ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು 2015 ಆಗಸ್ಟ್ 10ನೇ ತಾರೀಕು ಸೋಮವಾರ ರಾತ್ರಿ 8.00 ಗಂಟೆಗೆ ದುಬಾಯಿ ಅಲ್ ಗಿಸೆಸ್ ನಲ್ಲಿರುವ ಫಾರ್ಚೂನ್ ಪ್ಲಾಜಾ ಹೋಟೆಲ್ ಸಭಾಂಗಣದಲ್ಲಿ ಅಗಲಿದ ಕರ್ನಾಟಕ ಗಡಿನಾಡ ಕಾಸರಗೋಡಿನ ಕವಿ, ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ಕನ್ನಡಿಗ ದಿವ್ಯ ಚೇತನ ನಾಡೋಜ ಡಾ| ಕಯ್ಯಾರ ಕಿಞ್ಞಣ್ಣ ರೈಯವರಿಗೆ ಗೌರವ ಪೂರ್ವ ಶ್ರದ್ಧಾಂಜಲಿ ಸಮರ್ಪಿಸಿದರು.
ಡಾ. ಬಿ. ಆರ್. ಶೆಟ್ಟಿಯವರಿಂದ ಜ್ಯೋತಿ ಬೆಳಗಿಸಿ ಶ್ರದ್ದಾಂಜಲಿ ಕಾರ್ಯಕ್ರಮಕ್ಕೆ ಚಾಲನೆ
ಯು.ಎ.ಇ. ಯ ಹಿರಿಯ ಉದ್ಯಮಿ ಎನ್. ಎಂ. ಸಿ. ಹೆಲ್ತ್ಕ್ ಕೇರ್ ಸಮೂಹ ಸಂಸ್ಥೆಯ ವೈಸ್ ಚೇರ್ಮೆನ್, ಸಿ.ಇ.ಒ. ಡಾ| ಬಿ. ಆರ್. ಶೆಟ್ಟಿಯವರು ಜ್ಯೋತಿ ಬೆಳಗಿಸಿ ಕಯ್ಯಾರರ ಭಾವ ಚಿತ್ರಕ್ಕೆ ಪುಷ್ಪವೃಷ್ಠಿ ಮೂಲಕ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಸರ್ವರಿಗೂ ಶ್ರದ್ಧಾಂಜಲಿ ಅರ್ಪಿಸಲು ಮೌನಪ್ರಾರ್ಥನೆಗೆ ಅನುವು ಮಾಡಿಕೊಟ್ಟರು.
ಶಾರ್ಜಾ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರಾದ ಶ್ರೀ ಗಣೇಶ್ ರೈಯವರು ನಾಡೋಜ ಡಾ| ಕಯ್ಯಾರ ಕಿಞ್ಞಣ್ಣ ರೈಯವರ ಹೆಜ್ಜೆಯ ಗುರುತನ್ನು ಸವಿಸ್ಥಾರವಾಗಿ ಸಭೆಯ ಮುಂದ್ಡಿಟ್ಟರು. ಯು.ಎ.ಇ. ಎಕ್ಸ್ ಚೇಂಜ್ ಕಾರ್ಯ ನಿರ್ವಹಣಾ ಅಧಿಕಾರಿ ಶ್ರೀ ಸುಧೀರ್ ಕುಮಾರ್ ಶೆಟ್ಟಿಯವರು ತಮ್ಮ ಶಾಲಾದಿನದ ಸಂದರ್ಭದಲ್ಲಿ ಕಯ್ಯಾರರ ಸಾಮಿಪ್ಯದಲ್ಲಿ ಕಂಡ ವಿಚಾರಗಳನ್ನು ಸಭೆಯಲ್ಲಿ ಹಂಚಿಕೊಂಡರು. ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಭಾಕರ ಅಂಬಲತೆರೆಯವರು ಕಾಸರಗೋಡು ಕರ್ನಾಟಕಕ್ಕೆ ಸೇರ್ಪಡೆಯಾಗಲು ತಟಸ್ಥವಾಗಿರುವ ಮಹಾಜನ ವರದಿಯನ್ನು ಪುನರ್ ಪರಿಶೀಲಿಸಿ ಅನುಷ್ಠಾನಕ್ಕೆ ಬರುವಂತೆ ಎಲ್ಲಾ ಕರ್ನಾಟಕ ಪರ ಸಂಘಟನೆಗಳು ಪ್ರಯತ್ನಿಸಬೇಕೆಂದು ಮನವಿ ಮಾಡಿಕೊಂಡರು. ಶ್ರೀ ವಾಸು ಬಯಾರು ಕಯ್ಯಾರರ ಚಳುವಳಿಗಳಲ್ಲಿ ಭಾಗವಹಿಸಿದ ಅಂದಿನ ದಿನಗಳನ್ನು ನೆನಪಿಸಿಕೊಂಡರು.
ಡಾ| ಬಿ. ಆರ್. ಶೆಟ್ಟಿಯವರು ಸರ್ವರ ಪರವಾಗಿ ತಮ್ಮ ಭಾವಪೂರ್ವ ಶ್ರದ್ಧಾಂಜಲಿಯನ್ನು ಗೌರವದೊಂದಿಗೆ ಸಲ್ಲಿಸಿದರು. ಕಾರ್ಯಕ್ರಮದ ಆಯೋಜಕರಲ್ಲಿ ಒರ್ವರಾದ ಶ್ರೀ ವಿನಯ್ ಕುಮಾರ್ ನಾಯಕ್ ಬಾಲ್ಯದಲ್ಲಿ ಕಯ್ಯಾರರ ಊರಿನಲ್ಲಿ ಕಳೆದ ದಿನಗಳ ಅನುಭವ ಹಂಚಿಕೊಂಡರು. ಕೊನೆಯಲ್ಲಿ ಕಯ್ಯಾರಿಗೆ ಅಂತಿಮ ನಮನ ಸಲ್ಲಿಸಿ ಕಾರ್ಯಕ್ರಮ ಮುಕ್ತಾಯಗೊಳಿಸಿದರು.
ಯು.ಎ.ಇ. ಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸಭಾಂಗಣದಲ್ಲಿ ಸ್ಥಳಾವಕಾಶವನ್ನು ಫಾರ್ಚೂನ್ ಗ್ರೂಪ್ ಹೋಟೆಲ್ ಚೇರ್ಮನ್ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿಯವರು ವ್ಯವಸ್ಥೆ ಮಾಡಿಕೊಟ್ಟಿದ್ದು, ಶ್ರದ್ಧಾಂಜಲಿಗೆ ಪುಷ್ಪವನ್ನು ಕಟೀಲ್ ಫ್ಲವರ್ಸ್ ನ ಶ್ರೀ ಸುಧಾಕರ್ ತುಂಬೆಯವರು ನೀಡಿ ಗೌರವ ಸಲ್ಲಿಸಿದರು.