ಬೆಂಗಳೂರು/ ಧಾರವಾಡ: ಅತ್ಯಂತ ಬಿಗಿಭದ್ರತೆ, ಸ್ವತಃ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಉನ್ನತಾಧಿಕಾರಿಗಳ ಕಣ್ಗಾವಲಿನ ಮಧ್ಯೆ ದ್ವಿತೀಯ ಪಿಯುಸಿ ರಸಾಯನ ವಿಜ್ಞಾನ ವಿಷಯದ ಮರುಪರೀಕ್ಷೆ ಮಂಗಳವಾರ (ಏಪ್ರಿಲ್ 12) ನಡೆಯಲಿದೆ.
ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲಿ ಒಂದೇ ವಿಷಯದ ಪತ್ರಿಕೆಗೆ ಮೂರು ಸಲ ಪರೀಕ್ಷೆ ನಡೆಸುತ್ತಿರುವುದು ಅಪರೂಪ.
ಮೊದಲ ಸಲದ ಪರೀಕ್ಷೆ ಮುಗಿದ ನಂತರ ಪ್ರಶ್ನೆಪತ್ರಿಕೆ ಬಹಿರಂಗದ ಕಾರಣದಿಂದ ಮರು ಪರೀಕ್ಷೆ ನಿಗದಿಪಡಿಸಲಾಗಿತ್ತು. ಆದರೆ ಎರಡನೇ ಸಲ ಪರೀಕ್ಷೆ ಆರಂಭಕ್ಕೆ ಮೊದಲೇ ಪ್ರಶ್ನೆಪತ್ರಿಕೆ ಬಹಿರಂಗಗೊಂಡಿತ್ತು. ಹೀಗಾಗಿ ಪರೀಕ್ಷೆಯೇ ನಡೆದಿರಲಿಲ್ಲ.
ಈಗ ಸುಮಾರು 1.72 ಲಕ್ಷ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಎದುರಿಸಲಿದ್ದಾರೆ. 968 ಕೇಂದ್ರಗಳಲ್ಲಿ ಬೆಳಿಗ್ಗೆ 9 ರಿಂದ 12ರ ವರೆಗೆ ಪರೀಕ್ಷೆ ನಡೆಯಲಿದೆ.
ಸಚಿವರದೇ ಕಣ್ಗಾವಲು: ಪದೇ ಪದೇ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಟೀಕೆಗೆ ಒಳಗಾಗಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರೇ ಕಳೆದ 10 ದಿನಗಳಿಂದ ಬೆಂಗಳೂರಿನಲ್ಲಿ ಇದ್ದು ಸ್ವತಃ ಪರೀಕ್ಷಾ ಸಿದ್ಧತೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.
ಬಿಗಿಭದ್ರತೆಯಲ್ಲಿ ರವಾನೆಯಾದ ಪ್ರಶ್ನೆಪತ್ರಿಕೆ
ಪ್ರಶ್ನೆಪತ್ರಿಕೆಗಳನ್ನು ಧಾರವಾಡದ ಖಜಾನೆಯಿಂದ ಇತರ 29 ಜಿಲ್ಲೆಗಳಿಗೆ ಸೋಮವಾರ ಬೆಳಿಗ್ಗೆ ಬಿಗಿ ಭದ್ರತೆಯಲ್ಲಿ ರವಾನಿಸಲಾಯಿತು. ಸರ್ವಶಿಕ್ಷಣ ಅಭಿಯಾನ ಯೋಜನಾ ನಿರ್ದೇಶಕ ಪಿ.ಸಿ.ಜಾಫರ್ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಶಿವಕುಮಾರ್ ವಿಶೇಷ ಅಧಿಕಾರಿಗಳಾಗಿ ಸಂಪೂರ್ಣ ಪ್ರಕ್ರಿಯೆಯ ಮೇಲುಸ್ತುವಾರಿ ವಹಿಸಿದ್ದರು.
ಬೆಳಿಗ್ಗೆ 6.15ರಿಂದ ಆರಂಭವಾದ ಪ್ರಶ್ನೆಪತ್ರಿಕೆ ರವಾನೆ ಕಾರ್ಯಕ್ಕೆ ಸಾರಿಗೆ ಇಲಾಖೆ, ಕಂದಾಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ಕೈಜೋಡಿಸಿದ್ದವು. ಪ್ರಶ್ನೆಪತ್ರಿಕೆಗಳ 974 ಬಂಡಲ್‌ಗಳನ್ನು ಜಿಲ್ಲಾವಾರು ವಿಂಗಡಿಸಿ ವಿತರಿಸಲಾಯಿತು. ಪ್ರತಿ ಜಿಲ್ಲೆಗೂ ಒಂದು ಟ್ರಕ್, ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳಿರುವ ವಾಹನವನ್ನು ನಿಯೋಜಿಸಲಾಗಿತ್ತು.
