಾಗೂ ಬೆಂಗಳೂರಿನ ತಂತ್ರಜ್ಞರಿಂದ ಸಿನಿಮಾದ ವಿವಿಧ ಕೆಲಸ ಕಾರ್ಯ ನಡೆಸಲಾಗಿದೆ.
ಧನು ಕುಮಾರ್ ಕೋರಿಯೋಗ್ರಫಿ ಮಾಡಿದ್ದು, ಮುಂಬೈಯ ನೃತ್ಯ ಕಲಾವಿದರು ತಮ್ಮ ಪ್ರತಿಭೆಯನ್ನು ತೋರಿಸಿದ್ದು, ಸಿನಿಮಾದ ಹಾಡುಗಳು ಅದ್ದೂರಿಯಾಗಿ ಮೂಡಿಬಂದಿದೆ. ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಮಯೂರ್ ಆರ್.ಶೆಟ್ಟಿ ಹಾಡುಗಳ ಸಾಹಿತ್ಯ ಬರೆದಿದ್ದು, ವಸಂತ್ ಅಮಿನ್ ಹಾಗೂ ಡಿಬಿಸಿ ಶೇಖರ್ ಎರಡು ಹಾಡುಗಳ ಶೀರ್ಷಿಕೆ ಬರೆದಿದ್ದಾರೆ. ಸಿನಿಮಾದಲ್ಲಿ ಆರು ಹಾಡುಗಳಿವೆ. ಕನ್ನಡ ಸಿನಿಮಾದ ಹೆಸರಾಂತ ಗಾಯಕರಾದ ಚಂದನ್ ಶೆಟ್ಟಿ, ಅನುರಾಧ ಭಟ್, ದುಬೈ ಹೆಸರಾಂತ ಯುವ ಉದ್ಯಮಿ, ಗಾಯಕರೂ ಆಗಿರುವ ಹರೀಶ್ ಶೇರಿಗಾರ್ ದುಬೈ ಹಾಗೂ ಅಕ್ಷತಾ ರಾವ್ ದುಬೈ ಇವರು ತಮ್ಮ ಸಮುಧರ ಕಂಠದ ಮೂಲಕ ಸುಶ್ರಾವ್ಯವಾಗಿ ಹಾಡಿದ್ದಾರೆ.
ಹಲವಾರು ಕನ್ನಡ ಹಾಗೂ ತುಳು ಸಿನಿಮಾದ ಪ್ರಚಾರ ವಿನ್ಯಾಸದಲ್ಲಿ ಕೈಯಾಡಿಸಿರುವ ದೇವಿ ರೈಯವರು ಈ ಸಿನಿಮಾದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು, ಒಟ್ಟಾರೆ ಈ ಸಿನಿಮಾವು ಪ್ರೀಔತಿ-ಪ್ರೇಮದ ಜೊತೆಗೆ ಹಾಸ್ಯ-ಮನೋರಂಜನೆಯಿಂದ ಕೂಡಿದೆ. ದಿನಕರ್ ಶೆಟ್ಟಿ ಹಾಗೂ ಮೋಹನ್ ಕೊಪ್ಪಳ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
%VIDEO%