ಕುಂದಾಪುರ: ಕುಂದಾಪುರ ತಾಲೂಕು ಖಂಬದಕೋಣೆ ಗ್ರಾಮದ ಖಂಬದಕೋಣೆ ಮಿಲ್ಲಿನ ಉಡುಪರ ಜಾಗದ ಇಳಿಜಾರು ಎಂಬಲ್ಲಿ ಖಂಬದಕೋಣೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 15 ವರ್ಷ ಪ್ರಾಯದ ವಿದ್ಯಾರ್ಥಿ ಶಾಲೆ ಬಿಟ್ಟು ಮನೆಗೆ ಹೋಗುವ ಸಂದರ್ಭದಲ್ಲಿ , ಖಂಬದಕೋಣೆಯಿಂದ ಕೊಲ್ಲೂರು ಕಡೆ ಹಾದುಹೋಗುವ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾರಿನಿಂದ ಬಂದ ಅಪರಿಚಿತ ವ್ಯಕ್ತಿ ಬಾಲಕನನ್ನು ಬಲವಂತದಿಂದ ಕಾರಿನೊಳಗೆ ಎಳೆದು ಹಾಕಿ ಅಪರಿಸಿಕೊಂಡು ಹೋಗಿರುವ ಘಟನೆ ಮಂಗಳವಾರ ಸಂಜೆ ಸಮಯ ನಡೆದಿದೆ.
ತನಿಖೆಯ ನಂತರ ಈತನನ್ನು ತೀರ್ಥಹಳ್ಳಿ ತರೀನ್ ಅಬ್ರಾಂ (34 ) ಎಂದು ಗುರುತಿಸಲಾಗಿದೆ. ಈತನು ಮೂಲತ: ಬೆಂಗಳೂರಿನ ಹೆಬ್ಬಾಳದ ಟಾಟಾ ನಗರದ ನಿವಾಸಿಯಾಗಿದ್ದು, ಬೈಂದೂರಿನಲ್ಲಿ ಈತನ ಸಂಬಂಧಿಕರ ಮನೆ ಇದೆ ಎಂದು ತಿಳಿದು ಬಂದಿದೆ.
ಘಟನೆಯ ವಿವರ : ವಿದ್ಯಾರ್ಥಿ ಖಂಬದಕೋಣೆ ಸರಕಾರಿ ಪದವಿಪೂರ್ವ ಕಾಲೇಜಿನ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಮಂಗಳವಾರ ಸಂಜೆ ಸುಮಾರು 4.30ರ ಸಮಯದಲ್ಲಿ ತರಗತಿಯನ್ನು ಮುಗಿಸಿ ತನ್ನ ಮನೆ ಹೇರಂಜಾಲು ಗ್ರಾಮದ ಹೆಗ್ಗಾವಿಹಿತ್ಲು ಎಂಬಲ್ಲಿಗೆ ನಡೆದುಕೊಂಡು ಹೋಗುತ್ತಿರುವಾಗ ಖಂಬದಕೋಣೆ ಮಿಲ್ಲಿನ ಉಡುಪರ ಜಾಗದ ಇಳಿಜಾರು ಎಂಬಲ್ಲಿ ಹಿಂದಿನಿಂದ ಬಂದ ಕೆ.ಎ.20-ಬಿ-7092 ಎಂಬ ಸಂಖ್ಯೆಯ ಮಾರುತಿ ಇಕೋ ಕಾರಿನಲ್ಲಿ ಬಂದ ವ್ಯಕ್ತಿಯು ಬಾಲಕನನ್ನು ಬಲವಂತದಿಂದ ಕಾರಿನೊಳಗೆ ಎಳೆದು ಹಾಕಿ ಅದೇ ಮಾರ್ಗವಾಗಿ ಹೋಗಿದ್ದು ಬಳಿಕ ಬಾಲಕನನ್ನು ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿ ಆತನನ್ನು ನಗ್ನಗೊಳಿಸಿ ಅನೈಸರ್ಗಿಕ ಅತ್ಯಾಚಾರಕ್ಕೆ ಯತ್ನಿಸಿರುತ್ತಾನೆ. ನೋವಿನಿಂದ ಕಿರುಚಿಕೊಂಡ ಬಾಲಕ ತನ್ನ ಮನೆ ಹತ್ತಿರ ಬರುವ ಸಂದರ್ಭದಲ್ಲಿ ಬೊಬ್ಬಿಟ್ಟದ್ದನ್ನು ನೋಡಿದ ಸ್ಥಳೀಯರು ಹಿಂಬಾಲಿಸಿದಾಗ ಆರೋಪಿಯು ಆತನನ್ನು ಕಾರಿನಿಂದ ದೂಡಿ ಹೊರಕ್ಕೆ ಹಾಕಿ ಪರಾರಿಯಾಗಿರುತ್ತಾನೆ.
ಈತನನ್ನು ಸ್ಥಳೀಯರು ಬೆನ್ನಟ್ಟಿದ ಸಂದರ್ಭದಲ್ಲಿ ನಾವುಂದ ಮಸ್ಕಿ ಸುತ್ತಮುತ್ತಾ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿ ಕೊನೆಗೆ ಬೀಚ್ ಕಡೆ ಹೋದಾಗ ವಾಪಾಸ್ಸು ಬರಲಾಗದೇ ಕಾರನ್ನು ಅಲ್ಲೇ ಬಿಟ್ಟು ತಲೆಮರಿಸಿಕೊಂಡ ವ್ಯಕ್ತಿಯು ಕೊನೆಗೆ ಬಸ್ಸಿನಲ್ಲಿ ಹೋದದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಅರುಣ್ ನಾಯ್ಕ್ ಮತ್ತು ಸಿಬ್ಬಂದಿಗಳು ಬ್ರಹ್ಮಾವರದಲ್ಲಿ ಆತನನ್ನು ಹಿಡಿದು ಬೈಂದೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಬೈಂದೂರು ವೃತ್ತ ನಿರೀಕ್ಷಕರಾದ ಎಮ್. ಸುದರ್ಶನ್, ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ ಮತ್ತು ಸಿಬ್ಬಂದಿಗಳು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಕ್ಸೋ , ಸೆಕ್ಷನ್ 363 ಖಾಯ್ದೆ ಅಡಿಯಲ್ಲಿ ಪ್ರಕರಣ ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.