ಬೆಂಗಳೂರು: ಕಳೆದ ಫೆಬ್ರವರಿಯಲ್ಲಿ ಬಂಧನವಾದ ಭೂಗತ ಪಾತಕಿ ಬನ್ನಂಜೆ ರಾಜನನ್ನು ಕರ್ನಾಟಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಫ್ರಿಕಾದ ಮೊರಕ್ಕೊದಲ್ಲಿ ಆಂತರಿಕ ಭದ್ರತಾ ವಿಭಾಗದ ಪೊಲೀಸರು ಈತನನ್ನು ಬಂಧಿಸಿದ್ದು, ಕರ್ನಾಟಕ ರಾಜ್ಯ ಪೊಲೀಸರು ಬೆಂಗಳೂರಿಗೆ ಕರೆತರುವ ಸಿದ್ಧತೆ ನಡೆಸಿದ್ದಾರೆ.
ಕೊಲೆ, ಬೆದರಿಕೆ, ಹಫ್ತಾವಸೂಲಿ ಸೇರಿದಂತೆ ಹಲವಾರು ಅಪರಾಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬನ್ನಂಜೆರಾಜನನ್ನು ಕಳೆದ ಫೆಬ್ರವರಿಯಲ್ಲಿ ಮೊರೆಕ್ಕೊ ಪೊಲೀಸರು ಬಂಧಿಸಿದ್ದರು.
ದುಬೈಯಲ್ಲಿರುವ ಕರಾವಳಿ ಮೂಲದ ಖ್ಯಾತ ಹೊಟೇಲ್ ಉದ್ಯಮಿಯೊಬ್ಬರಿಗೆ 5 ಕೋಟಿ ರೂ.ನೀಡುವಂತೆ ಬನ್ನಂಜೆ ರಾಜಾ ಬೆದರಿಕೆ ಹಾಕಿದ್ದ. ಈ ವೇಳೆ ರಾಜಾನ ವಿರುದ್ಧ ಉದ್ಯಮಿ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರಕಾರದ ಗೃಹ ಖಾತೆ ಇಲಾಖೆ, ರಾಜಾ ಬಂಧನಕ್ಕೆ ಕಾರ್ಯತಂತ್ರ ರೂಪಿಸಿತ್ತು. ಭಾರತೀಯ ಗುಪ್ತಚರ ಸಂಸ್ಥೆ ‘ರಾ’ದ ಅಧಿಕಾರಿಗಳು ಮೊರೆಕ್ಕೊ ಪೊಲೀಸರ ಸಹಕಾರದೊಂದಿಗೆ ಬಂಧಿಸಲಾಗಿತ್ತು.
ಮೂರು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದ ಬನ್ನಂಜೆರಾಜಾ ಮೊರಕೋದಲ್ಲಿ ಹೆಗ್ಡೆ ಕುಮಾರ್ ರಾಜಾ ಹೇಮಂತ್ ಎಂಬ ಹೆಸರನ್ನಿಟ್ಟುಕೊಂಡು ತನ್ನ ಕರಾಳಕೃತ್ಯಗಳನ್ನು ಎಸಗುತ್ತಿದ್ದ. ಫೆ.9ರಂದು ಭಾರತೀಯ ಗುಪ್ತಚರ ಸಂಸ್ಥೆ ‘ರಾ’ದ ಸಹಕಾರದೊಂದಿಗೆ ಮೊರಕೋದಲ್ಲಿ ಅಲ್ಲಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಈ ವೇಳೆ ಆತನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದರು. ಮುಖ್ಯವಾಗಿ ಕರ್ನಾಟಕ ಪೊಲೀಸರಿಗೆ ಬೇಕಾಗಿದ್ದ ಬನ್ನಂಜೆ ರಾಜಾನನನ್ನು ಕರೆತರಲು ಕರ್ನಾಟಕ ಪೊಲೀಸರು ಮೊರೆಕ್ಕೋಗೆ ತೆರಳಿದ್ದರು.
ಸದ್ಯ ಬನ್ನಂಜೆ ತನ್ನ ಯಾವುದೇ ಪ್ರಕರಣಗಳು ಕರ್ನಾಟಕದಲ್ಲಿಲ್ಲ ಎಂಬ ಮನವಿಯನ್ನು ತಿರಸ್ಕರಿಸಿರುವ ಮೊರಕ್ಕೋ ನ್ಯಾಯಾಲಯ, ಕರ್ನಾಟಕ ಪೊಲೀಸರ ಕಸ್ಟಡಿಗೆ ಬನ್ನಂಜೆಯನ್ನು ಪಡೆಯುವ ಮನವಿ ಪುರಸ್ಕರಿಸಿದೆ ಎಂದು ತಿಳಿದುಬಂದಿದೆ. ಮೊದಲು ಬೆಂಗಳೂರು ಪೊಲೀಸರು ಈತನನ್ನು ಕಸ್ಟಡಿಗೆ ಪಡೆದು, ನಂತರ ಮಂಗಳೂರು, ಮೈಸೂರು, ಉಡುಪಿ ಜಿಲ್ಲೆಗಳ ಪೊಲೀಸರು ಕಸ್ಟಡಿಗೆ ಪಡೆಯುತ್ತಾರೆ ಎನ್ನಲಾಗಿದ್ದು, ಜೊತೆಗೆ ಬೇರೆ ರಾಜ್ಯದವರು ಈತನನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ.