2015 ಅಕ್ಟೋಬರ್ 9 ದುಬಾಯಿಯಲ್ಲಿ ಅದ್ಧೂರಿ ತುಳು ಪರ್ಬದಲ್ಲಿ ಮುಖ್ಯ ಅತಿಥಿಯಾಗಿ ಪೂಜ್ಯ ಡಾ| ವೀರೆಂದ್ರ ಹೆಗ್ಗಡೆಯವರು ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ಉಧ್ಯಮಿಗಳಾದ ಡಾ| ಬಿ. ಆರ್. ಶೆಟ್ಟಿ, ಶ್ರೀ ರೋನಾಲ್ಡ್ ಕೊಲಾಸೋ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಜಾನಕಿ ಬ್ರಹ್ಮಾವರ ಪಾಲ್ಗೊಳ್ಳಲಿದ್ದಾರೆ.
ಕರಾವಳಿ ಕರ್ನಾಟಕದ ಜನಪ್ರಿಯ ತುಳು ಹಾಸ್ಯ ನಾಟಕ ತಂಡ ದೇವ್ ದಾಸ್ ಕಾಪಿಕಾಡ್ ಮತ್ತು ತಂಡದವರ ಹಾಸ್ಯ ಪ್ರಹಸನ, ವಿಖ್ಯಾತ ಜಾದುಗಾರ ಗಣೇಶ್ ಕುದ್ರೊಳಿ ತಂಡದವರ ವಿಸ್ಮಯ ಜಾದು ಪ್ರದರ್ಶನ, ಪ್ರಶಾಂತ್ ದೇವಾಡಿಗ ತಂಡದವರ ಸ್ಯಾಕ್ಸೊಫೋನ್ ವಾದನ, ಜಸ್ಮಿತಾ ವಿವೇಕ್ ತಂಡದ ತುಳುನಾಡ ವೈಭವ ನೃತ್ಯ ರೂಪಕ ನಡೆಯಲಿದೆ. ದಯಾನಂದ್ ಕತ್ತಲ್ಸರ್ ರವರ ಸೊಗಸಾದ್ ನಿರೂಪಣೆ…. ದುಬಾಯಿ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ನಲ್ಲಿ 2015 ಅಕ್ಟೋಬರ್ 9ನೇ ತಾರೀಕು ಶುಕ್ರವಾರ ಸಂಜೆ 3.00 ಗಂಟೆಯಿಂದ ನಡೆಯುವ ಅದ್ಧೂರಿ ರಜತ ಮಹೋತ್ಸವ ಸಂಭ್ರಮದಲ್ಲಿ ಅರಬ್ ಸಂಯುಕ್ತ ಸಂಸ್ಥಾನದ ಎಲ್ಲಾ ಭಾಗಗಳಿಂದ ಮೂರು ಸಾವಿರಕಿಂತಲೂ ಹೆಚ್ಚು ತುಳುವರು ಸಮಾವೇಶ ಗೊಳ್ಳಲಿದ್ದಾರೆ.
ರಜತ ಮಹೋತ್ಸವ – ಬೊಳ್ಳಿ ಪರ್ಬ ದ ನೂತನ ಲಾಂಛನ ಬಿಡುಗಡೆ
ಯು.ಎ.ಇ. ತುಳುಕೂಟದ 25ನೇ ವರ್ಷದ ಬೊಳ್ಳಿ ತುಳು ಪರ್ಬದ ನೂತನ ಲಾಂಛನ ಬಿಡುಗಡೆ ಸಮಾರಂಭ ದುಬಾಯಿಯಲ್ಲಿ ಫಾರ್ಚೂನಾ ಪ್ಲಾಜಾ ಹೋಟೆಲ್ ಸಭಾಂಗಣದಲ್ಲಿ ಸೆಪ್ಟೆಂಬರ್ 22 ರಂದು ರಾತ್ರಿ 8.30 ಗಂಟೆಗೆ ನಡೆಯಿತು. ಸರ್ವ ಕಾರ್ಯಕಾರಿ ಸಮಿತಿ ಸದಸ್ಯರ ಸಮುಖದಲ್ಲಿ ಮಂಗ್ಲುರ್ ಕೊಂಕಣ್ಸ್ ಅಧ್ಯಕ್ಷರಾದ ಶ್ರೀ ಆಲ್ವಿನ್ ಪಿಂಟೊ ರವರು ಲಾಂಛನವನ್ನು ಅನಾವರಣ ಗೊಳಿಸಿದರು.
