ಚಿತ್ರ ಮಾಹಿತಿ: ಪ.ಗೋ ಮತ್ತು ಅವರ ಪತ್ನಿ
ಚಿದು ಬರೆಯುವ ಪ.ಗೋ ಸರಣಿ-2 :
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಂಪ್ ವೆಲ್ ಮೂಲಕ ಬಿ.ಸಿ.ರೋಡ್ ಗೆ ಹೋಗುವಾಗ ಕಪಿತಾನಿಯೋ ಶಾಲೆ ಸಿಗುತ್ತದೆ. ಆ ಶಾಲೆಯಿಂದ ಸುಮಾರು ನೂರು ಮೀಟರ್ ಮುಂದಕ್ಕೆ ಹೋದರೆ ಎಡಕ್ಕೆ ಓಣಿ ರಸ್ತೆ ಸಿಗುತ್ತದೆ. ಆ ರಸ್ತೆಯಲ್ಲಿ ಕವಲುದಾರಿಗಳಿದ್ದರೂ ಎಲ್ಲೂ ತಿರುಗದೇ ಅದೇ ರಸ್ತೆಯಲ್ಲಿ ಮುಂದಕ್ಕೆಕ್ಕೆ ಸಾಗಿದರೆ ಡೆಡ್ ಎಂಡ್ ನಲ್ಲಿ ದೊಡ್ಡ ಹಳ್ಳ. ಆ ಹಳ್ಳದಲ್ಲಿ ನೀರಿಲ್ಲ, ಆದರೆ ಮಳೆಗಾಲದಲ್ಲಿ ನೀರು ಹರಿಯುತ್ತಿತ್ತು. ಆ ಹಳ್ಳ ದಾಟಿದರೆ ಕಾಣುವ ದಿಣ್ಣೆ ಅದರ ಮೇಲಿರುವ ಪುಟ್ಟ ಮನೆ, ಅದೇ ಪ.ಗೋ ಅವರ ಮನೆ, ಅವರ ಪತ್ರಿಕೋದ್ಯಮದ ಪ್ರಯೋಗಶಾಲೆ ನನ್ನಂಥ ಕಿರಿಯರಿಗೆ ಒಂಥರಾ ಬಂದು, ತಂಗಿ ಹೋಗಲು ಅವಕಾಶವಿರುವ ಪತ್ರಿಕೋದ್ಯಮದ ವಸತಿ ಶಾಲೆ.
ಆ ಕಾಲದಲ್ಲಿ ಪತ್ರಕರ್ತ ಎಂದರೆ ಜನ ಗೌರವ ಕೊಡುವ ಕಾಲವಾಗಿದ್ದರಿಂದ ಪ.ಗೋ ಅವರ ಮನೆ ಗೊತ್ತಿಲ್ಲದವರೂ ಯಾವ ಆತಂಕವಿಲ್ಲದೆ ಸಲೀಸಾಗಿ ಅವರ ಮನೆ ತಲುಪಬಹುದಿತ್ತು. ಯಾರನ್ನೇ ಕೇಳಿದರೂ ಪ.ಗೋ ಮನೆಯ ದಾರಿ ಹೇಳಿಕೊಡುತ್ತಿದ್ದರು. ಆದ್ದರಿಂದ ಪ.ಗೋ ಮನೆ ಸಿಗಲಿಲ್ಲವೆಂದು ಹಪಹಪಿಸಿಕೊಂಡು ಹೋಗುವ ಪ್ರಮೇಯವೇ ಇರಲಿಲ್ಲ.
