ಮೈಸೂರು: ಇಲ್ಲಿಯ ಅರಮನೆಗೆ ಹೊಂದಿಕೊಂಡಿರುವ ಕೋಟೆ ಮಾರಮ್ಮನ ದೇವಸ್ಥಾನದ ಮೇಲೆ ಹಳೆಯದಾದ ಬೃಹತ್ ಅರಳಿ ಮರವೊಂದು ಉರುಳಿಬಿದ್ದ ಪರಿಣಾಮ ಅರ್ಚಕ ಕುಟುಂಬದ ಮಹಿಳೆಯರಿಬ್ಬರು ಸಾವಿಗೀಡಾಗಿ, ಮೂವರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ಕೋಟೆ ಮಾರಮ್ಮನ ದೇವಸ್ಥಾನದಲ್ಲಿ ಅರ್ಚಕರಾಗಿರುವ ಸುಣ್ಣದಕೇರಿ ೪ನೇ ಅಡ್ಡರಸ್ತೆಯ ನಿವಾಸಿ ಆರ್. ಸಿದ್ದರಾಜು ಅವರ ಪತ್ನಿ ಸುಶೀಲಮ್ಮ (೬8), ಅವರ ಸಂಬಂಧಿ ಶೈಲಜಾ (೩೫) ಮೃತಪಟ್ಟವರು.ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದ ಭಕ್ತರಾದ ಮಂಜುಳಾ, ಮೊಮ್ಮಗ ರವಿಚಂದ್ರ ಮತ್ತು ಕನಕಾ ಎಂಬುವವರು ಗಾಯಗೊಂಡು ಕೆ.ಆರ್. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಧ್ಯಾಹ್ನ ೨.೪೫ರ ಸುಮಾರಿ ನಲ್ಲಿ ಅರಳಿಮರ ಉರುಳಿ ಬಿತ್ತು. ದೇವಸ್ಥಾನದ ಹೊರಭಾಗದಲ್ಲಿದ್ದ ಶೈಲಜಾ ಮರದಡಿ ಸಿಲುಕಿ ಮೃತಪಟ್ಟರು. ದೇವಸ್ಥಾನದಲ್ಲಿ ಪೂಜೆ ಮಾಡುವುದರಲ್ಲಿ ನಿರತರಾಗಿದ್ದಾಗ ಗಾಯಗೊಂಡ ಸುಶೀಲಮ್ಮ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟರು.
ದೇವಸ್ಥಾನದ ಮುಂಭಾಗ ನಿಂತಿದ್ದ ಭಕ್ತರು ಮರ ಬೀಳುತ್ತಿದ್ದುದ್ದನ್ನು ಗಮನಿಸಿ, ಗಾಬರಿಗೊಂಡು ಚೆಲ್ಲಾಪಿಲ್ಲಿಯಾಗಿ ಸ್ಥಳದಿಂದ ಕಾಲ್ಕಿತ್ತರು.
ಮರದ ಕೆಳಗೆ ಸಿಲುಕಿ ಗಾಯಗೊಂಡವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಯಿತು. ಮುಖ್ಯರಸ್ತೆಯಿಂದ ದೇವಸ್ಥಾನ ೧೫೦ ಅಡಿ ದೂರದಲ್ಲಿ ಇದ್ದುದ್ದರಿಂದ ಮರ ಉರುಳಿದಾಗ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ.
ಬೆಳಿಗ್ಗೆ ದೇವಸ್ಥಾನದ ಬಾಗಿಲು ತೆಗೆದಿದ್ದ ಅರ್ಚಕ ಸಿದ್ದರಾಜು ಅವರು ಅನಾರೋಗ್ಯ ಕಾರಣದಿಂದ ಮನೆಗೆ ಹೋಗಿದ್ದರು. ಹೀಗಾಗಿ, ಸುಶೀಲಮ್ಮ ಹಾಗೂ ಶೈಲಜಾ ದೇವಸ್ಥಾನದಲ್ಲಿದ್ದರು.ಮೃತಪಟ್ಟವರಿಗೆ ಜಿಲ್ಲಾಡಳಿತ ತಲಾ 1.50 ಲಕ್ಷ ಪರಿಹಾರ ಘೋಷಿಸಿದೆ.