ಕರ್ನಾಟಕ

ಭೂ ಹಗರಣದಲ್ಲಿ ಮಾಜಿ ಸಿಎಂ ಶೆಟ್ಟರ್; ಶಿವಮೂರ್ತಿ ಸ್ವಾಮೀಜಿ ಖಾತೆಗೆ ಕೋಟ್ಯಂತರ ಹಣ ವರ್ಗಾವಣೆ

Pinterest LinkedIn Tumblr

Jagadish_Shettar

ಬೆಂಗಳೂರು, ಸೆ.15: ವಿವಾದಿತ ಜಾಗವೊಂದನ್ನು ಖರೀದಿಸುವ ನೆಪದಲ್ಲಿ ಮುರುಘಾ ಮಠಕ್ಕೆ ಸುಮಾರು 63 ಕೋಟಿ ರೂ.ಗಳನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತನ್ನ ಆಡಳಿತಾವಧಿಯಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಆರೋಪಿಸಿದ್ದಾರೆ.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಕೆಐಎಡಿಬಿಗೆ ಸ್ವಂತ ಕಟ್ಟಡವನ್ನು ನಿರ್ಮಿಸುವುದಕ್ಕಾಗಿ ಬೆಂಗಳೂರಿನ ಗಾಂಧಿನಗರದಲ್ಲಿರುವ ಮುರುಘಾಮಠಕ್ಕೆ ಸೇರಿದ ಜಾಗವನ್ನು ಸುಮಾರು 63 ಕೋಟಿ ರೂ.ಗೆ ಖರೀದಿಸಿತ್ತು. ಆದರೆ, ಇಲ್ಲಿಯವರೆಗೂ ಆ ಜಾಗ ಸರಕಾರದ ವಶವಾಗಿಲ್ಲವೆಂದು ವಿವರಿಸಿದರು.

ಮುರುಘಾ ಮಠಕ್ಕೆ ಸೇರಿರುವ ಜಾಗವು ವಿವಾದದಿಂದ ಕೂಡಿದೆ ಎಂದು ಕಾನೂನು ತಜ್ಞರು ಸರಕಾರಕ್ಕೆ ಸೂಚನೆ ನೀಡಿದ್ದರು. ಆದರೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ಸರಕಾರ ಆ ಜಾಗವನ್ನು ಭಾರೀ ಬೆಲೆಗೆ ಖರೀದಿಸಿದೆ. ಖರೀದಿಯ ಮೊತ್ತವಾದ ಕೋಟಿಗಟ್ಟಲೆ ಹಣ ಚಿತ್ರದುರ್ಗ ಮಠದ ಸ್ವಾಮೀಜಿ ಶಿವಮೂರ್ತಿಯವರ ಹೆಸರಿಗೆ ವರ್ಗಾವಣೆಯೂ ಆಗಿದೆ. ಆದರೆ ಇಲ್ಲಿಯವರೆಗೂ ಆ ಜಾಗ ಸರಕಾರದ ವಶವಾಗಿಲ್ಲ. ಹಾಗಾಗಿ ಇದರಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ಅಬ್ರಹಾಂ ಸರಕಾರವನ್ನು ಆಗ್ರಹಿಸಿದರು.

‘‘ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ರ ಕೈವಾಡದ ಬಗ್ಗೆ ದಾಖಲೆ ಪರಿಶೀಲಿಸುತ್ತೇವೆ. ತಪ್ಪು ಕಂಡುಬಂದರೆ ಸರಕಾರದಿಂದ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.’’ -ಟಿ.ಬಿ. ಜಯಚಂದ್ರ, ಕಾನೂನು ಸಚಿವ

Write A Comment