ಅಂತರಾಷ್ಟ್ರೀಯ

ಸಿಹಿ ರಹಿತ ಪಾನೀಯಗಳಿಂದ ದಂತ ಆರೋಗ್ಯಕ್ಕೆ ಅಪಾಯ

Pinterest LinkedIn Tumblr

32

ಮಧುಮೇಹ ಅಥವಾ ಸಕ್ಕರೆ ಖಾಯಿಲೆ ಇದೆ ಎಂಬ ಸುಳಿವು ದೊರೆತ ಕೂಡಲೇ ಸಿಹಿ ಪದಾರ್ಥ, ತಿಂಡಿ ತಿನಿಸುಗಳನ್ನು ದೂರವಿಡುವ ಮಂದಿ ಹೆಚ್ಚಾಗಿದ್ದಾರೆ. ಆದರೆ, ಸಿಹಿರಹಿತ ಪಾನೀಯಗಳ ಸೇವನೆಯಿಂದಲೂ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರೆ ಹುಬ್ಬೇರಿಸಬೇಡಿ.

ರಾಸಾಯನಿಕ ಮತ್ತು ಆಮ್ಲದ ಅಂಶಗಳನ್ನು ಒಳಗೊಂಡಿರುವ ಸಿಹಿರಹಿತ ಪಾನೀಯಗಳನ್ನು ಸೇವಿಸುವುದರಿಂದ ಸುಲಭವಾಗಿ ಹಲ್ಲುಗಳು ಹಾಳಾಗುತ್ತವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

`ಸಕ್ಕರೆ ರಹಿತ’ ಎಂದು ಘೋಷಣೆ ಮಾಡಿಕೊಂಡಿರುವ ವಿವಿಧ ಕಂಪನಿಗಳ ಆಹಾರ ಪದಾರ್ಥಗಳು ಹಾಗೂ ಪಾನೀಯಗಳು ಹೆಚ್ಚಾಗಿ ರಾಸಾಯನಿಕ ಸತ್ವಗಳನ್ನು ಒಳಗೊಂಡಿದ್ದು, ಇವುಗಳಿಂದ ದಂತಗಳು ಸುಲಭವಾಗಿ ನಾಶವಾಗಲು ಕಾರಣವಾಗುತ್ತಿವೆಯಂತೆ. ಸಕ್ಕರೆ ರಹಿತ ಪಾನೀಯ ಸೇವನೆಗೆ ನೀವೇನಾದರೂ `ಅಡಿಕ್ಟ್’ ಆಗಿದ್ದರೆ, ಇಂತಹ ಪಾನೀಯಗಳಿಂದ ಸಕ್ಕರೆ ಪ್ರಮಾಣ ಅಲ್ಪಮಟ್ಟಿಗೆ ದೇಹಕ್ಕೆ ಸೇರುವುದನ್ನು ತಪ್ಪಿಸಬಹುದೇ ವಿನಃ ಅದರಿಂದಾಗುವ ದುಷ್ಪರಿಣಾಮಗಳನ್ನು ತಡೆಯಲಾಗದು.

ಇಂತಹ ವಿಚಾರಗಳು ಹಲವರಿಗೆ ತಿಳಿದಿಲ್ಲ. ಸಕ್ಕರೆರಹಿತ ಆಹಾರ ಪದ್ಧತಿಗಳಲ್ಲಿಯೂ ಸಹ ನಮ್ಮ ಆರೋಗ್ಯಕ್ಕೆ ತೊಂದರೆಯಾಗಲಿದೆ ಎಂಬ ಅಂಶವನ್ನು ಮರೆಯದಿರಿ. ಇತ್ತೀಚೆಗೆ ದಂತ ವೈದ್ಯರ ತಂಡವೊಂದು ನಡೆಸಿದ ಅಧ್ಯಯನದ ಪ್ರಕಾರ, ಸಕ್ಕರೆ ರಹಿತ ಪಾನೀಯ ದಂತ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದಂತೆ.