ಅಂದಹಾಗೆ ಪ.ಗೋ ಮನೆ ಹಳತು ಹೊಸತರ ಮಿಶ್ರಣವೆನ್ನಬಹುದು. ಹಳೇ ಮನೆಗೆ ಅವರೇ ಕಸರತ್ತು ಮಾಡಿ ಹಲಗೆ ಬಾಗಿಲಿಗೆ ಚಿಲಕ ಬಡಿದು, ಬಾತ್ ರೂಮ್ ಬಾಗಿಲಿಗೆ ಪಟ್ಟಿ ಹೊಡೆದು ಆಚಾರಿ ಕೆಲಸವನ್ನೂ ಅವರೇ ಮಾಡಿ ಸ್ವಾವಲಂಬಿಯಾಗಿದ್ದರು. ಬಂದೋ ಬಸ್ತ್ ಎನ್ನಬಹುದಾದ ಸುಸ್ಥಿತಿಯ ಪಕ್ಕಾ ಐಷಾರಾಮಿ ಕೋಣೆಗಳಿಲ್ಲ, ಇರುವ ಸಣ್ಣ ರೂಮು, ಅಲ್ಲಲ್ಲಿ ಮರದ ಅಲ್ಮೇರಾ ಅಲ್ಲ ಮರದ ಪಟ್ಟಿ ಬಡಿದು ಅವರೇ ಸಿದ್ಧಪಡಿಸಿದ್ದೇ ಇರಬೇಕು ಪುಸ್ತಕ, ಪೇಪರ್ ಜೋಡಿಸಿಡಲು, ಹಳೇ ಪ್ರೆಸ್ ನೋಟ್, ಪೆನ್ನು ಇತ್ಯಾದಿ ಪರಿಕರಗಳನ್ನು ಜೋಡಿಸಿಟ್ಟಿರುತ್ತಿದ್ದರು.
ಟೈಪ್ ರೈಟರ್ ಸುಸ್ಥಿತಿಯದ್ದೊಂದು, ಮುರುಕಲು ಸ್ಥಿತಿಯಲ್ಲೊಂದು, ಮರದ ಕುರ್ಚಿ, ಕಬ್ಬಿಣದ ಕುರ್ಚಿ ಎಲ್ಲವೂ ಅದೇ ಪರಿಸರದಲ್ಲಿ. ಆ ಪುಟ್ಟ ಮನೆಯೊಳಗೆ ಗುಬ್ಬಚ್ಚಿಯಂಥಾ ಪತಿ, ಪತಿಯ ಸಂಸಾರ. ಆಗಾಗ ನನ್ನಂಥಾ ಅತಿಥಿಗಳು. ಅಲ್ಲಲ್ಲಿ ಬೀಡಿ ಕಟ್ಟು, ಬೆಂಕಿಪೊಟ್ಟಣಗಳು, ಬಾಲ್ ಪೆನ್ನುಗಳು, ಬರೆಯುವ ಕಾಗದದ ಪ್ಯಾಡ್ ಗಳು.
ಈ ಮನೆಯ ಸುತ್ತಲೂ ಕಾಡು, ಹಿಂದಿನಿಂದ ಮಣ್ಣಿನ ಕಚ್ಛಾರಸ್ತೆ, ಏರಿಳಿದು ಹತ್ತಿ ಮುನ್ನಡೆದರೆ ಮರೋಳಿ ಸೇರಬಹುದು ಆದ್ದರಿಂದಲೇ ಈ ಮನೆಯ ಪ್ರದೇಶವನ್ನು ಲೋವರ್ ಮರೋಳಿ ಎನ್ನಲಾಗುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಗೆ ಈ ಪ್ರದೇಶವೂ ಹೊಸದಾಗಿ ಸೇರಿಕೊಂಡಿದ್ದ ಕಾರಣ ಸವಲತ್ತು ಈಗಿನಂತಿರಲಿಲ್ಲ. ದಾರಿ ದೀಪ, ಕುಡಿಯುವ ನೀರು ಎಲ್ಲವೂ ಒಂಥರಾ ಅವ್ಯವಸ್ಥೆ. ಆಗ ಆ ಪ್ರದೇಶದ ಕಾರ್ಪೊರೇಟರ್ ಶಶಿಕಲಾ ಆರ್.ಪ್ರಸಾದ್. ಮುಂದೆ ಅವರು ಉಪಮೇಯರ್ ಕೂಡಾ ಆದರು.
ಈ ಪ್ರದೇಶದಲ್ಲಿ ಏನೇ ಸರ್ಕಾರಿ ಸವಲತ್ತು ಬೇಕಾದರೂ ಪ.ಗೋ ಅನಿವಾರ್ಯ, ಅವರೇ ಖುದ್ದು ಕಾರ್ಪೊರೇಟರ್, ಮೇಯರ್ ಗೆ ಒಂದು ಮಾತು ಹೇಳಿದರಾಯಿತು. ದಾರಿ ದೀಪದಿಂದ ಹಿಡಿದು ಆ ರಸ್ತೆಗೆ ಡಾಮರು ಹಾಕುವುದಕ್ಕೂ ಪ.ಗೋ ಮುಂಚೂಣಿಗೆ ಬರಲೇ ಬೇಕಿತ್ತು.
