ಬಾಗಲಕೋಟೆ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದ್ದ ಗಂಡು ಮಗು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯ ಆರೋಪಿ ಗಾಯತ್ರಿ ಎಂಬಾಕೆಯು ಬಾಗಲಕೋಟೆ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್ಟೆಬಲ್ ಪತ್ನಿ ಎಂದು ತಿಳಿದುಬಂದಿದೆ.
ಮಗುವಿನ ಅಪಹರಣಕ್ಕೆ ಸಹಕರಿಸಿದ್ದ ಆಕೆ ಪ್ರಿಯಕರ ಬಸವನಬಾಗೇವಾಡಿಯ ಕೃಷ್ಣ ತುಕಾರಾಮ ಜಗದಾಳೆ ಎಂಬಾತನನ್ನೂ ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಮತ್ತು ಆಕೆಯ ಪತಿ (ಪೊಲೀಸ್) ದಾಂಪತ್ಯದಲ್ಲಿ
ಬಿರುಕು ಉಂಟಾಗಿ ವಿವಾಹ ವಿಚ್ಛೇದನಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಹಂತದಲ್ಲಿದೆ. ಆಕೆ ಪತಿಯಿಂದ ದೂರವಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಆಕೆಯ ಪತಿ ನೀಡಿದ ಖಚಿತ ಮಾಹಿತಿ ಆಧರಿಸಿಯೇ ಮಗುವನ್ನು ರಕ್ಷಿಸಲಾಯಿತು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಡಿಎನ್‌ಎ ಪರೀಕ್ಷೆ: ಆರೋಪಿಗಳಿಂದ ವಶಪಡಿಸಿಕೊಂಡಿರುವ ಮಗು ಜಿಲ್ಲಾ ಆಸ್ಪತ್ರೆಯಿಂದ ಕಳುವಾಗಿದ್ದ ಮಗುವೇ ಎಂಬುದು ದೃಢಪಟ್ಟಿದ್ದರೂ ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಮಗುವನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಡಿವೈಎಸ್ಪಿ ವಿಠಲ ಜಗಲಿ ‘ಪ್ರಜಾವಾಣಿ’ಗೆ ತಿಳಿಸಿದರು.