ಬಹರೈನ್ ; ಹನ್ನೆರಡು ವರುಷಗಳ ಹಿಂದೆ ದ್ವೀಪದ ಬಂಟ ಸಮುದಾಯದ ನೋವು ನಲಿವುಗಳಿಗೆ ಸ್ಪಂದಿಸಲು ಅಸ್ತಿತ್ವಕ್ಕೆ ಬಂದಂತಹ ಬಹರೈನ್ ದ್ವೀಪದ ಅನಿವಾಸಿ ಬಂಟ ಸಮುದಾಯದ ಸಂಘಟನೆಯಾದ “ಬಂಟ್ಸ್ ಬಹರೈನ್ ” ಗೆ ಈಗ ಹನ್ನೆರಡರ ಸಂಭ್ರಮ . ಈ ಹನ್ನೆರಡು ವರುಷಗಳಲ್ಲಿ ಸಂಘಟನೆಯು ದ್ವೀಪದ ಅನಿವಾಸಿ ಬಂಟರನ್ನು ತನ್ನ ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡು ಅನೇಕ ಸಮಾಜ ಮುಖಿ ಕಾರ್ಯಕ್ರಮಗಳಿಗೆ ನಾಂದಿ ಹಾಡಿದೆ . ನಾಡಿನ ಹಾಗು ದ್ವೀಪದ ಸಮಾಜ ಬಾಂದವರ ನೋವು,ನಲಿವುಗಳಿಗೆ ಸ್ಪಂದಿಸುತ್ತಾ ಸಾರ್ಥಕತೆಯನ್ನು ಕಂಡಿದೆ . ಇದೀಗ ಸಂಘಟನೆಯ ಹನ್ನೆರಡನೆ ವರುಷದ ಚುಕ್ಕಾಣಿಯನ್ನು ಹಿಡಿಯಲು ನೂತನ ಆಡಳಿತ ಮಂಡಳಿಯು ಆಯ್ಕೆಗೊಂಡಿದ್ದು ಇದರ ಸಾರಥ್ಯವನ್ನು ಶ್ರೀಯುತ ರಾಜೇಶ್ .ಬಿ . ಶೆಟ್ಟಿ ಯವರು ವಹಿಸಿಕೊಂಡಿದ್ದಾರೆ . ಈ ನೂತನ ಆಡಳಿತ ಮಂಡಳಿಯ ವಿದ್ಯುಕ್ತ ಪದಗ್ರಹಣವು ಇದೆ ಮೇ ತಿಂಗಳ ೬ ನೇ ತಾರೀಖಿನ ಶುಕ್ರವಾರದಂದು ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ .
“ಸಂಭ್ರಮ -೨೦೧೬ ” ಎನ್ನುವ ಶೀರ್ಷಿಕೆಯಲ್ಲಿ ಜರುಗುವ ಈ ಕಾರ್ಯಕ್ರಮಕ್ಕೆ ನಾಡಿನಿಂದ ವಿಶೇಷವಾಗಿ ಬಂಟ ಸಮುದಾಯದ ಹೆಮ್ಮೆಯ ಸಾಧಕರುಗಳಾದ ಶ್ರೀ ಕದ್ರಿ ನವನೀತ್ ಶೆಟ್ಟಿ ಹಾಗು ಚಲನಚಿತ್ರ ತಾರೆ ಯಜ್ಞ ಶೆಟ್ಟಿ ಆಗಮಿಸಿ ಹೆಚ್ಚಿನ ಮೆರುಗು ನೀಡಲಿದ್ದಾರೆ .
ಬಂಟ ವಿಭೂಷಣ ,ತುಳು ಸಾಹಿತ್ಯ ಪ್ರಶಸ್ತಿ ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕ್ರತಿಕ ರಂಗಗಳಲ್ಲಿ ಅನನ್ಯ ಸಾಧನೆಯನ್ನು ಕದ್ರಿ ನವನೀತ್ ಶೆಟ್ಟಿ ಯವರು ಮಾಡಿದ್ದರೆ , ತಮಿಳು ,ತೆಲುಗು ಹಾಗು ಕನ್ನಡ ಚಲನಚಿತ್ರಗಳಲ್ಲಿ ತನ್ನ ನಟನೆಯ ಮುಖೇನ ವಿಶಿಷ್ಟ ಛಾಪನ್ನು ಮೂಡಿಸಿ ಯಜ್ಞ ಶೆಟ್ಟಿ ಯವರು ಜನಪ್ರಿಯರಾಗಿದ್ದಾರೆ . ಇವರಿಬ್ಬರೂ ವಿಶೇಷ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ .
ಬಂಟ ಸಮುದಾಯ ಪ್ರತಿಭಾವಂತ ಕಲಾವಿದರ ಪ್ರತಿಭೆಯು ವೈವಿಧ್ಯಮಯ ನ್ರತ್ಯ ,ಹಾಡು ,ಹಾಸ್ಯ ಪ್ರಹಸನಗಳ ಮೂಲಕ ಅನಾವರಣಗೊಳ್ಳಲಿದೆ .
ಕಾರ್ಯಕ್ರಮದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಬಂಟ್ಸ್ ಬಹರೈನ್ ನ ಅಧ್ಯಕ್ಷರಾದ ಶ್ರೀ ರಾಜೇಶ್ ಶೆಟ್ಟಿ ಯವರನ್ನು ದೂರವಾಣಿ ಸಂಖ್ಯೆ ೩೯೦೩೪೭೧೭ ಮುಖೇನ ಸಂಪರ್ಕಿಸಬಹುದು .
ವರದಿ-ಕಮಲಾಕ್ಷ ಅಮೀನ್