ಹಾಗೆಂದು ಪ.ಗೋ ಸಿಕ್ಕಿ ಸಿಕ್ಕಿದ್ದಕ್ಕೆಲ್ಲ ಮೂಗು ತೂರಿಸುವ ಅಥವಾ ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿರಲಿಲ್ಲ. ಯಾವುದಕ್ಕೆ ತಾನು ಅನಿವಾರ್ಯ ಎನ್ನುವುದನ್ನು ತಾವೇ ಮನವರಿಕೆ ಮಾಡಿಕೊಂಡು ಅಖಾಡಕ್ಕಿಳಿಯುತ್ತಿದ್ದರು. ಅವರು ಅಖಾಡಕ್ಕೆ ಇಳಿದರೆಂದರೆ ಅದು ಪರಿಹಾರವಾಗಲೇ ಬೇಕು, ಇದು ಅವರ ವೈಶಿಷ್ಟ್ಯ.
ಪ.ಗೋ ಮನೆಗೆ ತಲುಪಿದ ಕೂಡಲೇ ಅವರ ಮೊದಲ ಕೆಲಸವೆಂದರೆ ಧರಿಸಿರುತ್ತಿದ್ದ ಅಂಗಿಯನ್ನು ಕಳಚಿ ಗೂಟಕ್ಕೆ ನೇತಾಡಿಸಿ ಸ್ವಾತೀ ಕಾಫಿ ಎಂದು ಧೈನ್ಯತೆಯಲ್ಲಿ ಕೇಳುವುದು. ಜೊತೆಗೆ ನಾನೂ ಇದ್ದರೆ ನನ್ನೊಂದಿಗೆ ಅವನೂ ಇದ್ದಾನೆ. ಇಲ್ಲಿ ಅವನು ಎಂದರೆ ನಾನು.
ಪ.ಗೋ ಪತಿ ಸಾವಿತ್ರಿ ಅವರನ್ನು ಪೀಡಿಸುತ್ತಿದ್ದುದು ಗಂಟೆಗೊಮ್ಮೆ ಕನಿಷ್ಠ, ಮೂರು ಸಲ ಗರಿಷ್ಠ ಕಾಫಿಗೆ ಮಾತ್ರ. ಅವರಿಗೆ ಊಟದ ಬಗ್ಗೆ ಅಷ್ಟು ಕಾಳಜಿಯೂ ಇರಲಿಲ್ಲ, ಹಸಿವೆಯೂ ಅಷ್ಟಾಗಿ ಇರುತ್ತಿರಲಿಲ್ಲ. ನೀವು ಎಷ್ಟು ಸಲ ಕಾಫಿ ಮಾಡಿಕೊಟ್ಟರೂ ಬೇಡ ಎನ್ನುವ ಮನುಷ್ಯ ಅವರಾಗಿರಲಿಲ್ಲ. ಈಗ ಕುಡಿದದ್ದಲ್ಲ ಎಂದು ಸಾವಿತ್ರಿ ಅವರು ಹೇಳಿದರೆ ಆಯ್ತು, ಈಗೇನು ಮತ್ತೊಮ್ಮೆ ಕೊಟ್ಟರೆ ನೀನು ಕಳೆದುಕೊಳ್ಳುವುದೇನು?.
ಪ.ಗೋ ಅವರ ಅತೀ ಇಷ್ಟದ ಕಾಫಿಯನ್ನು ಅವರು ಎಂದೂ ನಿರಾಕರಿಸುತ್ತಿರಲಿಲ್ಲ ಅಥವಾ ಮಾಡಿಕೊಡುವುದಿಲ್ಲವೆಂದು ಹಠ ಹಿಡಿಯುತ್ತಿರಲಿಲ್ಲ. ಪ್ಲಾಸ್ಕ್ ನಲ್ಲಿ ಕಾಫಿ ಮಾಡಿ ತುಂಬಿಸಿಡುತ್ತಿದ್ದರು. ಮನಸ್ಸಾದಾಗ ಪ್ಲಾಸ್ಕ್ ನಿಂದ ಬಗ್ಗಿಸಿಕೊಂಡು ಕಾಫಿ ಕುಡಿಯುವುದು ಕಷ್ಟವಾಗುತ್ತಿರಲಿಲ್ಲ. ಬಹುಷ ಪ.ಗೋ ಅವರ ಮನೆಯಲ್ಲಿ ಹಾಲು, ಸಕ್ಕರೆ, ಕಾಫಿ ಹುಡಿ ಮತ್ತು ಬೀಡಿ ಖರ್ಚಾಗುವಷ್ಟು ಉಣ್ಣಲು ಅಕ್ಕಿಯೂ ಖರ್ಚಾಗುತ್ತಿರಲಿಲ್ಲ.
