ಬೆಂಗಳೂರು, ಸೆ.16: ಕಾನೂನು ಕೈಗೆತ್ತಿಕೊಂಡು ನೈತಿಕ ಪೊಲೀಸ್‌ಗಿರಿಯನ್ನು ಮುಂದುವರಿಸಿದಲ್ಲಿ ಶ್ರೀರಾಮ ಸೇನೆ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಎಚ್ಚರಿಕೆ ನೀಡಿದ್ದಾರೆ.ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮ ಸೇನೆ ನೈತಿಕ ಪೊಲೀಸ್‌ಗಿರಿ ಮಾದರಿಯ ಚಟುವಟಿಕೆಯಲ್ಲಿ ತಲ್ಲೀನವಾಗಿದೆ. ಈಗಾಗಲೇ ಗೋವಾ ರಾಜ್ಯದಲ್ಲಿ ಆ ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದರು.
ಕಾನೂನು ಕೈಗೆತ್ತಿಕೊಳ್ಳಲು ಯಾವುದೆ ಸಂಘಟನೆಗಳಿಗೆ ಸರಕಾರ ಅವಕಾಶ ನೀಡುವುದಿಲ್ಲ. ನೈತಿಕ ಪೊಲೀಸ್‌ಗಿರಿಯನ್ನು ರಾಜ್ಯದಲ್ಲಿ ಮುಂದುವರೆಸಲು ಶ್ರೀರಾಮಸೇನೆ ಪ್ರಯತ್ನಪಟ್ಟರೆ ಅನಿವಾರ್ಯವಾಗಿ ಸಂಘಟನೆಯನ್ನು ನಿಷೇಧಿಸಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಸನ್ನಡತೆ ಕೈದಿಗಳನ್ನು ಬಿಡುಗಡೆ ಮಾಡುವ ವಿಚಾರಕ್ಕೆ ಸಚಿವ ಸಂಪುಟದಲ್ಲಿ ಮಾರ್ಗಸೂಚಿಗಳನ್ನು ರಚಿಸಲಾಗಿದೆ. ಕಾನೂನು ಸಚಿವರು ಈಗಾಗಲೇ ಈ ವಿಚಾರದ ಕುರಿತು ರಾಜ್ಯಪಾಲರೊಂದಿಗೆ ಚರ್ಚೆ ನಡೆಸಿದ್ದಾರೆ. ಕೈದಿಗಳನ್ನು ಬಿಡುಗಡೆ ಮಾಡುವ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಿ ಅನುಮತಿ ಪಡೆದುಕೊಳ್ಳಲಾಗುವುದು ಎಂದು ಜಾರ್ಜ್ ಹೇಳಿದರು.