ಕ್ರೀಡಾಪಾನೀಯ ಸೇರಿದಂತೆ 20ಕ್ಕೂ ಹೆಚ್ಚು ಹೆಚ್ಚು ವಿವಿಧ ಕಂಪನಿಗಳ ಪಾನೀಯಗಳನ್ನು ಸಂಶೋಧನೆಗೆ ಒಳಪಡಿಸಲಾಗಿದೆ. ಈ ರೀತಿಯ ಹೆಚ್ಚಿನ ಪಾನೀಯಗಳಲ್ಲಿ ಆಮ್ಲದ ಅಂಶಗಳಿದ್ದು ಇದರಿಂದ ದಂತಗಳ ಆರೋಗ್ಯಕ್ಕೆ ಹಾನಿಯಾಗಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಧುಮೇಹದಿಂದ ಬಳಲುತ್ತಿರುವವರು ಹಾಗೂ ಸದೃಢವಾದ ಆರೋಗ್ಯ ಹೊಂದಿರುವವರೂ ಸಹ ಸಿಹಿ ಪದಾರ್ಥಗಳಿಂದ ದೂರ ಉಳಿಯಬಯಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಈ ರೀತಿ ಜೀವನ ಸಾಗಿಸಲು ಬಯಸುತ್ತಾರೆ.

ಆದರೆ, ಸಕ್ಕರೆರಹಿತ ಆಹಾರ ಪದಾರ್ಥಗಳಿಂದಲೂ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂಬುದರ ಅರಿವು ಎಷ್ಟು ಜನರಿಗಿರುತ್ತದೆ. ಸಿಹಿರಹಿತ ಪಾನೀಯಗಳು ಹಲ್ಲುಗಳನ್ನು ಹುಳುಕಾಗಿಸುತ್ತವೆ ಎಂಬ ಮಾತು ಹಿಂದೆಲ್ಲಾ ಕೇಳಿ ಬರುತ್ತಿತ್ತು. ಅದು ಈಗ ಉಲ್ಟಾ ಆಗಿದೆ. ಹೆಚ್ಚಾಗಿ ಸಿಹಿ ಪದಾರ್ಥ ತಿನ್ನದಿದ್ದರೂ ಹಲ್ಲುಗಳ ಆರೋಗ್ಯ ಕೆಡಲಿದೆಯಂತೆ.

ಸಿಹಿರಹಿತ ಪಾನೀಯಗಳಲ್ಲಿ ಆಮ್ಲದ ಅಂಶ ಇರುವುದರಿಂದ ದಂತದಲ್ಲಿನ ಅಂಗಾಂಶಗಳು ಕರಗಿ, ಹಲ್ಲುಗಳು ಹುಳುಕಾಗಲು ಕಾರಣವಾಗಲಿದೆ. ಕಾಲಕ್ರಮೇಣ ದಂತದ ಕವಚಕ್ಕೂ ಹಾನಿಯಾಗಲಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ತಂಪುಪಾನೀಯ ಮತ್ತು ಕ್ರೀಡಾ ಪಾನೀಯಗಳನ್ನು ಸೇವಿಸುವ ಅನೇಕ ಜನರ ದಂತಗಳ ಮಾದರಿಗಳನ್ನು ಸಂಶೋಧಕರು ಪರೀಕ್ಷೆಗೊಳಪಡಿಸಿದ ನಂತರ ಆತಂಕಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಆಮ್ಲಸಹಿತ ಆಹಾರ ಪದಾರ್ಥಗಳು ಹಾಗೂ ಪಾನೀಯಗಳಿಂದ ಸಾಧ್ಯವಾದಷ್ಟು ದೂರ ಉಳಿಯಲು ಪ್ರಯತ್ನಿಸಿ ದಂತ ಆರೋಗ್ಯ ರಕ್ಷಣೆಗೆ ಒತ್ತು ಕೊಡಿ.

Write A Comment