ಫೋಟೋ-ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ದುಬೈ, ಜೂ.26: ಯುಎಇಯ ಬ್ಯಾರೀಸ್ ಕಲ್ಚರಲ್ ಫೋರಂ ಪ್ರತಿವರ್ಷದಂತೆ ಈ ಬಾರಿಯೂ ‘ಬಿಸಿಎಫ್‌ನ ಇಫ್ತಾರ್‌ಕೂಟ-2015’ನ್ನು ಶುಕ್ರವಾರದಂದು ದುಬೈ ಕರಾಮದ ಇರಾನಿಯನ್ ಕ್ಲಬ್ ಹಾಲ್‌ನಲ್ಲಿ ಬಹಳ ಅದ್ದೂರಿಯಾಗಿ ಆಯೋಜಿಸಿತ್ತು.
ಮಂಗಳೂರು, ಉಡುಪಿ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ನೆಲೆಸಿರುವ ಬ್ಯಾರಿ ಸಮುದಾಯದಲ್ಲಿರುವ ಬಡವರ್ಗದ ಮಕ್ಕಳ ಶೈಕ್ಷಣಿಕ, ಸಾಮಾಜಿಕ ಕಲ್ಯಾಣದ ದಿಸೆಯಲ್ಲಿ ಆರಂಭಗೊಂಡ ಬಿಸಿಎಫ್, ಇಂದು ಬ್ಯಾರಿ ಸಮುದಾಯದ ಆಶೋತ್ತರಗಳಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದೆ.
ಶುಕ್ರವಾರದಂದು ಆಯೋಜಿಸಲಾದ ಇಫ್ತಾರ್ ಕೂಟದಲ್ಲಿ ಹಿಂದೂ-ಕ್ರಿಶ್ಚನ್ ಸಮುದಾಯದ ಮುಖಂಡರು ಭಾಗವಹಿಸುವ ಮೂಲಕ ಸೌಹಾರ್ದತೆಯನ್ನು ಮೆರೆದರು. ನೂರಾರು ಮಂದಿ ಪಾಲ್ಗೊಂಡ ಬೃಹತ್ ಇಫ್ತಾರ್‌ಕೂಟದಲ್ಲಿ ಸಾಮೂಹಿಕವಾಗಿ ವೃತವನ್ನು ಅಂತ್ಯಗೊಳಿಸಿದರು.
ಉಪವಾಸವನ್ನು ಅಂತ್ಯಗೊಳಿಸುವುದಕ್ಕೂ ಮುನ್ನ ಕಿರಾತ್, ಕ್ವಿಝ್ ಸ್ಪರ್ಧೆ, ವಿಜೇತರಿಗೆ ಬಹುಮಾನ ವಿತರಣೆ ಬಳಿಕ ಇಸ್ಲಾಮಿನ ಕುರಿತ ಉಪನ್ಯಾಸ, ಅನಂತರ ಇಫ್ತಾರ್‌ಕೂಟ, ಅದರ ನಂತರ ಸಭಾ ಕಾರ್ಯಕ್ರಮ ನಡೆಯಿತು.
ಇಫ್ತಾರ್‌ಕೂಟದ ಬಳಿಕ ಬಿಸಿಎಫ್‌ನ ಅಧ್ಯಕ್ಷರಾದ ಡಾ.ಬಿ.ಕೆ.ಯೂಸುಫ್‌ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ದೇವಾಡಿಗ ಸಂಘ ದುಬೈ ಇದರ ಅಧ್ಯಕ್ಷ, ಆಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್‌ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಬಿಲ್ಲವಾಸ್ ದುಬೈಯ ಸತೀಶ್ ಪೂಜಾರಿ, ಶಾರ್ಜಾ ಕರ್ನಾಟಕ ಸಂಘದ ಕೆ.ಆರ್.ತಂತ್ರಿ, ಪ್ರಭಾಕರ್ ಅಂಬಲತೆರ ಇಫ್ತಾರ್‌ಕೂಟಕ್ಕೆ ಹಾಗೂ ಬಿಸಿಎಫ್‌ನ ಕಾರ್ಯಸಾಧನೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸುಗಂಧರಾಜ್ ಬೇಕಲ್, ಬಿಸಿಎಫ್ ಉಪಾಧ್ಯಕ್ಷ ಎಂ.ಇ.ಮೂಳೂರು, ಇಫ್ತಾರ್‌ಕೂಟದ ಸಂಚಾಲಕ ಅಬ್ದುಲ್ ಲತೀಫ್ ಮೂಲ್ಕಿ, ಕಾರ್ಯದರ್ಶಿ ಡಾ.ಕಾಪು ಮೊಹಮ್ಮದ್, ಸಂಶುದ್ದೀನ್ ಹನೀಫಿ, ಉಸ್ಮಾನ್ ಮೂಳೂರು, ಮುಸ್ತಫಾ, ಅಬುಸಾಲಿ, ರಝಾಕ್ ದೇವಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತನ್ವೀರ್ ರಝಾಕ್ ವಂದಿಸಿದರು.