ಎಲ್ಲ ಇದ್ದು ಸರಿಯಾಗಿ ನಿದ್ದೆ ಬರುವುದಿಲ್ಲ ಎಂದರೆ ಅದು ಬರೀ ಕೊರತೆ ಅಲ್ಲ, ದೊಡ್ಡ ಕೊರತೆ. ಇದು ಹಾಗೆಯೇ ಮುಂದುವರಿದರೆ ಕಾಯಿಲೆಯಾಗುತ್ತದೆ.
ಈ ಕಾಯಿಲೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಲಾಗದಂಥದ್ದು. ದಿನವಿಡಿ ದುಡಿದು ಬಂದು ರಾತ್ರಿ ಊಟದ ನಂತರ ಸುಖವಾದ ನಿದ್ದೆ ಮಾಡಿದರೆ, ಮಾರನೆಯ ದಿನ ಮತ್ತೆ ಉತ್ಸಾಹದಿಂದ ಕೆಲಸಕ್ಕೆ ಹೋಗಲು ಅಗತ್ಯವಿರುವ `ಟಾನಿಕ್’. ವಾರದಲ್ಲಿ ಪ್ರತಿದಿನ 30 ನಿಮಿಷ ನಿದ್ದೆಗೆಡುವುದರಿಂದ ಸ್ಥೂಲಕಾಯ ಮತ್ತು ಟೈಪ್-2 ಮಧುಮೇಹದ ಅಪಾಯವಿದೆಯಂತೆ. ಇದು ತಜ್ಞರ ಅಭಿಪ್ರಾಯ ಪ್ರತಿದಿನ ಅರ್ಧಗಂಟೆಯಂತೆ ವಾರವಿಡಿ ನಿದ್ದೆಗಟ್ಟರೆ ಈ ತೊಂದರೆಗೆ ಈಡಾಗುವ ಪ್ರಮಾಣ ಶೇ. 72ರಷ್ಟು ಹೆಚ್ಚು.
ಆರು ತಿಂಗಳು ಇದು ಮುಂದುವರಿದರೆ ಶರೀರದಲ್ಲಿ ಇನ್ಸುಲಿನ್ ಪ್ರತಿರೋಧ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಇದು ಮಧುಮೇಹ ಪೂರ್ವದ ಸ್ಥಿತಿ ತಂದೊಡ್ಡುತ್ತದೆ. ಕತಾರ್‍ನ ವೀಲ್ ಕಾರ್ನೆಲ್ ಮೆಡಿಕಲ್ ಕಾಲೇಜಿನ ಪ್ರೋ. ಶಹ್ರಾದ್ ತಾಹೆರಿ ನೇತೃತ್ವದ ಅಧ್ಯಯನ ಹೇಳಿರುವಂತೆ, ನಿದ್ದೆ ಸರಿಯಾಗಿ ಆಗದಿದ್ದಾಗ ಶರೀರದ ಜೈವಿಕ ಗಡಿಯಾರ ಅಸ್ತವ್ಯಸ್ತವಾಗುತ್ತದೆ. ವಿಭಿನ್ನ ಸಮಯದ ಪಾಳಿಗಳಲ್ಲಿ ಕೆಲಸ ಮಾಡುವುದರಿಂದ ಮಧುಮೇಹ ಉಂಟಾಗುತ್ತದೆ ಎಂದು ಈ ಹಿಂದಿನ ಅಧ್ಯಯನಗಳು ಹೇಳಿವೆ.
ನಿದ್ದೆಗೆ ಸಹಕಾರಿಯಾಗುವ ಕೆಲವು ಟಿಪ್ಸ್ ಹೀಗಿವೆ:
* ಎಲ್ಲರಿಗೂ ಎಂಟು ಗಂಟೆಯ ನಿದ್ದೆ ಅತ್ಯಗತ್ಯ. ನಿಮ್ಮ ಕೋಣೆಯನ್ನು ಕತ್ತಲಾಗಿಸಿ. ಪರದೆ ಅಥವಾ ಕಣ್ಣಿನ ಮಾಸ್ಕ್‍ಗಳ ನೆರವಿನಿಂದ ಕತ್ತಲಿನ ವಾತಾವರಣ ನಿರ್ಮಿಸಿ. ಕತ್ತಲಿನ ವಾತಾವರಣದಲ್ಲಿ ಮಾನವ ಶರೀರದಲ್ಲಿ ಮೆಲಾಟೊನಿನ್ ಉತ್ಪಾದನೆಯಾಗುತ್ತದೆ. ಇದು ನಿದ್ದೆಯ ಚಕ್ರ ನಿರ್ಮಾಣಕ್ಕೆ ಸಹಕಾರಿ.
