ಬೆಂಗಳೂರು, ಸೆ.27: ಕುದುರೆಮುಖ ಹುಲಿಯೋಜನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಜನತೆ ಆತಂಕದಲ್ಲಿದ್ದು, ಈ ರಾಜ್ಯ ಸರಕಾರ ಸ್ಪಷ್ಟಣೆ ನೀಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ರಮಾನಾಥ ರೈಗೆ ಪತ್ರ ಬರೆದಿರುವ ಅವರು, 2012ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಕುದುರೆಮುಖ ಅರಣ್ಯವಲಯವನ್ನು ಹುಲಿಯೋಜನೆ ಯಡಿಯಲ್ಲಿ ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ ಎಂದಿದ್ದಾರೆ.
ಪಶ್ಚಿಮಘಟ್ಟದ ಮತ್ತು ಮಲೆನಾಡಿನ ಹಲವಾರು ಪ್ರದೇಶಗಳಲ್ಲಿ ಈ ಯೋಜನೆಯ ಬಗ್ಗೆ ಜನ ಆತಂಕದ ಲ್ಲಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಹರಿಜನ, ಗಿರಿಜನ, ಹಿಂದುಳಿದ ವರ್ಗದ ಜನವಸತಿ ಇರುವ ಈ ಪ್ರದೇಶಗಳು ಹುಲಿಯೋಜನೆಯಾಗುವುದು ಜನರಿಗೆ ಬೇಕಾಗಿಲ್ಲ. ಆದುದರಿಂದ, ಮತ್ತೊಮ್ಮೆ ಜನರ ಸಂಶಯವನ್ನು ನಿವಾರಿಸಬೇಕಾದ ಅನಿವಾರ್ಯತೆಯಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸ್ಥಳಾಂತರಿಸಿ, ಹಳ್ಳಿಗಳನ್ನು ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಿಕೊಡುವುದು ಮಾನವ ಅಸಾಧ್ಯವಾದ ಕೆಲಸವಾಗಿರುವುದರಿಂದ ಯಾವು ದೇ ಕಾರಣಕ್ಕೂ ಈ ಪ್ರದೇಶವನ್ನು ಹುಲಿಯೋಜನೆಯಲ್ಲಿ ನೋಟಿಫಿಕೇಷನ್ ಮಾಡುವ ಪ್ರಸ್ತಾಪ ಇಲ್ಲವೆಂದು ಜನರಿಗೆ ಸ್ಪಷ್ಟಪಡಿಸಬೇಕೆಂದು ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.