ಬೆಂಗಳೂರು, ಸೆ.22: ಪ್ರಧಾನಿಯಾದ ನಂತರ ಇದೇ ಪ್ರಥಮ ಬಾರಿಗೆ ರಾಜ್ಯ ಹಾಗೂ ನಗರಕ್ಕೆ ಆಗಮಿಸುತ್ತಿರುವ ನರೇಂದ್ರ ಮೋದಿಯವರಿಗೆ ಅದ್ಧೂರಿ ಸ್ವಾಗತ ಕೋರಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಮಾನ ನಿಲ್ದಾಣದ ಮುಂಭಾಗ ಹಾಗೂ ಎಲ್ಲ ವೃತ್ತಗಳಲ್ಲಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರ ಬೃಹತ್ ಫ್ಲೆಕ್ಸ್ ಗಳು ತುಂಬಿ ತುಳುಕುತ್ತಿವೆ. ಗಿಡಮರಗಳಲ್ಲೂ ಮೋದಿಯವರ ಚಿತ್ರ ರಾರಾಜಿಸುತ್ತಿವೆ. ಎಚ್‍ಎಎಲ್ ಮುಂಭಾಗ ಮೋದಿಯವರಿಗೆ ಅಭಿನಂದನೆ ಸಲ್ಲಿಸಲು ನಿರ್ಮಿಸಲಾಗುತ್ತಿರುವ ವೇದಿಕೆ ಹಾಗೂ ಸುತ್ತಮುತ್ತಲ ರಸ್ತೆಗಳನ್ನು ಪರಿಶೀಲಿಸಿದ ನಂತರ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಸಿದ್ಧತೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮೋದಿಯವರನ್ನು ಸ್ವಾಗತಿಸಲು ವಿಶೇಷ ತಯಾರಿ ಮಾಡಿಕೊಳ್ಳಲಾಗಿದೆ. ನಾಳೆ ಸಂಜೆ 6 ಗಂಟೆಗೆ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಅವರು ಬಂದಿಳಿಯಲಿದ್ದಾರೆ. ಅವರನ್ನು ಸ್ವಾಗತಿಸಲು ನಮ್ಮ ಪಕ್ಷದ 30 ಮಂದಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು. ಎಚ್‍ಎಎಲ್ ನಿಲ್ದಾಣದ ಮುಂಭಾಗ ಸ್ವಚ್ಚಪಡಿಸಿ ಪುಟ್ಟ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಇಲ್ಲಿ 15-20 ನಿಮಿಷ ಪ್ರಧಾನಿಯವರು ಇದ್ದು ಮಾತನಾಡಲಿದ್ದಾರೆ. ಈ ವೇಳೆ ಅವರನ್ನು ಸಾಂಪ್ರದಾಯಿಕ ಪೇಟ ತೊಡಿಸಿ, ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸುತ್ತೇವೆ ಎಂದು ಹೇಳಿದರು. ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್, ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಮೇಲ್ಮನೆ ಪ್ರತಿಪಕ್ಷದ ನಾಯಕ ಈಶ್ವರಪ್ಪ ಸೇರಿದಂತೆ ನಾವೆಲ್ಲಾ ಮುಖಂಡರು ಹಾಜರಿರುತ್ತೇವೆ ಎಂದರು.
ನಾಳೆ ರಾತ್ರಿ ರಾಜಭವನದಲ್ಲಿ ಮೋದಿ ತಂಗಲಿದ್ದಾರೆ. ಬುಧವಾರ ಬೆಳಗ್ಗೆ 6.45ಕ್ಕೆ ಪೀಣ್ಯದ ಇಸ್ರೋ ಸಂಸ್ಥೆಗೆ ಭೇಟಿ ನೀಡಿ ನಂತರ ತುಮಕೂರಿಗೆ ತೆರಳಿ ನೂತನ ಫುಡ್‍ಪಾರ್ಕ್ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಸುಮಾರು 15 ಸಾವಿರ ಕಾರ್ಯಕರ್ತರು ಆಗಮಿಸಲಿದ್ದಾರೆ. ದಾರಿಯುದ್ದಕ್ಕೂ ಮತ್ತು ಎಲ್ಲಾ ವೃತ್ತಗಳಲ್ಲೂ ಸ್ವಾಗತಿಸಲು ಕಾರ್ಯಕರ್ತರಿಗೆ ಅವಕಾಶವಿದೆ. ತುಮಕೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ. ಫುಡ್‍ಪಾರ್ಕ್‍ಗೆ ಸಂಬಂಧಪಟ್ಟ 500 ಮಂದಿ ಹಾಜರಿರುತ್ತಾರೆ. ಅಲ್ಲೂ ಕೂಡ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ರಕ್ಷಣಾ ತಂಡ ಬಂದು ಎಲ್ಲ ಸಿದ್ಧತೆ ಪರಿಶೀಲನೆ ಮಾಡಿದೆ ಎಂದು ಹೇಳಿದರು.
