ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅಪರಾಧಿ ಎಂದು ಶನಿವಾರ ಸಾರಿರುವ ಇಲ್ಲಿನ ವಿಶೇಷ ನ್ಯಾಯಾಲಯ, ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು ರೂ 100 ಕೋಟಿ ದಂಡ ವಿಧಿಸಿದೆ.
ಇದೇ ಪ್ರಕರಣದಲ್ಲಿ ಸಹಆರೋಪಿಗಳಾದ ಜಯಲಲಿತಾ ಅವರ ಗೆಳತಿ ವಿ.ಕೆ.ಶಶಿಕಲಾ, ಸಂಬಂಧಿ ಜೆ.ಇಳವರಸಿ ಮತ್ತು ಸಾಕುಮಗ ವಿ.ಎನ್.ಸುಧಾಕರನ್ ಕೂಡ ದೋಷಿಗಳು ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್ ಮೈಕೆಲ್ ಡಿ ಕುನ್ಹ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಈ ಮೂವರಿಗೂ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು ತಲಾ ರೂ 10 ಕೋಟಿ ದಂಡ ವಿಧಿಸಲಾಗಿದೆ. ಸಂಜೆಯೇ ಎಲ್ಲ ಅಪರಾಧಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಶಕ್ಕೆ ನೀಡಲಾಯಿತು.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 13(1)(ಇ) (ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ) ಅಡಿಯಲ್ಲಿ ಜಯಲಲಿತಾ ಮತ್ತು ಇತರೆ ಮೂವರು ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ. ಈ ಅಪರಾಧಕ್ಕಾಗಿ ಕಾಯ್ದೆಯ ಸೆಕ್ಷನ್ 13(2)ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಮೇಲಿದ್ದ ಕ್ರಿಮಿನಲ್ ಒಳಸಂಚು ಆರೋಪ ಕೂಡ ಸಾಬೀತಾಗಿದೆ ಎಂದು ನ್ಯಾಯಾಲಯ ಪ್ರಕಟಿಸಿದೆ. ಈ ಅಪರಾಧಕ್ಕಾಗಿ ಮೂವರಿಗೂ ತಲಾ ಆರು ತಿಂಗಳ ಸೆರೆವಾಸ ಮತ್ತು ತಲಾ ರೂ 10 ಸಾವಿರ ದಂಡ ವಿಧಿಸಲಾಗಿದೆ.
11.15ಕ್ಕೆ ಆರಂಭ: ಜಯಲಲಿತಾ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಜಾನ್ ಮೈಕೆಲ್ ಡಿ ಕುನ್ಹ ಅವರು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಆವರಣದ ಗಾಂಧಿ ಭವನದಲ್ಲಿ ಸ್ಥಾಪಿಸಿರುವ ವಿಶೇಷ ನ್ಯಾಯಾಲಯದಲ್ಲಿ ಬೆಳಿಗ್ಗೆ 11.30ಕ್ಕೆ ಆದೇಶ ಪ್ರಕಟಿಸಿದರು. ‘ಈ ಪ್ರಕರಣದ ನಾಲ್ವರು ಆರೋಪಿಗಳೂ ದೋಷಿಗಳು ಎಂಬುದು ವಿಚಾರಣೆಯಲ್ಲಿ ಸಾಬೀತಾಗಿದೆ’ ಎಂದು ನ್ಯಾಯಾಧೀಶರು ಮೊದಲಿಗೆ ತಿಳಿಸಿದರು.
ಶಿಕ್ಷೆಯ ಪ್ರಮಾಣ ಕುರಿತು ತನಿಖಾ ಸಂಸ್ಥೆ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಭವಾನಿ ಸಿಂಗ್ ಮತ್ತು ಅಪರಾಧಿಗಳ ಪರ ವಕೀಲರು ವಾದ ಮಂಡಿಸಿದರು. ಮಧ್ಯಾಹ್ನ 3 ಗಂಟೆಗೆ ಮತ್ತೆ ಕಲಾಪ ಆರಂಭವಾಯಿತು. ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ಪ್ರಕಟಿಸಿ, ಅಪರಾಧಿಗಳನ್ನು ಕಾರಾಗೃಹದ ವಶಕ್ಕೆ ಒಪ್ಪಿಸುವಂತೆ ಆದೇಶ ಹೊರಡಿಸಿದರು. ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸಂಜೆ 6.05ಕ್ಕೆ ಜಯಲಲಿತಾ ಸೇರಿದಂತೆ ಎಲ್ಲ ಆರೋಪಿಗಳನ್ನು ನ್ಯಾಯಾಲಯದಿಂದ ಕರೆದೊಯ್ದ ಬೆಂಗಳೂರು ನಗರ ಪೊಲೀಸರು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಶಕ್ಕೆ ಒಪ್ಪಿಸಿದರು.
‘ಕೈದಿ ನಂ 7402’
ಬೆಂಗಳೂರು: ಜಯಲಲಿತಾ, ಅವರ ಸ್ನೇಹಿತೆ ಶಶಿಕಲಾ ನಟರಾಜನ್ ಮತ್ತು ಸಂಬಂಧಿ ಜೆ.ಇಳವರಸಿ ಅವರನ್ನು ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮಹಿಳಾ ಕೈದಿಗಳ ವಿಭಾಗದಲ್ಲಿ ಇರಿಸಲಾಗಿದೆ.
