ಅಂತರಾಷ್ಟ್ರೀಯ

ಮೊರಕ್ಕೊ ಜೈಲಿನಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜ ಮುಂದಿನ ವಾರ ಕರ್ನಾಟಕಕ್ಕೆ: ಕರೆತರಲು ಸಕಲ ಸಿದ್ಧತೆ: ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್

Pinterest LinkedIn Tumblr

Bannanje raja122

ಬೆಂಗಳೂರು: ಮೊರಕ್ಕೊ ಜೈಲಿನಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜನನ್ನು ಒಂದು ವಾರದಲ್ಲಿ ಭಾರತಕ್ಕೆ ಕರೆತರಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರು ಹೇಳಿದ್ದಾರೆ.

ಈ ಸಂಬಂಧ ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಫೆಬ್ರುವರಿಯಲ್ಲಿ ಆಫಿಕಾ ಪೊಲೀಸರ ವಶದಲ್ಲಿರುವ ಬನ್ನಂಜೆ ರಾಜನನ್ನು ರಾಜ್ಯಕ್ಕೆ ಕರೆ ತರಲು, ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಆರು ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಲಾಗಿದೆ ಎಂದರು.

44 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಪಾತಕಿ ಬನ್ನಂಜೆ ರಾಜನನ್ನು ವಶಕ್ಕೆ ಪಡೆಯುವ ಸಂಬಂಧ ಮೊರಾಕ್ಕೊ ದೇಶಕ್ಕೆ ಪ್ರಯಾಣಿಸಲು ಪೊಲೀಸರು ರಾಜ್ಯ ಸರ್ಕಾರದ ಅನುಮತಿ ಕೋರಿ ಪತ್ರ ಬರೆದಿದ್ದರು. ವಿದೇಶ ಪ್ರಯಾಣಕ್ಕೆ ರಾಜ್ಯ ಸರ್ಕಾರದ ಅನುಮತಿ ದೊರೆತಿದ್ದು, ಈಗ ಉನ್ನತಾಧಿಕಾರಿಗಳ ಮಟ್ಟದ ವಿಶೇಷ ತಂಡ ಕಳುಹಿಸಿ ಆತನನ್ನು ಬಂಧಿಸಿ ಕರೆತರಲಾಗುತ್ತಿದೆ.

ಕಳೆದ ಫೆಬ್ರವರಿಯಲ್ಲಿ ಹಣಕ್ಕಾಗಿ ಉದ್ಯಮಿಗೆ ಬೆದರಿಕೆ ಹಾಕಿದ ಆರೋಪದ ಸಂಬಂಧ ಬನ್ನಂಜೆ ರಾಜನನ್ನು ಮೊರಕ್ಕೊ ಪೊಲೀಸರು ಬಂಧಿಸಿದ್ದರು. ಆತನ ವಿರುದ್ಧ ಮಂಗಳೂರು, ಬೆಂಗಳೂರು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಅಪರಾಧ ಪ್ರಕರಣ ದಾಖಲಾಗಿವೆ. ಈ ಕೃತ್ಯಗಳ ಬಳಿಕ ಪೊಲೀಸರಿಗೆ ಸಿಗದೆ ರಾಜ ತಲೆಮರೆಸಿಕೊಂಡಿದ್ದ. ಬನ್ನಂಜೆ ಬಂಧನದ ವಿಚಾರ ತಿಳಿದ ಕೂಡಲೇ ಭಾರತ ಸರ್ಕಾರವು ಆತನನ್ನು ವಶಕ್ಕೆ ಪಡೆಯಲು ಪ್ರಯತ್ನ ನಡೆಸಿದೆ. ಈ ವಿಚಾರವಾಗಿ ರಾಜ್ಯದ ಪೊಲೀಸರಿಂದಲೂ ಕೇಂದ್ರ ಸರ್ಕಾರ ಮಾಹಿತಿ ಪಡೆದಿತ್ತು.

ರಾಜನ ವಿರುದ್ಧ ಕೊಲೆ, ಸುಲಿಗೆ, ಬೆದರಿಕೆ ಸೇರಿದಂತೆ ರಾಜ್ಯದಲ್ಲಿ 44ಕ್ಕೂ ಅಧಿಕ ಪ್ರಕರಣಗಳಿದ್ದು, ಇದರಲ್ಲಿ ಬೆಂಗಳೂರು ಮತ್ತು ಮಂಗಳೂರು ನಗರದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Write A Comment