ಕುಂದಾಪುರ: ದೇವಳದ ಬಾಗಿಲು ಮುರಿದು ಒಳನುಸುಳಿದ ಕಳ್ಳರು ದೇವರಿಗೆ ತೊಡಿಸಿದ್ದ ಬೆಳ್ಳಿಯ ಮುಖವಾಡ, ಕಾಣಿಕೆ ಹುಂಡಿ ದೋಚಿದ್ದು ಇನ್ನೊಂದು ದೈವಸ್ಥಾನದ ಬೀಗಮುರಿದು ಕಾಣಿಕೆ ಹುಂಡಿ ಒಡೆದ ಹಣ ಕದ್ದೊಯ್ದ ಘಟನೆ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ವಂಡ್ಸೆ ಎಂಬಲ್ಲಿ ಭಾನುವಾರ ಮುಂಜಾನೆ (ಶನಿವಾರ ತಡರಾತ್ರಿ) ನಡೆದಿದೆ.
ವಂಡ್ಸೆಯ ಶ್ರೀ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಕಳ್ಳರು ಬೆಳ್ಳಿ ಆಭರಣ ದೋಚಿದ್ದು, ಇಲ್ಲಿಯೇ ಸಮೀಪದ ವಂಡ್ಸೆಯ ಭದ್ರಮಹಾಕಾಳಿ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳವಾಗಿದೆ.
ಕುಂದಾಪುರ-ಕೊಲ್ಲೂರು ಹೆದ್ದಾರಿಯ ಸಮೀಪದಲ್ಲಿಯೇ ವಂಡ್ಸೆಯ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನವಿದ್ದು ತಡರಾತ್ರಿ ಒಂದು ಗಂಟೆ ಬಳಿಕ ಕೃತ್ಯ ನಡೆದಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ದೇವಸ್ಥಾನದ ಬಾಗಿಲು ಮುರಿದ ಕಳ್ಳರು ಗರ್ಭಗುಡಿ ಪ್ರವೇಶಿಸಿ ದೇವರಿಗೆ ತೊಡಿಸಿದ್ದ ಬೆಳ್ಳಿಯ ಮುಖವಾಡ, ಬೆಳ್ಳಿ ಘಂಟೆ, ಬೆಳ್ಳಿಯ 4 ಪತಾಕೆಗಳನ್ನು ಕದ್ದಿದ್ದಾರೆ. ಅಲ್ಲದೇ ದೇವಸ್ಥಾನದ ಪ್ರಾಂಗಣದಲ್ಲಿರುವ ಆಂಜನೇಯ ಗುಡಿಯಲ್ಲಿದ್ದ ಕಾಣಿಕೆ ಹುಂಡಿಯನ್ನು ಕದ್ದೊಯ್ದಿದ್ದಾರೆ. ಬೆಳ್ಳಿ ಆಭರಣಗಳು ಹಾಗೂ ಹುಂಡಿಯಲ್ಲಿದ್ದ ಹಣ ಒಳಗೊಂದಂತೆ ಅಂದಾಜು 80 ಸಾವಿರಕ್ಕೂ ಅಧಿಕ ಸೊತ್ತುಗಳು ಕಳವಾಗಿದೆ. ಇನ್ನು ಕಳ್ಳರು ದೇವಳದ ಎರಡು ಕಛೇರಿಯ ಬಾಗಿಲುಗಳನ್ನು ಒಡೆದು ತಡಕಾಡಿದ್ದಲ್ಲದೇ ಡ್ರಾಯರನ್ನು ಮುರಿದಿದ್ದಾರೆ.
ಇನ್ನು ವಂಡ್ಸೆ ಸಮೀಪದ ಭದ್ರಮಹಾಕಾಳಿ ದೇವಸ್ಥಾನದ ಬಾಗಿಲಿನ ಚಿಲಕ ಮುರಿದು ಒಳಹೊಕ್ಕ ಕಳ್ಳರು ಕಾಣಿಕೆ ಹುಂಡಿಯನ್ನು ಕದ್ದೊಯ್ದಿದ್ದಾರೆ.
ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಬೈಂದೂರು ವೃತ್ತನಿರೀಕ್ಷಕ ಸುದರ್ಶನ್, ಕೊಲ್ಲೂರು ಎಸ್ಸೈ ಜಯಂತ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈಊ ಬಗ್ಗೆ ಪ್ರಕರಣ ದಾಖಲಾಗಿದೆ.