ಕರಾವಳಿ

ಬಹುಕ್ಷೇತ್ರ ಸಾಧಕ-ಸೇವಾರ್ಥಿ ಲೀಲಾಧರ್ ಬೈಕಂಪಾಡಿಗೆ ರಾಷ್ಟ್ರ ಮಟ್ಟದ ‘ಸಮಾಜ ರತ್ನ’ ಪ್ರಶಸ್ತಿ;  ವರ್ಷದೊಳಗೆ ಸರಣಿಯಲ್ಲಿ ತ್ರೈ-ಪ್ರಶಸ್ತಿಯ ಗೌರವಕ್ಕೆ ಪಾತ್ರನಾದ ಬಹ್ರೈನ್‍ನ ಪ್ರಥಮ ಕನ್ನಡಿಗ

Pinterest LinkedIn Tumblr

Leeladhar Baikampady-Snap 1

ಬೆಂಗಳೂರು: ಬಹ್ರೈನ್ ಮೂಲದ ಬಹುಕ್ಷೇತ್ರ ಸಾಧಕ ತಥಾ ಸೇವಾರ್ಥಿ ಲೀಲಾಧರ್ ಬೈಕಂಪಾಡಿಯವರು ತನ್ನ ಬಹುಮುಖಿ ಸಮಾಜ ಸೇವೆ, ವೈವಿಧ್ಯಮಯ ಸಾಹಿತ್ಯ-ಸಾಂಸ್ಕೃತಿಕ-ಸಾಂಘಿಕ ಚಟುವಟಿಕೆಗಳು ಹಾಗೂ ಇತರ ವಿಶಿಷ್ಟ ಸೇವೆ ಮತ್ತು ಸಾಧನೆಗಳಿಗಾಗಿ ಇದೀಗ ಬೆಂಗಳೂರಿನ ಜ್ಞಾನ ಮಂದಾರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಕಾಡೆಮಿಯು ಕೊಡಮಾಡುವ 2015ರ ಸಾಲಿನ ರಾಷ್ಟ್ರ ಮಟ್ಟದ ಪ್ರತಿಷ್ಠಿತ ‘ಸಮಾಜ ರತ್ನ’ ಪ್ರಶಸ್ತಿಗೆ ಆಯ್ಕೆಗೊಂಡಿರುತ್ತಾರೆ.

ತನ್ನ ಯಶಸ್ವಿ ಮುಂದಾಳತ್ವ, ಸಾಮಾಜಿಕ ಮತ್ತು ಸಂಘಟನಾ ಕ್ಷೇತ್ರದ ಸೇವೆ-ಸಾಧನೆಗಳಿಗಾಗಿ ಪ್ರಥಮವಾಗಿ ಬೆಂಗಳೂರಿನ ‘ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ’ದ ‘ರಾಷ್ಟ್ರೀಯ ಭೂಷಣ’ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪಡೆದಿರುವ ಇವರು, ದ್ವಿತೀಯವಾಗಿ ನವ ದೆಹಲಿಯ ‘ಆಲ್ ಇಂಡಿಯಾ ನ್ಯಾಷನಲ್ ಯೂನಿಟಿ ಕೌನ್ಸಿಲ್’ ಸಂಸ್ಥೆಯ ರಾಷ್ಟ್ರ ಮಟ್ಟದ ‘ರಾಷ್ಟ್ರೀಯ ಏಕತಾ ಪ್ರಶಸ್ತಿ’ಗೆ ಭಾಜನರಾಗಿರುತ್ತಾರೆ. ಇವರ ವಿವಿಧ ಕ್ಷೇತ್ರಗಳ ನಿರಂತರವಾದ ಸೇವೆ ಮತ್ತು ಸಾಧನೆಗಳಿಗೆ ಸಲ್ಲುತ್ತಿರುವ ಮನ್ನಣೆಯು ಇಲ್ಲಿಗೆ ನಿಲ್ಲದೆ ಇದೀಗ ಇವರು ಮತ್ತೊಂದು ರಾಷ್ಟ್ರ ಮಟ್ಟದ ಪ್ರತಿಷ್ಠಿತ ‘ಸಮಾಜ ರತ್ನ’ ಪ್ರಶಸ್ತಿಗೆ ಆಯ್ಕೆಗೊಂಡಿದ್ದು, ಆ ಮೂಲಕ ಕೇವಲ ಒಂದು ವರ್ಷದ ಅವಧಿಯೊಳಗೆ ಸರಣಿಯಲ್ಲಿ ಪ್ರತಿಷ್ಠಿತ ತ್ರೈ-ಪ್ರಶಸ್ತಿಯ ಗೌರವಕ್ಕೆ ಪಾತ್ರನಾದ ಕೊಲ್ಲಿಯ ಇಲ್ಲವೆ ಬಹ್ರೈನ್ ಮೂಲದ ಪ್ರಥಮ ಅನಿವಾಸಿ ಭಾರತೀಯ ಯಾ ಕನ್ನಡಿಗ ಎಂಬ ವಿಶೇಷ ಕೀರ್ತಿಗೆ ಪಾತ್ರರಾಗುವಂತಾಗಿದೆ.