ಮೂರು ಸಾವಿರ ಕಾರ್ಯಕರ್ತರಿಗೆ ವಿಐಪಿ ಪಾಸ್ ಕೊಡಲಾಗುತ್ತಿದೆ. ಕಾರ್ಯಕರ್ತರಿಗೂ ನಾವು ಬೇರೆ ಪಾಸ್ ಕೊಡುತ್ತಿದ್ದೇವೆ ಎಂದು ತಿಳಿಸಿದರು. ಅನುದಾನಕ್ಕೆ ಮನವಿ: ಪ್ರಧಾನಿ ಭೇಟಿ ವೇಳೆ ಉತ್ತರ ಕರ್ನಾಟಕ ನೆರೆ ಹಾವಳಿ ಪರಿಹಾರಕ್ಕಾಗಿ ಹೆಚ್ಚಿನ ಅನುದಾನ ನೀಡುವಂತೆ ನಮ್ಮ ಪಕ್ಷ ಮನವಿ ಸಲ್ಲಿಸಲಿದೆ ಮತ್ತು ಸ್ಮಾರ್ಟ್ ಸಿಟಿ ಹಾಗೂ ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಮನವಿ ಸಲ್ಲಿಸುತ್ತೇವೆ ಎಂದು ಅಶೋಕ್ ಹೇಳಿದರು. ಪ್ರಧಾನಿಯವರು ಬಂದ ಸಂದರ್ಭದಲ್ಲಿ ಪಕ್ಷದ ಬಾವುಟ ತರುವುದು, ಘೋಷಣೆ ಕೂಗುವುದು ಮಾಡಬಾರದೆಂದು ಇದೇ ವೇಳೆ ಅಶೋಕ್ ತಮ್ಮ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ನರೇಂದ್ರ ಮೋದಿಯವರು ರಾಜ್ಯಕ್ಕೆ ಬರುತ್ತಿರುವುದರಿಂದ ಎಲ್ಲೆಡೆ ಬಿಜೆಪಿಮಯ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ಸಿಗರು ಟೀಕಿಸಿದ್ದಾರೆ. ಮನಮೋಹನ್ ಸಿಂಗ್ ಅವರು ಇಲ್ಲಿಗೆ ಭೇಟಿ ನೀಡಿದ್ದಾಗಲೂ ಅವರ ಪಕ್ಷದವರು ಹಾಗೆಯೇ ಮಾಡಿದ್ದರು. ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ: ಬೀದರ್‍ನಲ್ಲಿ ಆಹಾರ ಕಲಬೆರಕೆ ಸಂಬಂಧ ಸುದ್ದಿ ಸಂಗ್ರಹಿಸಲು ಹೋಗಿದ್ದ ಮಾಧ್ಯಮದವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಎಂದು ಹೇಳಿದ ಅಶೋಕ್, ಆಹಾರ ಕಲಬೆರಕೆ ತಡೆ ಕಾನೂನು ಬಳಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಮ್ಮ ಪಕ್ಷದ ಕಾರ್ಯಕರ್ತರು, ನಾಯಕರ ಮೋದಿ ಭೇಟಿಗೆ ಇನ್ನು ಸಮಯ ನಿಗದಿಯಾಗಿಲ್ಲ ಎಂದು ಅವರು ತಿಳಿಸಿದರು. ಈ ವೇಳೆ ಸಂಸದ ಪಿ.ಸಿ.ಮೋಹನ್, ಬಿಜೆಪಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮುನಿರಾಜು, ಶಾಸಕ ರಘು, ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.