ಮತ್ತೊಬ್ಬ ಅಪರಾಧಿ, ಜಯಲಲಿತಾ ಅವರ ದತ್ತುಪುತ್ರ ವಿ.ಎನ್.ಸುಧಾಕರನ್ ಅವರನ್ನು ಕಾರಾಗೃಹದ ಅತಿ ಗಣ್ಯ ವ್ಯಕ್ತಿಗಳ ವಿಭಾಗದ ಕೊಠಡಿಯಲ್ಲಿ ಇರಿಸಲಾಗಿದೆ.
‘ಸಂಜೆ 6.05ರ ಸುಮಾರಿಗೆ ಜೈಲಿಗೆ ಬಂದ ಆ ನಾಲ್ಕೂ ಮಂದಿಯ ವಿವರಗಳನ್ನು ಕೈದಿಗಳ ದಾಖಲಾತಿ ಪುಸ್ತಕದಲ್ಲಿ ನಮೂದಿಸಿಕೊಂಡು ಹಾಜರಾತಿ ತೆಗೆದುಕೊಳ್ಳಲಾಯಿತು. ನಂತರ ಅವರನ್ನು ಜೈಲಿನ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು’ ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದರು.
‘ಜೈಲಿನ ನಿಯಮಾವಳಿ ಪ್ರಕಾರ ಅವರೆಲ್ಲರಿಗೂ ಕೈದಿ ಸಂಖ್ಯೆ ನೀಡಲಾಗಿದೆ. ಜಯಲಲಿತಾ ಅವರ ಕೈದಿ ಸಂಖ್ಯೆ 7402, ಶಶಿಕಲಾ ಸಂಖ್ಯೆ 7403, ಸುಧಾಕರನ್ ಅವರ ಕೈದಿ ಸಂಖ್ಯೆ 7404 ಮತ್ತು ಇಳವರಸಿ ಅವರ ಕೈದಿ ಸಂಖ್ಯೆ 7405’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅವರೆಲ್ಲರಿಗೂ ತಲಾ ಎರಡು ಬೆಡ್‌ಶೀಟ್ ಹಾಗೂ ಜಮಖಾನ ಕೊಡಲಾಗಿದೆ. ಮೂವರು ಮಹಿಳೆಯರಿಗೆ ಬಿಳಿ ಸೀರೆ, ಸುಧಾಕರನ್ ಅವರಿಗೆ ಬಿಳಿ ಪ್ಯಾಂಟ್ ಹಾಗೂ ಶರ್ಟ್ ಕೊಡಲಾಗಿದೆ. ಜಯಲಲಿತಾ ಅವರ ಮೇಲ್ವಿಚಾರಣೆಗಾಗಿ ಮೈಸೂರಿನ ಕಾರಾಗೃಹದಿಂದ ಮಹಿಳಾ ಸೂಪರಿಂಟೆಂಡೆಂಟ್ ಒಬ್ಬರನ್ನು ಕರೆಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ರಾತ್ರಿ ಊಟಕ್ಕೆ ಮೊಸರನ್ನ: ‘ಶಶಿಕಲಾ, ಸುಧಾಕರನ್ ಮತ್ತು ಇಳವರಸಿ ಅವರಿಗೆ ರಾತ್ರಿ ಊಟಕ್ಕೆ ಒಂದು ಮುದ್ದೆ, ಎರಡು ಚಪಾತಿ, 450 ಗ್ರಾಂ ಅನ್ನ ಹಾಗೂ 500 ಮಿ.ಲೀ ಕಾಳು ಸಾಂಬಾರು ನೀಡಲಾಗಿದೆ. ಜಯಲಲಿತಾ ಅವರು ಮನವಿ ಮಾಡಿಕೊಂಡಂತೆ ಅವರಿಗೆ ಮೊಸರನ್ನ, ಹಣ್ಣು ಮತ್ತು ಬ್ರೆಡ್ ನೀಡಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೌನಕ್ಕೆ ಶರಣು: ‘ನ್ಯಾಯಾಲಯದ ತೀರ್ಪಿನಿಂದ ಸಾಕಷ್ಟು ವಿಚಲಿತರಾದಂತೆ ಕಂಡುಬಂದ ಜಯಲಲಿತಾ ಅವರು ಕೊಠಡಿಯಲ್ಲಿ ಮೌನವಾಗಿದ್ದರು. ತಮ್ಮ ಆಪ್ತರಾದ ಶಶಿಕಲಾ ಮತ್ತು ಇಳವರಸಿ ಅವರ ಜತೆಯೂ ಮಾತನಾಡುತ್ತಿಲ್ಲ’ ಎಂದು ಕಾರಾಗೃಹ ಮೂಲಗಳು ತಿಳಿಸಿವೆ.
ಜೈಲು ಸೇರಿದ ಮೊದಲ ಸಿ.ಎಂ
ಜಯಲಲಿತಾ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗಲೇ ಜೈಲು ಸೇರಿದ ಮೊದಲಿಗರು. ಇದರ ಜೊತೆಯಲ್ಲೇ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ರೂ100 ಕೋಟಿಯಷ್ಟು ಭಾರಿ ದಂಡ ವಿಧಿಸಿದ ಮೊದಲ ಪ್ರಕರಣವೂ ಹೌದು.
(ಪ್ರಜಾವಾಣಿ)