ಚುನಾವಣೆಯಲ್ಲಿ ನಡೆಯುವ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಮಾದರಿಯಲ್ಲೇ ನಡೆದ ಇಡೀ ಪ್ರಕ್ರಿಯೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಒಂದೊಂದು ವಿಭಾಗದ ಉಸ್ತುವಾರಿ ವಹಿಸಲಾಗಿತ್ತು. ಖಜಾನೆಯಿಂದ ಹೊರಬರುವ ಪ್ರತಿಯೊಂದು ಬಂಡಲ್‌ಗಳನ್ನೂ ಕೂಲಂಕಷವಾಗಿ ಪರಿಶೀಲಿಸಿ ವಿತರಿಸಲಾಯಿತು. ದೂರದ ಮೈಸೂರು, ಕೊಡಗು ಮುಂತಾದ ಜಿಲ್ಲೆಗಳಿಗೆ ಮೊದಲು ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ಇಡೀ ಪ್ರಕ್ರಿಯೆ 11 ಗಂಟೆಯವರೆಗೂ ನಡೆಯಿತು.
ಪ್ರಶ್ನೆ ಪತ್ರಿಕೆಗಳು ಆಯಾ ಜಿಲ್ಲೆಯ ಉಪ ಖಜಾನೆಗಳಿಗೆ ತಲುಪಿದ ಮಾಹಿತಿಯನ್ನು ಪಿಯು ಪರೀಕ್ಷಾ ಮಂಡಳಿ ನಿರ್ದೇಶಕರಿಗೆ ನೀಡುವಂತೆ ಸ್‍ಪಷ್ಟ ನಿರ್ದೇಶನ ನೀಡಲಾಗಿತ್ತು. ಹಾಗೆಯೇ ಪ್ರತಿಯೊಂದು ಕಾರ್ಯವನ್ನೂ ಅಲ್ಲಿಂದ ಬರುವ ಸೂಚನೆಯಂತೆಯೇ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.
‘ಪ್ರಶ್ನೆ ಪತ್ರಿಕೆಯ ಎ,ಬಿ,ಸಿ ಹಾಗೂ ಡಿ ಎಂಬ ನಾಲ್ಕು ಸೆಟ್‌ಗಳನ್ನು ಪ್ರತಿ ಜಿಲ್ಲೆಗೂ ಕಳುಹಿಸಲಾಗಿದೆ. ಅದರಲ್ಲೂ ನಕಲು ಮಾಡಲು ಸಾಧ್ಯವಾಗದಂತೆ 12 ಮಾದರಿಗಳನ್ನು ಮಾಡಲಾಗಿದೆ. ಮರುಪರೀಕ್ಷೆ ದಿನ (ಏ.12) ಮಂಡಳಿಯಿಂದ ಬರುವ ಸೂಚನೆ ಆಧಾರದ ಮೇಲೆ ಯಾವ ಶ್ರೇಣಿಯ ಪತ್ರಿಕೆ ವಿತರಿಸಬೇಕು ಎಂಬುದು ನಿರ್ಧಾರವಾಗಲಿದೆ’ ಎಂದು ಅವರು ಹೇಳಿದರು.
ಜಿಲ್ಲಾಡಳಿತವು ಇಡೀ ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣ ಮಾಡಿದೆ.
ಸಿಸಿಟಿವಿ ಕ್ಯಾಮೆರಾ: ಪ್ರಶ್ನೆಪತ್ರಿಕೆ ಇರಿಸಿರುವ ಭದ್ರತಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಜಿಲ್ಲಾ ಕೇಂದ್ರಗಳಿಂದ ಪೊಲೀಸ್ ಬಿಗಿ ಭದ್ರತೆಯಲ್ಲಿಯೇ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳನ್ನು ತಲುಪಿಸಲಾಗುತ್ತದೆ. ಶಿಕ್ಷಣ ಇಲಾಖೆ ಅಧಿಕಾರಿ, ಆ ಕೇಂದ್ರದ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರಶ್ನೆಪತ್ರಿಕೆಗಳ ಕಟ್ಟುಗಳನ್ನು ಬಿಚ್ಚಲಾಗುತ್ತದೆ.