ಬೊಳ್ಳಿ ಪರ್ಬದ ಅಮಂತ್ರಣವನ್ನು ಶಾನ್ ಟೂರ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಪ್ರಶಾಂತ್ ಆಚಾರ್ಯ ಬಿಡುಗಡೆ ಗೊಳಿಸಿದರು. ಲಾಂಛನವನ್ನು ಪರಿಕಲ್ಪನೆ ಮತ್ತು ವಿನ್ಯಾಸಗೊಳಿಸಿದ ಕ್ರಿಯಾತ್ಮಕ ಕಲಾನಿರ್ದೇಶಕರಾದ ಶ್ರೀ ಬಿ. ಕೆ. ಗಣೇಶ್ ರೈ ನೂತನ ಲಾಂಛನದ ಪರಿಕಲ್ಪನೆ ಹಾಗೂ ವಿನ್ಯಾಸದ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಿ ಬೊಳ್ಳಿ ಪರ್ಬಕ್ಕೆ ಶುಭವನ್ನು ಹಾರೈಸಿದರು. ಯು.ಎ.ಇ. ತುಳುಕೂಟದ ಪ್ರಧಾನ ಕಾರ್ಯದರ್ಶಿ ಶ್ರೀ ಕೃಷ್ಣರಾಜ್ ತಂತ್ರಿ ಪ್ರಾರಂಭದಲ್ಲಿ ಸರ್ವರನ್ನು ಸ್ವಾಗತಿಸಿ ತುಳು ಪರ್ಬದ ಸಮಗ್ರ ಮಾಹಿತಿಯನ್ನು ಸಭೆಯ ಮುಂದಿಟ್ಟರು. ಖಜಾಂಚಿ ಶ್ರೀ ದಯಾ ಕಿರೋಡಿಯನ್ ಮತ್ತು ವಿವಿಧ ಮಾಧ್ಯಮಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಯು.ಎ.ಇ. ತುಳು ಕೂಟ ಹೆಜ್ಜೆ ಗುರುತು….
ತುಳುನಾಡು, ವೈವಿಧ್ಯಪೂರ್ಣ ಹಾಗೂ ರಂಗು ರಂಗಿನ ಸಂಸ್ಕೃತಿಯ ಸುಂದರನಾಡು. ಹಿಂದು, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯ ಇಲ್ಲಿನ ಸಂಸ್ಕೃತಿಯ ರೂವಾರಿಗಳು. ತುಳು, ಇವರನ್ನು ಒಗ್ಗೂಡಿಸಿದ, ಯಾವುದೇ ಮುಲಾಜಿಲ್ಲದೆ ಎಲ್ಲರೂ ಮಾತನಾಡಬಯಸುವ ಸುಂದರ ಭಾಷೆ. ತುಳುವರು ಕಠಿಣ ಶ್ರಮಿಗಳು, ಕ್ರೀಯಾಶಿಲರು ಅದಕ್ಕೂ ಮಿಗಿಲಾಗಿ ಸ್ನೇಹಮಯಿಗಳು. ಪ್ರಪಂಚದ ಯಾವುದೇ ಪ್ರದೇಶದಲ್ಲಿದ್ದರೂ, ತಮ್ಮ ನಾಡು, ನುಡಿಯ ಬಗ್ಗೆ ಆಸಕ್ತಿಯುಳ್ಳವರು.
ಯುಎಇನಲ್ಲಿ ನಾಲ್ಕು ದಶಕಗಳ ಹಿಂದೆ ಬಂದು ನೆಲೆಸಿರುವ ತುಳುವರು, 1990 ರಲ್ಲಿ ತುಳುನಾಡಿನ ಜಾನಪದ, ಆಚಾರ ವಿಚಾರ, ಸಂಸ್ಕೃತಿ, ಭಾಷೆ, ಸಂಸ್ಕಾರಗಳ ಆಚರಣೆಗಳ ಪೋಷಣೆ ಹಾಗೂ ಮೆಲುಕು ಹಾಕಿಕೊಳ್ಳುವ ಸಲುವಾಗಿ “ಯುಎಇ ತುಳುಕೂಟ ದುಬೈ” ಎನ್ನುವ ತುಳುವರ ಸಂಘಟನೆಯನ್ನು ಶ್ರೀ ಸಿದ್ಧಕಟ್ಟೆ ಚಂದ್ರಶೇಖರ ಶೆಟ್ಟಿ ಹಾಗೂ ತುಳು – ಕನ್ನಡ ಸಂಸ್ಕೃತಿಯನ್ನು ಭಾರತ ದೇಶದ ಸಂಸ್ಕೃತಿಯೊಡನೆ ಬೆರೆಸಿ, ಪುಟವಿಟ್ಟಂತೆ ಹೊಳಪಾಗಬೇಕೆಂದು ಕನಸುಕಂಡ ವ್ಯಕ್ತಿ ಉಮೇಶ ನಂತೂರ್ ರವರ ಸಂಚಾಲಕತ್ವ ಹಾಗೂ ಉತ್ಸಾಹಿ ಯುವಕರ ತಂಡದೊಂದಿಗೆ ಮಹಾತ್ವಾಕಾಂಕ್ಷೆಯ ಸಾಂಸ್ಕೃತಿಕ ಕೇಂದ್ರವಾಗಿ ಪ್ರಾರಂಭವಾಯಿತು.
