ಬಹರೈನ್ : ಇಲ್ಲಿನ ಅನಿವಾಸಿ ಬಂಟರ ಒಕ್ಕೂಟವಾದ “ಬಂಟ್ಸ್ ಬಹರೈನ್ ” ತನ್ನ 14ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು ಅದರ ಆಚರಣೆಯನ್ನು ಇದೆ ಜನವರಿ ತಿಂಗಳ 22ನೇ ತಾರೀಖಿನ ಶುಕ್ರವಾರದಂದು ಸೀಫ್ ಪರಿಸರದಲ್ಲಿರುವ “ರಾಮೀ ಗ್ರಾಂಡ್” ಪಂಚತಾರ ಹೋಟೆಲಿನ ಭವ್ಯ ಸಭಾಂಗಣದಲ್ಲಿ ಸಂಜೆ ೫ ಘಂಟೆಗೆ ಆಯೋಜಿಸಲಾಗಿದೆ .
“ವರ್ಸದ ಪರ್ಬ ” ಎನ್ನುವ ಈ ಕಾರ್ಯಕ್ರಮದಲ್ಲಿ ಸಮುದಾಯದ ಸದಸ್ಯರುಗಳು ವೈವಿಧ್ಯಮಯವಾದ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಪ್ರದರ್ಶಿಸಲಿದ್ದಾರೆ . ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿ ತನ್ಮೂಲಕ ಸಮುದಾಯಕ್ಕೆ ಹೆಮ್ಮೆಯನ್ನು ತಂದಿರುವ ನಾಡಿನ ಅನೇಕ ಸಾಧಕರುಗಳನ್ನು ಈ ಸಂದರ್ಭದಲ್ಲಿ ಬರಮಾಡಿಕೊಂಡು ಅವರುಗಳನ್ನು ಬಂಟ್ಸ್ ಬಹರೈನ್ ವತಿಯಿಂದ ಸಮ್ಮಾನಿಸಲಾಗುವುದು .
ವಾರ್ಷಿಕೋತ್ಸವದ ಮುಖ್ಯ ಅತಿಥಿಯ ಸ್ಥಾನವನ್ನು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದ ಶಾಸಕಿ ಹಾಗು ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಶಕುಂತಲಾ ಶೆಟ್ಟಿ ಯವರು ಅಲಂಕರಿಸಲಿದ್ದಾರೆ . ಮುಂಬೈ ಬಂಟ್ಸ್ ನ ಅಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ ,ಮಾತ್ರಭೂಮಿ ಸಹಕಾರಿ ಸಂಘ ಮುಂಬೈ ಇದರ ಚೇರ್ಮ್ಯಾನ್ ರತ್ನಾಕರ ಶೆಟ್ಟಿ ,ಮಾತ್ರಭೂಮಿ ಸಹಕಾರಿ ಸಂಘ ಮುಂಬೈ ಇದರ ಜೊತೆಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರ್ ,ಪ್ರೇಮಕಾಂತಿ ಕಾಲೇಜ್ ಮಂಗಳೂರು ಇದರ ಪ್ರಾಂಶುಪಾಲರಾದ ಡಾಕ್ಟರ್ ಮುರಳಿಧರ್ ನಾಯ್ಕ್ ವೊರ್ಕಾಡಿ ಹಾಗು ಖ್ಯಾತ ಪ್ರಶಸ್ತಿ ವಿಜೇತ ರಾಷ್ಟ್ರೀಯ ಮಟ್ಟದ ರೇಲಿ ಪಟು ಅನೀಶ್ ಶೆಟ್ಟಿ ಯವರು ವಿಶೇಷ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ . ಇದೆ ಸಂಧರ್ಭದಲ್ಲಿ “ಬಂಟ್ಸ್ ಬಹರೈನ್” ನ ವಾರ್ಷಿಕ ಸ್ಮರಣಿಕೆಯಾದ “ಕಲಶ ” ವನ್ನು ಬಿಡುಗಡೆಗೊಳಿಸಲಾಗುವುದು .
ದ್ವೀಪರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಂತಹ ಬಂಟ್ಸ್ ಬಹರೈನ್ ತನ್ನ ಸಮುದಾಯದ ನೋವು,ನಲಿವುಗಳಿಗೆ ,ಕಷ್ಟ ನಷ್ಟಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಇದೀಗ ೧೪ ವರುಷಗಳ ಸಾರ್ಥಕತೆಯನ್ನು ಕಂಡಿದೆ . ಪ್ರಸಕ್ತ ಆಡಳಿತ ಮಂಡಳಿಯ ಚುಕ್ಕಾಣಿಯನ್ನು ಶ್ರೀ ಜಗನ್ನಾಥ್ ಶೆಟ್ಟಿ ಯವರು ಹಿಡಿದಿದ್ದಾರೆ . ಸುಮಾರು ಮುನ್ನೂರಕ್ಕೂ ಹೆಚ್ಚು ಸಮುದಾಯದ ಸದಸ್ಯರುಗಳ ಸಹಕಾರದೊಂದಿಗೆ ಕಾರ್ಯಕ್ರಮದ ತಯಾರಿ ಭರದಿಂದ ಸಾಗಿದ್ದು ಕಾರ್ಯಕ್ರಮವು ಒಂದು ಸ್ಮರಣೀಯ ಸಂಜೆಯಾಗಿ ಉಳಿಯುವುದರಲ್ಲಿ ಯಾವ ಸಂಶಯವೂ ಇಲ್ಲವೆಂದು ಬಂಟ್ಸ್ ಬಹರೈನ್ ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವಿಜಯ ನಾಯ್ಕ್ ರವರು ಈ ಸಂದರ್ಭದಲ್ಲಿ ತಿಳಿಸಿದರು .
ವರದಿ -ಕಮಲಾಕ್ಷ ಅಮೀನ್ .