ಪ.ಗೋ ಬ್ರಾಹ್ಮಣ, ಆದರೆ ಒಂದೇ ಒಂದು ದಿನವೂ ಅವರು ಹಾಗೆ ನಡೆದುಕೊಳ್ಳಲಿಲ್ಲ ಹಿಂದುಳಿದ ಸಮುದಾಯದ ನನ್ನೊಂದಿಗೆ. ಈ ಮಾತನ್ನು ಅತ್ಯಂತ ಪ್ರಮಾಣಿಕವಾಗಿ ಮತ್ತು ಹೆಚ್ಚು ಜವಾಬ್ದಾರಿಯಿಂದ ಹೇಳುತ್ತಿದ್ದೇನೆ. ಯಾಕೆಂದರೆ ನಾನು ಪತ್ರಿಕೋದ್ಯಮಕ್ಕೆ ಬಂದಾಗ ಯು.ನರಸಿಂಹರಾವ್, ಎ.ವಿ.ಮಯ್ಯ, ಪ.ಗೋ ನನಗೆ ಹೆಚ್ಚು ಆತ್ಮೀಯರಾಗಿದ್ದವರು. ಈ ಮೂವರೂ ತಾವು ಬ್ರಾಹ್ಮಣರು ಎನ್ನುವುದನ್ನು ತಮ್ಮ ಮಾತು-ಕೃತಿಯಲ್ಲಿ ತೋರಿಸಿದವರಲ್ಲ, ಅವರ ಮನೆಯವರೂ ಹಾಗೆಯೇ ನಡೆದುಕೊಂಡವರು. ಯಾಕೆಂದರೆ ಈ ಮೂರೂ ಜನರ ಮನೆಯ ಅಡುಗೆಕೋಣೆಗೆ ಹೋಗಿ ಬೇಕಾದ ತಿಂಡಿ, ಊಟವನ್ನು ತಟ್ಟೆಗೆ ಹಾಕಿಕೊಂಡು ತಿಂದು ಬಟ್ಟಲು ತೊಳೆಯಬಹುದಿತ್ತು, ಇಲ್ಲದಿದ್ದರೆ ಮೋರಿಯಲ್ಲಿ ಹಾಕಿ ಕೈತೊಳೆದುಕೊಂಡು ಬರುತ್ತಿದ್ದವನು. ಕೆಲವೊಮ್ಮೆ ಬಟ್ಟಲು ತೊಳೆದರೆ ಮಯ್ಯರ ಮನೆಯಲ್ಲಿ ಅವರ ಪತ್ನಿ ಕೆಂಡಾಮಂಡಲ, ನರಸಿಂಹರಾವ್ ಮನೆಯವರೂ ಹಾಗೆಯೇ, ಪ.ಗೋ ಮನೆಯಲ್ಲಿ ಹೇಳುವುದೇ ಬೇಡ. ಅವರ ಮನೆ ಮಂದಿಯ ಜೊತೆಗೆ ಒಂದೇ ಡೈನಿಂಗ್ ಟೇಬಲ್ ಮೇಲೆ ಊಟ ಮಾಡಿ ಏಳುತ್ತಿದ್ದೆವು. ಇದು ಕೇವಲ ಒಂದೆರಡು ದಿನದ ಅನುಭವ ಅಲ್ಲ, ಮೂರೂ ಮಂದಿ ಬದುಕಿದ್ದಷ್ಟು ಕಾಲವೂ ಕೂಡಾ.
ಪ.ಗೋ ಮತ್ತು ನರಸಿಂಹರಾವ್ ಸಿಡುಕಿನವರು. ಆದರೆ ಇಬ್ಬರ ಸಿಟ್ಟಿಗೂ ವ್ಯತ್ಯಾಸವಿರುತ್ತಿತ್ತು. ನರಸಿಂಹರಾವ್ ಆವರಿಗೆ ಸಾತ್ವಿಕ ಸಿಟ್ಟು, ಮರುಕ್ಷಣಕ್ಷಮಿಸಿ ಬಿಡುವಂಥ ಗುಣ. ಆದರೆ ಪ.ಗೋ ಅವರಿಗೆ ಸಿಟ್ಟು ಇದ್ದಕ್ಕಿದ್ದಂತೆಯೇ ಬರುತ್ತಿರಲಿಲ್ಲ, ಆದರೆ ಸಿಟ್ಟು ಬಂದರೆ ತಣಿಯುತ್ತಿರಲಿಲ್ಲ. ಇವರು ಸಿಟ್ಟಿಗೆದ್ದರೆ ಸಮಾಧಾನ ಮಾಡುವುದು ಸುಲಭವಾಗಿರಲಿಲ್ಲ.
ತಾನು ಬ್ರಾಹ್ಮಣ ಎನ್ನುವುದನ್ನು ಪ.ಗೋ ಎಂದೂ ಹೇಳಿಕೊಂಡು ತಿರುಗಿದವರಲ್ಲ. ಅವರ ಬಾಲ್ಯದ ನಿಜವಾದ ಹೆಸರು ಪದ್ಯಾಣ ಗೋಪಾಲಕೃಷ್ಣ ಭಟ್ಟ. ಆದರೆ ಅವರು ಸ್ವಂತವಾಗಿ ಯೋಚಿಸುವಷ್ಟು ಸಮರ್ಥರಾದ ಮೇಲೆ ಭಟ್ಟ ಬಿಟ್ಟುಬಿಟ್ಟರು. ಪ.ಗೋಪಾಲಕೃಷ್ಣ ಎಂದಷ್ಟೇ ಉಳಿಸಿಕೊಂಡರು.
ಆಗಷ್ಟೇ ನಾನು ಮುಂಗಾರು ಪ್ರವೇಶ ಮಾಡಿದ್ದೆ. ಹೊಟೇಲ್ ವುಡ್ ಲ್ಯಾಂಡ್ಸ್ ನಲ್ಲಿ ಜನಪಾಪಕ್ಷದವರ ಪತ್ರಿಕಾಗೋಷ್ಠಿ. ಪತ್ರಿಕಾಗೋಷ್ಠಿ ಕರೆದಿದ್ದವರು ಎಚ್.ರಾಮಯ್ಯ ನಾಯ್ಕ್. ಆಗ ಮಂಗಳೂರಲ್ಲಿ ಜನತಾ ಪಕ್ಷದಲ್ಲಿ ಎರಡು ಬಣ. ಒಂದು ಬಣ ಮಾರ್ಕೇಟ್ ಬಿಲ್ಡಿಂಗ್ ನಲ್ಲಿ ಕಚೇರಿ ಹೊಂದಿದ್ದರೆ ಮತ್ತೊಂದು ಬಣ ಎಂ.ಸಂಜೀವ ಅವರ ಬಾಡಿಗೆದಾರರ ಸಂಘ ಅರ್ಥಾತ್ ಲೊಬೋ ಪ್ರಭು ಅವರ ಕಟ್ಟಡದಲ್ಲಿ. ಈ ಜಟಾಪಟಿ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ.
ಪತ್ರಿಕಾಗೋಷ್ಠಿ ಆರಂಭವಾಗಿರಲಿಲ್ಲ. ಮಯ್ಯ, ನಾನು, ನರಸಿಂಹರಾವ್, ಉಭಯ, ಪ.ಗೋ ಆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದೆವು. ಕೊನೆಯವರಾಗಿ ಬಂದ ಪ.ಗೋ ಕಾರ್ಯಕರ್ತರ ಜನಜಂಗುಳಿಯಿಂದಾಗಿ ಹಿಂದಿನ ಸಾಲಿನಲ್ಲಿ ಕುರ್ಚಿ ಎಳೆದು ಕುಳಿತುಕೊಂಡರು. ಅಷ್ಟರಲ್ಲಿ ಪ.ಗೋ ಅವರನ್ನು ಮುಂದೆ ಬಂದು ಕುಳಿತುಕೊಳ್ಳಲು ವಿನಂತಿಸುವಾಗ ಒಬ್ಬ ಮಧ್ಯವಯಸ್ಕ ಕಾರ್ಯಕರ್ತ ಭಟ್ರೆ ಮುಂದೆ ಬನ್ನಿ .. ಭಟ್ರೆ ಇಲ್ಲಿಗೆ ಬನ್ನಿ ಎಂದು ಪ.ಗೋ ಅವರನ್ನು ಕರೆದರು.