* ಅಂಗಾತ ಮಲಗಿ. ತಪ್ಪು ಭಂಗಿಯಲ್ಲಿ ನಿದ್ದೆ ಮಾಡುವುದು ದೀರ್ಘಾವಧಿಯ ಬೆನ್ನುನೋವಿಗೆ ಕಾರಣವಾಗುತ್ತದೆ. ತಲೆದಿಂಬು ಸರಿಯಾಗಿರಬೇಕು. ನಿಮ್ಮ ಕತ್ತು ನೇರವಾಗಿರುವಂತೆ ಮಲಗಿ.
* ಅತಿಯಾದ ಸೆಕೆ ಅಥವಾ ಅತಿಯಾದ ಥಂಡಿ, ನಿದ್ದೆಗೆ ಒಳ್ಳೆಯದಲ್ಲ. 16ರಿಂದ 18 ಡಿಗ್ರಿವರೆಗಿನ ತಾಪಮಾನ ನಿದ್ದೆಗೆ ಹೇಳಿ ಮಾಡಿಸಿದಂಥದ್ದು.
* ದಿನದ ಸಮಯದಲ್ಲಿ ಸಣ್ಣ ನಿದ್ದೆ ತೆಗೆಯುವುದರ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಕೆಲವರಿಗೆ ಇದರಿಂದ ರಾತ್ರಿ ನಿದ್ದೆಗೇನೂ ಭಂಗ ಬರುವುದಿಲ್ಲ. ಆದರೆ ಸಾಮಾನ್ಯವಾಗಿ ಸಣ್ಣ ನಿದ್ದೆಯಿಂದ ಇನ್ನೂ ಹೆಚ್ಚು ಸುಸ್ತಾದಂತೆ ಅನಿಸುತ್ತದೆ.
* ಕನಿಷ್ಟ, ನಿದ್ದೆಗೆ ಒಂದು ಗಂಟೆ ಮುನ್ನ ರಾತ್ರಿ ಭೋಜನ ಮುಗಿಸಬೇಕು. ಕಾಫಿ ಮತ್ತು ಸಕ್ಕರೆ ಮುಂತಾದ ಉತ್ತೇಜಕಗಳನ್ನು ಸೇವಿಸಬಾರದು. ಆಲ್ಕೊಹಾಲ್ ಮುಂತಾದವುಗಳ ಸೇವನೆಯಿಂದ ನಿದ್ದೆ ದೂರ ಉಳಿಯುತ್ತದೆ.
* ನಿದ್ದೆ ಮಾಡುವ ಕೆಲವೇ ಸಮಯಕ್ಕೆ ಮುನ್ನ ವ್ಯಾಯಾಮ ಸರಿಯಲ್ಲ. ಶರೀರದ ಉಷ್ಣತೆ ಸಾಮಾನ್ಯಸ್ಥಿತಿಗೆ ಬರಲು ಹಲವು ಗಂಟೆಗಳಾದರೂ ಬೇಕಾಗುತ್ತದೆ.
* ಕಸ ಅಥವಾ ಧೂಳು ನಿದ್ದೆ ಮೇಲೆ ಪರಿಣಾಮ ಬೀರುತ್ತದೆ. ಮಲಗುವ ಕೋಣೆಯಲ್ಲಿ ಗಾಳಿ ಬೆಳಕು ಉತ್ತಮವಾಗಿರಲಿ, ಬೆಡ್‍ಶೀಟ್ ಆಗಾಗ ಬದಲಾಯಿಸುತ್ತಿರಿ.
* ನಿದ್ದೆ ಮಾಡುವ ಸಮಯ ಸಾಮಾನ್ಯವಾಗಿ ಒಂದೇ ತೆರನಾಗಿರಲಿ. ಇದರಿಂದ ನಿಮ್ಮ ಶರೀರ ನಿಮ್ಮ ನಿದ್ದೆಯ ಸಮಯವನ್ನು ಗುರುತಿಸಿ ಇಟ್ಟುಕೊಳ್ಳುತ್ತದೆ.