ಅತಿ ಎಳವೆಯಿಂದ ಆರಂಭಿಸಿ ನಿರಂತರವಾಗಿ ಗತ ಸುಮಾರು 28 ವರ್ಷಗಳಿಂದ ನಿಸ್ವಾರ್ಥವಾದ ನಾಡು-ನುಡಿ ಸೇವೆ, ಸಾಹಿತ್ಯ-ಸಂಸ್ಕೃತಿ ಸೇವೆ ಹಾಗೂ ಸಮುದಾಯ-ಸಂಘಟನೆ-ಸಮಾಜ ಸೇವೆಯನ್ನು ದೇಶ-ವಿದೇಶಗಳಲ್ಲಿ ಗೈಯುತ್ತಾ ಬಂದಿರುವ ಲೀಲಾಧರ್ ಬೈಕಂಪಾಡಿಯವರು ಕಳೆದ 17 ವರ್ಷಗಳಿಂದ ಉದ್ಯೋಗ ನಿಮಿತ್ತ ಕೊಲ್ಲಿಯ ಬಹ್ರೈನ್ ದೇಶದಲ್ಲಿ ವಾಸ್ತವ್ಯವಿದ್ದು, ಅಲ್ಲಿ ಖಾಸಗಿ ಕಂಪನಿ ಸಮೂಹವೊಂದರ ವಿತ್ತ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಬಹ್ರೈನ್ ಮಾತ್ರವಲ್ಲದೆ ಅವಿಭಜಿತ ದ.ಕ. ಜಿಲ್ಲೆ, ಬೆಂಗಳೂರು ಮತ್ತು ಮುಂಬೈಯಲ್ಲೂ ವಿವಿಧ ಸಮೂಹ ಮತ್ತು ಸಂಘಟನೆಗಳ ಮೂಲಕ ತುಳುವರು, ಕನ್ನಡಿಗರು ಹಾಗೂ ಭಾರತೀಯರಿಗೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ, ಸಾಂಘಿಕ, ಸಾಹಿತ್ಯಿಕ ಹಾಗೂ ಜನಪರ ಸೇವಾ ಕಾರ್ಯಚಟುವಟಿಕೆಗಳಲ್ಲಿ ಸದಾ ನಿರತರಾಗಿದ್ದಾರೆ. ಇವರೋರ್ವ ಚತುರ ಸಂಘಟಕ, ಸಮಾಜ ಸೇವಾ ಕಾರ್ಯಕರ್ತ, ಪ್ರಶಸ್ತಿ ವಿಜೇತ ರಂಗ ಕಲಾವಿದ, ಯುವ ಸಾಹಿತಿ, ಸಮಾಜಮುಖಿ ಚಿಂತನೆಯ ತಥಾ ಪ್ರಗತಿಪರ ವಿಚಾರಧಾರೆಯ ಯುವ ಸಾಮಾಜಿಕ ಮುಂದಾಳುವಾಗಿ ನಾಡಿನ ಮತ್ತು ಹೊರನಾಡಿನ ತುಳುವರು, ಕನ್ನಡಿಗರು ಹಾಗೂ ಭಾರತೀಯರ ಮಧ್ಯೆ ಗುರುತಿಸಿಕೊಂಡವರಾಗಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿಯೋರ್ವರನ್ನು ಬಹ್ರೈನ್ ನೆಲದಲ್ಲಿ ಕಾಣುವ ಬಹ್ರೈನ್ ಕನ್ನಡಿಗರ ಬಹು ಕಾಲದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ತಾನು ಏಕಾಂಗಿಯಾಗಿ ಪ್ರಯತ್ನಿಸಿ 2008ರ ನವೆಂಬರ್‌ನಲ್ಲಿ ಕರ್ನಾಟಕದ ಅಂದಿನ ಮುಖ್ಯಮಂತ್ರಿಯಾಗಿದ್ದ ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರು ಉನ್ನತ ಮಟ್ಟದ ಸರಕಾರಿ ನಿಯೋಗ ಸಹಿತವಾಗಿ ಬಹ್ರೈನ್‍ಗೆ ಭೇಟಿ ನೀಡುವಂತೆಯೂ ಮತ್ತು ಅಲ್ಲಿ ಕನ್ನಡ ಭವನದ ಸ್ಥಾಪನೆಗೆ ಅವರು ರೂ.1 ಕೋಟಿಯ ಅನುದಾನವನ್ನು ನೀಡುವಂತೆಯೂ ಮಾಡಿದುದು ಇವರು ವಿದೇಶದಲ್ಲಿ ಗೈದ ಮಹತ್ವದ ಸಮಾಜಮುಖಿ ಸಾಧನೆಗಳಲ್ಲಿ ಒಂದಾಗಿದೆ. ನಾಡು ಮತ್ತು ಹೊರನಾಡಿನಲ್ಲಿ ಕೆಲವು ಸಾಮಾಜಿಕ ಸಂಘಟನೆಗಳ ಸ್ಥಾಪನೆಯ ರೂವಾರಿಯೂ ಆಗಿರುವ ಇವರು ತನ್ನದೇ ಸಂಯೋಜಕತ್ವದ ಕಾಂಚನ್ ಪ್ರತಿಷ್ಠಾನದ ಮೂಲಕವೂ ಆಗಾಗ ವೈವಿಧ್ಯಮಯ ಜನಪರ ಚಟುವಟಿಕೆಗಳನ್ನು ಗೈಯುತ್ತಿರುತ್ತಾರೆ.