ಭಟ್ರೆ ಎನ್ನುವುದನ್ನು ಕೇಳಿದ ಕೂಡಲೇ ಪ.ಗೋ ಸುತ್ತಲೂ ಕಣ್ಣಾಡಿಸಿ ಬೇರೆ ಯಾರನ್ನಾದರೂ ಕರೆದಿರಬಹುದೇ ಎನ್ನುವುದನ್ನು ಖಾತ್ರಿಪಡಿಸಿಕೊಂಡು ಹಾಗೆ ಕರೆದ ವ್ಯಕ್ತಿಯನ್ನು ಕೈ ಸನ್ನೆಯಿಂದಲೇ ಏನು ಎಂದು ಕೇಳಿದರು.
ಇಲ್ಲಿಗೆ ಬನ್ನಿ ಎಂದು ಆ ವ್ಯಕ್ತಿ ಮತ್ತೆ ಕರೆದರು. ದಿಢೀರನೆ ಮೇಲಕ್ಕೆದ್ದ ಪ.ಗೋ ಆ ಕಾರ್ಯಕರ್ತನ ಬಳಿಗೆ ಹೋದರು. ನಾವು ನೋಡುತ್ತಿದ್ದಂತೆಯೇ ನಾನು ಭಟ್ಟನೆಂದು ನಿನಗೆ ಹೇಳಿದವರು ಯಾರೂ? ಪ. ಗೋ ಏರು ಸ್ವರದಲ್ಲಿ ಕೇಳಿದರು. ಆ ವ್ಯಕ್ತಿ ತಬ್ಬಿಬ್ಬಾಗಿ ಬಾಯಿಂದ ಮಾತೇ ಹೊರಡಲಿಲ್ಲ. ಒಂದು ಕ್ಷಣ ನಿಶ್ಯಬ್ಧ. ನನ್ನಪ್ಪ ಬಂದು ನಿನ್ನ ಕಿವಿಯಲ್ಲಿ ಹೇಳಿದನೇ?, ನನ್ನಪ್ಪ ಹೋಗಿದ್ದಾನೆ ಅವನು ಬಂದು ಹೇಳಿದನೇ ? ಮತ್ತೆ ಮತ್ತೆ ಪ.ಗೋ ಕೆಂಡಾಮಂಡಲವಾಗಿ ಕೇಳಿದರು.
ನೆರೆದವರು ಮೂಕವಿಸ್ಮಿತರಾಗಿಬಿಟ್ಟರು. ನರಸಿಂಹರಾವ್ ಎದ್ದು ಬಂದು ಪ.ಗೋ ಅವರನ್ನು ಸಮಾಧಾನಪಡಿಸಿ ಸುಮ್ಮನಿರುವಂತೆ ಹೇಳಿದರು. ಆದರೂ ಪ.ಗೋ ಕದಲುವುದಿಲ್ಲ. ಕೊನೆಗೆ ಪ.ಗೋ ಅವರನ್ನು ನರಸಿಂಹರಾವ್ ಅಲ್ಲಿಂದ ಕೈಹಿಡಿದು ಎಳೆದುಕೊಂಡು ಸ್ವಲ್ಪ ದೂರ ಬಂದು ನನ್ನನು ಕರೆದರು. ಆಚೆ ಹೋಗಿ ಬನ್ನಿ ಎಂದರು. ನಾನು ಪ.ಗೋ ಅವರನ್ನು ಕರೆದುಕೊಂಡು ವುಡ್ ಲ್ಯಾಂಡ್ ಹೊಟೇಲ್ ಕೌಂಟರ್ ಸೋಪಾದ ಮೇಲೆ ಕುಳಿತು ಅಲ್ಲಿಗೇ ಎರಡು ಕಾಫಿ ತರಿಸಿ ಕುಡಿದ ಮೇಲೆ ಸಮಾಧಾನವಾದರು. (ಮುಂದುವರಿಯುವುದು).
ಪತ್ರಕರ್ತ ಚಿದಂಬರ ಬೈಕಂಪಾಡಿ