ಬೆಂಗಳೂರು, ಸೆ. 27: ದಾವಣಗೆರೆ, ಬಾಗಲಕೋಟೆ, ಬಿಜಾಪುರ, ಬಳ್ಳಾರಿ, ತುಮಕೂರು, ಮೈಸೂರು, ಗುಲ್ಬರ್ಗ ಚಾಮರಾಜನಗರ, ಚನ್ನಪಟ್ಟಣ ಸೇರಿ ರಾಜ್ಯದ 9 ಪ್ರದೇಶಗಳಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಜವಳಿ ಸಚಿವ ಬಾಬುರಾವ್ ಚಿಂಚನಸೂರ್ ತಿಳಿಸಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತೀ ಪಾರ್ಕ್‌ಗೆ ಕನಿಷ್ಠ 15ರಿಂದ 50 ಎಕರೆಗಳಷ್ಟು ಭೂಮಿಯ ಅಗತ್ಯವಿದೆ. ಜವಳಿ ಉದ್ಯಮದ ಉತ್ತೇಜನಕ್ಕೆ ರಾಜ್ಯ ಸರಕಾರ 2013-18ನೆ ಸಾಲಿಗೆ ನೂತನ ಜವಳಿ ನೀತಿ ಘೋಷಿಸಲಾಗಿದೆ.
10 ಸಾವಿರ ಕೋಟಿ ರೂ.ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 5ಲಕ್ಷ ಮಂದಿಗೆ ಉದ್ಯೋಗ ದೊರಕಲಿದೆ ಎಂದರು. ಹೊಸದಿಲ್ಲಿಯಲ್ಲಿ ಸೆ.24ರಂದು ಕೇಂದ್ರ ಜವಳಿ ಸಚಿವ ಸಂತೋಷ್ ಕುಮಾರ್ ಅವರನ್ನು ಭೇಟಿ ಮಾಡಿದ್ದು, ರಾಜ್ಯದಲ್ಲಿನ ನೇಕಾರರಿಗೆ ಆರೋಗ್ಯ ವಿಮೆ, ರಿಯಾಯಿತಿ ದರದಲ್ಲಿ ನೂಲು ಪೂರೈಕೆಗೆ 1 ಸಾವಿರ ಕೋಟಿ ರೂ.ವಿಶೇಷ ಪ್ಯಾಕೇಜ್ ಘೋಷಿಸಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿನ ಹಳೆಯ ನೂಲಿನ ಗಿರಣಿಗಳ ಪುನಶ್ಚೇೀತನಕ್ಕೆ ಕೇಂದ್ರ ಟಿಯೂಎಫ್ ಯೋಜನೆಯಡಿ 500 ಕೋಟಿ ರೂ.ವಿಶೇಷ ಅನುದಾನ ನೀಡಲು ಕೋರಲಾಗಿದೆ ಎಂದ ಅವರು, ಯಾದಗಿರಿ ಜಿಲ್ಲೆಯಲ್ಲಿ 1 ಸಾವಿರ ಎಕರೆ ವಿಸ್ತೀರ್ಣದಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಜವಳಿ ಉದ್ಯಮ ಸ್ಥಾಪಿಸಲು ಮುಂದೆ ಬರುವ ಉದ್ದಿಮೆದಾರರನ್ನು ಉತ್ತೇಜಿಸಲು ಸರಕಾರ ವಿಶೇಷ ಅನುಕೂಲಗಳನ್ನು ಕಲ್ಪಿಸಿದೆ, ತೆರಿಗೆ ವಿನಾಯಿತಿ ಸೇರಿ ಬ್ಯಾಂಕ್‌ಗಳಿಂದ ತ್ವರಿತ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಲು ಕ್ರಮ ವಹಿಸಲಾಗಿದೆ ಎಂದ ಅವರು, ನಿರುದ್ಯೋಗ ನಿವಾರಣೆಗೆ ಜವಳಿ ಉದ್ಯಮ ಪರಿಹಾರ ಕಲ್ಪಿಸಲಿದೆ ಎಂದು ತಿಳಿಸಿದರು.
ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ 25 ಕೋಟಿ ರೂ.ವೆಚ್ಚದಲ್ಲಿ ಸುಮಾರು 27 ಎಕರೆ ಪ್ರದೇಶದಲ್ಲಿ ಕುರಿ ಉಣ್ಣೆ ಪಾರ್ಕ್‌ನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಚನ್ನಪಟ್ಟಣದಲ್ಲಿ ಸಿಲ್ಕ್ ಪಾರ್ಕ್ ಸ್ಥಾಪಿಸಲಾಗುವುದು ಎಂದ ಅವರು, ಜವಳಿ ಉದ್ಯಮ ಪ್ರೋತ್ಸಾಹಕ್ಕೆ ವಿಶೇಷ ಅನುದಾನ ಹಾಗೂ ಅಗತ್ಯ ಸೌಲಭ್ಯಗಳಬ್ಬು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.