ಮಂಗಳೂರು ಮತ್ತು ಮುಂಬೈಯಲ್ಲಿ ವ್ಯಾಸಂಗವನ್ನು ಗೈದಿರುವ ಇವರು ನಾಯಕತ್ವವನ್ನು ತಾರುಣ್ಯದಿಂದಲೂ ಮೈಗೂಡಿಸಿಕೊಂಡಿದ್ದು, ಈ ಹಿಂದೆ ಸರ್ವ ಕಾಲೇಜು ವಿದ್ಯಾರ್ಥಿ ಕ್ಷೇತ್ರದ ಪ್ರತಿನಿಧಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟರ್ ಆಗಿಯೂ ಆಯ್ಕೆಗೊಂಡಿದ್ದರು. ಬಹ್ರೈನ್‍ನಲ್ಲಿ ಇಂಡಿಯನ್ ಕ್ಲಬ್, ಕರ್ನಾಟಕ ಸೋಶಿಯಲ್ ಕ್ಲಬ್, ಮಹಾರಾಷ್ಟ್ರ ಕಲ್ಚರಲ್ ಸೊಸೈಟಿ ಮುಂತಾದ ಸಂಸ್ಥೆಗಳಲ್ಲಿ ಸದಸ್ಯರಾಗಿರುವ ಇವರು ಸದ್ಯ ಮೊಗವೀರ್ಸ್ ಬಹ್ರೈನ್ ಸಂಸ್ಥೆಯ ದಶಮಾನೋತ್ಸವ ಅವಧಿಯ ಅಧ್ಯಕ್ಷರಾಗಿಯೂ ಸದಾ ಸಕ್ರಿಯರಾಗಿದ್ದಾರೆ.

ಲೀಲಾಧರ್ ಬೈಕಂಪಾಡಿಯವರು ಗತ ಸುಮಾರು 28 ವರ್ಷಗಳಿಂದ ಸಂಘಟನೆ ಮತ್ತು ಸಮಾಜ ಸೇವಾ ಕ್ಷೇತ್ರಕ್ಕೆ ನಿರಂತರವಾಗಿ ನೀಡುತ್ತಾ ಬಂದಿರುವ ಮೌಲಿಕ ಕೊಡುಗೆಗಳನ್ನು ಪರಿಗಣಿಸಿ ಬೆಂಗಳೂರಿನ ಜ್ಞಾನ ಮಂದಾರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಕಾಡೆಮಿಯು ಇವರನ್ನು ಇದೀಗ ತನ್ನ ರಾಷ್ಟ್ರ ಮಟ್ಟದ ಪ್ರತಿಷ್ಠಿತ ‘ಸಮಾಜ ರತ್ನ’ ಪ್ರಶಸ್ತಿಗೆ ಆಯ್ಕೆಗೊಳಿಸಿದ್ದು, ಈ ಪ್ರಶಸ್ತಿಯನ್ನು ಅಕಾಡೆಮಿಯು ಇದೇ ತಿಂಗಳ ಅಂತ್ಯದೊಳಗೆ ಬೆಂಗಳೂರಿನಲ್ಲಿ ಜರಗಲಿರುವ ಸಮಾರಂಭದಲ್ಲಿ ವಿಜೇತ ಸಾಧಕ ಲೀಲಾಧರ್ ಬೈಕಂಪಾಡಿಯವರಿಗೆ ವಿವಿಧ ಉನ್ನತ ಮಟ್ಟದ ಗಣ್ಯರ ಘನ ಉಪಸ್ಥಿತಿಯಲ್ಲಿ ಪ್ರದಾನಿಸಲಿದೆ.

Write A Comment