ಚಿತ್ರದುರ್ಗ, ಸೆ.16: ದೇಶದಲ್ಲಿ ಬೇರೆ ರಾಷ್ಟ್ರದ ವಸ್ತುಗಳು ಹೆಚ್ಚಾಗಿ ಸರಬರಾಜಾಗುತ್ತಿದ್ದು, ಇದು ತಪ್ಪಬೇಕು. ಎಲ್ಲಡೆ ಮೇಡ್ ಇನ್ ಇಂಡಿಯಾ ಅಥವಾ ಇಂಡಿಯಾ ಮೇಕಿಂಗ್ ಆಗಬೇಕೆಂಬುವ ಇಚ್ಛೆ ಪ್ರಧಾನಿ ನರೇಂದ್ರ ಮೋದಿಯವರದ್ದಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಿ.ಎಂ.ಸಿದ್ದೇಶ್ವರ್ ತಿಳಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ ಚಿತ್ರದುರ್ಗ ಜಿಲ್ಲಾ ಘಟಕದಿಂದ ಮಂಗಳವಾರ ನಗರದ ಪಂಚಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನರೇಂದ್ರಮೋದಿ ದೇಶದ ಪ್ರಧಾನ ಮಂತ್ರಿಯಾದ ಬಳಿಕ ಭಾರತ ದೇಶವನ್ನು ಕಡೆಗಣಿಸುತ್ತಿದ್ದ ನರೆ ರಾಷ್ಟ್ರಗಳೆಲ್ಲಾ ಕರೆದು ಸ್ಥಾನವನ್ನು ನೀಡುತ್ತಿದೆ. ಇದು ಬರೀ 100 ದಿನಗಳ ಸಾಧನೆಯಾಗಿದೆ. ಮುಂದಿನ ಐದು ವರ್ಷದಲ್ಲಿ ದೇಶದ ಚಿತ್ರಣವೇ ಬದಲಾಗಲಿದೆ ಎಂದು ಅವರು ಹೇಳಿದರು.
ಖಾತೆ ಮಾಡಿಸಿ: ತಳ ಮಟದ್ದ ವ್ಯಕ್ತಿ ಸಹಾ ಬ್ಯಾಂಕ್ ಖಾತೆಯನ್ನು ಹೊಂದುವುದರ ಮೂಲಕ ದೇಶದ ಪ್ರಗತಿಗೆ ಕಾರಣವಾಗಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶವಾಗಿದೆ. ಇದಕ್ಕೆ ಪಕ್ಷದ ಕಾರ್ಯಕರ್ತರು ಕೈಜೋಡಿಸಬೇಕಿದೆ. ತಮ್ಮ ಮನೆಯ ಸುತ್ತಮುತ್ತಲ್ಲಿನ ಪ್ರದೇಶದಲ್ಲಿನ ಜನತೆ ಈವರೆವಿಗೂ ಖಾತೆಯನ್ನು ಮಾಡಿಸಿದಿದ್ದರೆ, ಅವರಿಗೆ ಖಾತೆಯನ್ನು ಮಾಡಿಸುವಂತೆ ಸಚಿವರು ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಜಿ. ನರೇಂದ್ರನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಮಾಜಿ ಶಾಸಕ ಎಂ.ಚಂದ್ರಪ್ಪ, ರಮೇಶ್, ಎಸ್. ಸಿದ್ದೇಶ್ ಯಾದವ್, ಜಿ.ಎಂ.ಸುರೇಶ್, ತಾ.ಪಂ.ಅಧ್ಯಕ್ಷ ರಾಜಕುಮಾರ್ ಮತ್ತಿತರರಿದ್ದರು.