ತುಳು, ಕೊಂಕಣಿ, ಕನ್ನಡ ಮತ್ತು ಬ್ಯಾರಿ ಭಾಷೆ ಮಾತನಾಡುವ ತುಳುನಾಡಿನ ಜನರು ಈ ನಾಡಿನಲ್ಲಿ ಪರಸ್ಪರ ಸುಖ ದುಃಖವನ್ನು ಹಂಚಿಕೊಂಡು, ಒಗ್ಗಟ್ಟಿನಿಂದ ಅನೋನ್ಯತೆಯಿಂದ ಬಂಧುತ್ವದ ಪ್ರತೀಕವಾಗಿ, ಧ್ಯೇಯ – ಧೋರಣೆಗಳನ್ನು ರೂಪಿಸಿಕೊಂಡು, ಒಂದೆಡೆ ಬೆರೆತು ಕೂಡಿಕೊಳ್ಳುವ ಈ ವೇದಿಕೆ ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದು ಈ ಮರುಭೂಮಿಯ ಮಣ್ಣಿನಲ್ಲಿ ತುಳುವರ ಹಿರಿಮೆ ಗರಿಮೆಯನ್ನು ಮೆರೆಸುತ್ತಿದೆ.
ಉತ್ಸಾಹಿ ಕಾರ್ಯಕಾರಿ ಸದಸ್ಯತಂಡ ತನ್ನ ತಾಯ್ನಾಡಿನ ಭಾಷೆ, ಸಂಸ್ಕೃತಿಯನ್ನು ಈ ಮಣ್ಣಿನಲ್ಲಿ ಬೆಳೆಸುವ ಸಲುವಾಗಿ ತನ್ನ ನಿಸ್ವಾರ್ಥ ಸೇವೆಯನ್ನು ನೀಡುತ್ತಾ ಬಂದಿರುವುದು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ.
ತುಳುನಾಡಿನ ಕಲಾ ಪ್ರಕಾರಗಳ ಪ್ರದರ್ಶನ, ಕಲಾ ವೈಭವಗಳನ್ನು ಪ್ರತಿಬಿಂಬಿಸುವ ’ತುಳು ಪರ್ಬ’ ವನ್ನು ಬಹಳ ಅದ್ದೂರಿಯಾಗಿ ಪ್ರತೀ ಎರಡು ವರ್ಷಗಳಿಗೊಮ್ಮೆ ದುಬಾಯಿಯ ಪ್ರಸಿದ್ಧ ಅಲ್ ನಾಸರ್ ಲೀಸರ್ ಲ್ಯಾಂಡ್ನ ಬೃಹತ್ ಒಳಾಂಗಣ ಐಸ್ ರಿಂಕ್ ಕ್ರೀಡಾಂಗಣದಲ್ಲಿ ಸಾವಿರಾರು ತುಳುವರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯುತ್ತದೆ.
ತುಳುನಾಡಿನ ಸಂಸ್ಕೄತಿಯನ್ನು ಪ್ರತಿಬಿಂಬಿಸುವ ಯಕ್ಷಗಾನ, ನಾಟಕ, ಜಾನಪದ ಕಲೆ, ರಂಗರೂಪಕ, ಪ್ರಹಸನ, ಛದ್ಮವೇಷ, ಹಾಸ್ಯಲಹರಿ, ಸಂಗೀತಗಾಯನ, ರಸಮಂಜರಿ ಕಾರ್ಯಕ್ರಮಗಳ ಪ್ರದರ್ಶನಗಳು ಇಲ್ಲಿಯ ತುಳುವರಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದೆ, ಕಾರ್ಯಕ್ರಮಗಳು ವೈವಿಧ್ಯ ಪೂರ್ಣವೆನಿಸಿ, ರಸಿಕ ಪ್ರೇಕ್ಷಕರ ಮೈಮನಗಳನ್ನು ತಣಿಸಿದೆ, ಮನೋರಂಜನೆಯ ರಸದೌತಣ ನೀಡಿದೆ.
ತುಳುಕೂಟ ಯುಎಇ ಮಟ್ಟದಲ್ಲಿ ’ತುಳು ಸರಿಗಮ’ ಸಂಗೀತ ಸ್ಪರ್ಧೆ, ’ತುಳುಕಪ್ ಕ್ರಿಕೆಟ್ ಪಂದ್ಯಾಟ’ ವಾಲಿಬಾಲ್, ತ್ರೋಬಾಲ್, ಹಗ್ಗ ಜಗ್ಗಾಟ, ವೀರಕಲ್ಲು ಭಾರ ಎತ್ತುವ ಸ್ಪರ್ಧೆ, ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ತುಳುವರಿಗೆ ಅಭಿಮಾನದ ಸಂಕೇತವಾಗಿದೆ.
ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವ ಸಂದರ್ಭದಲ್ಲಿ ತನ್ನ ತಾಯಿನಾಡಿನಿಂದ ಬಂದ ಮಹಾನ್ ಗಣ್ಯರು ವೀಕ್ಷಿಸಿ ತಮ್ಮ ಮೆಚ್ಚುಗೆ ಸೂಚಿಸಿ, ಹಾರೈಸಿದ್ದಾರೆ. ಸಾಂಸ್ಕೃತಿಕ ಹಬ್ಬಗಳ ಆಚರಣೆಯ ಪೂರ್ವತಯಾರಿ, ಮಹಾದ್ವಾರ, ಕನ್ನಡ ಅಕ್ಷರ, ನಾಡಿನ ಕಲಾ ವೈಭವವನ್ನು ಸಾರುವ ಬೃಹತ್ ರಂಗವೇದಿಕೆಯ ವಿನ್ಯಾಸ, ಸಾಂಸ್ಕೃತಿಕ ಮೆರವಣಿಗೆ, ಮೊಸರುಕುಡಿಕೆ, ಹುಲಿವೇಷ, ಯಕ್ಷಗಾನ ಹಾಗೂ ಇನ್ನಿತರ ಕಲಾ ಪ್ರಕಾರಗಳು ನೈಜತೆಯನ್ನು ಕೂಡಿ, ಮೆರುಗು ನೀಡಿವೆ.
ತುಳು ಕೂಟದ ಕಾರ್ಯಕ್ರಮದಲ್ಲಿ ಹರಸಿ ಹಾರೈಸಿದ ಗಣ್ಯಾತಿ ಗಣ್ಯರು
ಈ ನಾಡಿಗೆ ಬಂದ ಗಣ್ಯರನ್ನು ಸನ್ಮಾನಿಸಿ ಗೌರವಿಸಿದ ತುಳು ಕೂಟದ ದಾಖಲೆಯಲ್ಲಿ ಸರ್ವಶ್ರೀಗಳಾದ ಪೂಜ್ಯ ಡಾ| ವಿರೇಂದ್ರ ಹೆಗ್ಗಡೆ, ಡಾ| ರಾಜ್ಕುಮಾರ್, ಟಿ. ರಮೇಶ್ ಪೈ, ಪ್ರೊ| ಶಂಕರ್ ಜಾದೂಗಾರ್, ಅಮೃತ ಸೊಮೇಶ್ವರ, ಎನ್. ತಿಂಗಳಾಯ, ರಿಚಾರ್ಡ್ ಕ್ಯಾಸ್ತೆಲಿನೊ, ಕೆ.ಎನ್. ಟೈಲರ್, ಕುಂಬ್ಳೆ ಸುಂದರ ರಾವ್, ಶ್ರೇಣಿ ಗೋಪಾಲ ಕೃಷ್ಣ ಭಟ್, ಮಿಜಾರು ಅಣ್ಣಪ್ಪ, ಶಿಲ್ಪಾ ಶೆಟ್ಟಿ, ಸದಾನಂದ ಸುವರ್ಣ,ಜಯ ಸುವರ್ಣ, ಮನೋರಮಾ ಮಧ್ವರಾಜ್, ಪೀಟರ್ ಲೂಯಿಸ್, ರೆಬೆಲ್ಸ್ಟಾರ್ ಅಂಬರೀಷ್, ಸುಮಲತಾ, ದಯಾನಂದ ಬಂಗೇರಾ, ಆನಂದ ಬೋಳಾರ್, ವಿಲ್ಫಿ ರೆಬಿಂಬಸ್, ವಸಂತ ಬಂಗೇರಾ, ಧನಂಜಯ್ ಕುಮಾರ್, ದೇವ್ದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್… ಇನ್ನೂ ಹಲವಾರು ಶ್ರೇಷ್ಟರ ಸನ್ಮಾನದ ಪಟ್ಟಿ ಇದೆ. ಡಾ| ಬಿ.ಆರ್. ಶೆಟ್ಟಿಯವರಿಂದ ಮೊದಲ್ಗೊಂಡು ಹಲವಾರು ಗಣ್ಯರ ಸಲಹೆ ಸಹಕಾರದಿಂದ ಯುಎಇ ತುಳುಕೂಟ ಮುನ್ನಡೆಯುತ್ತಿದೆ. ತನ್ನ ತಾಯಿನಾಡಿನ ಭಾಷೆ, ಕಲೆ, ಸಂಸ್ಕೃತಿಯನ್ನು ಉಳಿಸಿದೆ.
ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