ಮುಂಬೈ: ಈಗ ಎಲ್ಲೆಲ್ಲೂ ಆನ್ ಲೈನ್ ಶಾಪಿಂಗ್ ಟ್ರೆಂಡ್. ಆನ್‌ಲೈನ್ ಶಾಪಿಂಗ್ ತಾಣಗಳಿಗೆ ಹೋಗಿ ನಮಗೆ ಬೇಕಾದ ವಸ್ತುವನ್ನು ಹಣವನ್ನು ಆನ್ ಲೈನ್ ನಲ್ಲೇ ಪಾವತಿಸಿ ಆರ್ಡರ್ ಮಾಡಿದರೆ ಸಾಕು, ನಾವಿದ್ದಲ್ಲಿಗೇ ವಸ್ತು ಬಂದು ತಲುಪುತ್ತದೆ. ಹೀಗಾಗಿ ಇಂದು ನಗರ ಪ್ರದೇಶದ ಮೇಲ್ಮಧ್ಯಮ ಮತ್ತು ಶ್ರೀಮಂತ ವರ್ಗದ ಜನರು ಆನ್ ಲೈನ್ ಶಾಪಿಂಗ್ ನ್ನು ಹೆಚ್ಚು ಇಷ್ಟಪಡುತ್ತಾರೆ.
ಸಾಮಾನ್ಯವಾಗಿ ಹೆಚ್ಚಿನ ವಸ್ತುಗಳು ಈಗ ಆನ್ ಲೈನ್ ನಲ್ಲಿ ಸಿಗುತ್ತವೆ. ಅದು ಈಗ ಹಸುವಿನ ಸೆಗಣಿಯನ್ನೂ ಬಿಟ್ಟಿಲ್ಲ, ಸಾಮಾನ್ಯವಾಗಿ ಹಸುವಿನ ಸೆಗಣಿ ಹಳ್ಳಿ ಮನೆಗಳಲ್ಲಿ ಉಪಯೋಗ ಹೆಚ್ಚು. ಔಷಧಿಯಾಗಿಯೂ ಬಳಸುತ್ತಾರೆ. ಆದರೆ ನಗರಗಳಲ್ಲಿಯೂ ಕೆಲ ಮನೆಗಳಲ್ಲಿ ಏನಾದರೂ ಶುಭ ಕಾರ್ಯಕ್ಕೆ ಹಸುವಿನ ಸೆಗಣಿ ಬಳಸುವ ಕ್ರಮ ಇದೆ. ಇದನ್ನೇ ಮಾರುಕಟ್ಟೆ ತಂತ್ರವನ್ನಾಗಿ ಬಳಸಿಕೊಳ್ಳುತ್ತಿರುವ ಆನ್ ಲೈನ್ ಸೈಟ್ ಗಳು ಸೆಗಣಿಯನ್ನು ಒಣಗಿಸಿ ಕೇಕ್ ಆಕಾರದಲ್ಲಿ ಆನ್ ಲೈನ್ ಮೂಲಕ ಮಾರಾಟ ಮಾಡುತ್ತಿವೆ.
ದಸರಾ ಹಬ್ಬದ ಸೀಸನ್ ನಲ್ಲಿ ಒಣಗಿಸಿಟ್ಟ ಸೆಗಣಿಗೆ ಬೇಡಿಕೆಯಿದೆ. ಸೆಗಣಿಯನ್ನು ಸರಿಯಾದ ಆಕಾರದಲ್ಲಿ ತಟ್ಟಿ ಒಣಗಿಸಿ 15-20 ಪೀಸ್ ಗಳನ್ನು 150ರಿಂದ 500 ರೂಪಾಯಿ ದರದಲ್ಲಿ ಪ್ಯಾಕೆಟ್ ನಲ್ಲಿ ಹಾಕಿ ಮಾರಾಟ ಮಾಡಲಾಗುತ್ತದೆ. ಇಬೆ.ಇನ್ , ಶಾಪ್ ಗ್ಲೂಸ್ ಮೊದಲಾದ ಆನ್ ಲೈನ್ ಸೈಟ್ ಗಳಲ್ಲಿ ಡಿಸ್ಕೌಂಟು ದರದಲ್ಲಿ ಮಾರಾಟ ಮಾಡಲಾಗುತ್ತದೆ. ಉತ್ತಮ ರಿಯಾಯಿತಿ ದರದಲ್ಲಿ ಸೆಗಣಿ ತಿಟ್ಟುಗಳು ತಮ್ಮಲ್ಲಿ ಲಭ್ಯವಿರುವುದಾಗಿ ಒಂದಕ್ಕೊಂದು ಪ್ರತಿಪಾದಿಸುತ್ತಿವೆ.ವಿದೇಶಗಳಿಗೂ ಆನ್ ಲೈನ್ ಸೈಟ್ ಗಳು ಸೆಗಣಿಯನ್ನು ಮಾರಾಟ ಮಾಡುತ್ತವೆ.
ಹಸುವಿನ ಸೆಗಣಿಯನ್ನು ಹಳ್ಳಿ ಮನೆಗಳಲ್ಲಿ ಯಜ್ಞ, ಶುಭ ಕಾರ್ಯಕ್ರಮಗಳಿಗೆ, ಸಂಪ್ರದಾಯಗಳಿಗೆ ಬಳಸುತ್ತಾರೆ. ಒಣಗಿಸಿದ ಸೆಗಣಿಯನ್ನು ಶುದ್ಧ ತುಪ್ಪದ ಜೊತೆ ಬೆಂಕಿಯಲ್ಲಿ ಉರಿಸಿದರೆ ಆಮ್ಲಜನಕ ಬಿಡುಗಡೆಯಾಗಿ ವಾತಾವರಣವನ್ನು ಶುದ್ಧ ಮಾಡುತ್ತದೆ ಎಂಬ ವೈಜ್ಞಾನಿಕ ಕಾರಣವಿದೆ.