ಕರಾವಳಿ

ಸುಭಾಷ್ ಬಿ.ಅಡಿ ಪದಚ್ಯುತಿ ವಿಷಯದಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಬಲಿಪಶು

Pinterest LinkedIn Tumblr

kagoduಉಡುಪಿ, ಜ.12-ಉಪಲೋಕಾಯುಕ್ತರಾದ ಸುಭಾಷ್ ಬಿ.ಅಡಿ ಪದಚ್ಯುತಿ ವಿಷಯದಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಸರ್ಕಾರ ಬಲಿಪಶು ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಭಾಷ್ ಬಿ.ಅಡಿ ಅವರು ಯಾವ ತಪ್ಪು ಮಾಡದಿದ್ದರೂ ದಾಖಲೆಗಳಿವೆ ಎಂದು ಸರ್ಕಾರ ಕಾಗೋಡು ತಿಮ್ಮಪ್ಪ ಅವರ ಮೂಲಕ ಹೇಳಿಸಿ ಅವರನ್ನು ಬಲಿಪಶು ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ. ದಕ್ಷ ಮತ್ತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಸುಭಾಷ್ ಬಿ.ಅಡಿ ಅವರ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಿ ಪದಚ್ಯುತಿ ಪ್ರಸ್ತಾಪ ಮಾಡಿರುವ ಘಟನೆಯಿಂದ ಲೋಕಾಯುಕ್ತ ಹುದ್ದೆಗೆ ಯಾವ ನಿವೃತ್ತ ಜಡ್ಜ್‌ಗಳು ಮುಂದೆ ಬರುತ್ತಿಲ್ಲ.

ಇದು ದೇಶದಲ್ಲಿಯೇ ಹೆಸರು ಮಾಡಿದ ಲೋಕಾಯುಕ್ತ ಸಂಸ್ಥೆಯ ದುರ್ದೈವ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಗೋಡು ತಿಮ್ಮಪ್ಪ ಅವರು ತಮ್ಮ ನಡೆಯನ್ನು ಬದಲಿಸಿಕೊಳ್ಳಬೇಕಾಗಿದೆ. ಸುಭಾಷ್ ಬಿ.ಅಡಿ ವಿರುದ್ಧ ಮಾಡಿರುವ ಆರೋಪಗಳನ್ನು ಹಿಂದೆ ಪಡೆಯಬೇಕಾಗಿದೆ ಎಂದರು.

ಲೋಕಾಯುಕ್ತ ಸಂಸ್ಥೆಗೆ ಸಮರ್ಥ ವ್ಯಕ್ತಿಯನ್ನು ನೇಮಕ ಮಾಡಬೇಕು. ಆದರೆ, ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಹೇಳಿದರು. ಜಿ.ಪಂ., ತಾ.ಪಂ. ಚುನಾವಣೆಯ ನಂತರ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಬಗ್ಗೆ ಪಕ್ಷ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ. ರಾಷ್ಟ್ರ ರಾಜಕಾರಣಕ್ಕಿಂತ ರಾಜ್ಯ ರಾಜಕಾರಣದಲ್ಲಿ ನನಗೆ ಆಸಕ್ತಿಯಿದೆ. ಈ ವಿಷಯವನ್ನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ. ರಾಜ್ಯದ ಜನರ ಸಹಕಾರದಿಂದ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಯಡಿಯೂರಪ್ಪ ತಿಳಿಸಿದರು.

Write A Comment