ಬೆಂಗಳೂರು, ಸೆ.30: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಶಿಕ್ಷೆ ರದ್ದು ಮತ್ತು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೋಮವಾರ (ಅ.6)ಕ್ಕೆ ಮುಂದೂಡಿದೆ.
ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ರಜಾಕಾಲದ ನ್ಯಾಯಮೂರ್ತಿ ರತ್ನಕಲಾ ಅವರ ನ್ಯಾಯಪೀಠ ಜಯಲಲಿತಾ ಅವರ ಜಾಮೀನು ಅರ್ಜಿಯನ್ನು ಸೋಮವಾರಕ್ಕೆ ಮುಂದೂಡಿದ್ದರಿಂದ ಇನ್ನು ಒಂದು ವಾರ ಕಾಲ ಜಯಲಲಿತಾ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಉಳಿಯಬೇಕಾಗಿದೆ. ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪಿನ ಪ್ರಕರಣದ ವಿಚಾರಣೆಗೆ ಇನ್ನೂ ಸರ್ಕಾರಿ ಅಭಿಯೋಜಕರ ನೇಮಕವಾಗಿಲ್ಲ ಮತ್ತು ವಿಶೇಷ ನ್ಯಾಯಾಲಯ ನೀಡಿರುವ ತೀರ್ಪಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್‍ನಲ್ಲಿ ಸಲ್ಲಿಸಬೇಕೇ ಅಥವಾ ಚನ್ನೈನ ಹೈಕೋರ್ಟ್‍ನಲ್ಲಿ ಸಲ್ಲಿಸಬೇಕೇ ಎಂಬ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನ್ಯಾಯಮೂರ್ತಿ ರತ್ನಕಲಾ ಅವರು ಸೋಮವಾರಕ್ಕೆ ಮುಂದೂಡಿದರು.
ಈ ಪ್ರಕರಣದ ವಿಚಾರಣೆ ಹೈಕೋರ್ಟ್ ವ್ಯಾಪ್ತಿಗೆ ಬರಲಿದೆಯೇ ಅಥವಾ ಇಲ್ಲವೇ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಿಲ್ಲ. ಸರ್ಕಾರಿ ಅಭಿಯೋಜಕರಿಗೆ ಈ ಬಗ್ಗೆ ಯಾವುದೇ ನೋಟಿಸ್ ನೀಡಿಲ್ಲ ಎಂಬ ಆಕ್ಷೇಪ ಕೂಡ ವ್ಯಕ್ತವಾಗಿ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಿಕೆ ಆಯಿತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ 18 ವರ್ಷಗಳ ಕಾಲ ಕಾನೂನು ಸೆಣೆಸಾಟ ನಡೆಸಿ ಸೋತು ಶಿಕ್ಷೆಗೊಳಗಾಗಿ ಜೈಲು ಪಾಲಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಇಂದಿನಿಂದ ಮತ್ತೊಂದು ಕಾನೂನು ಸಮರ ಆರಂಭಿಸಿದರಾದರೂ ಆರಂಭದಲ್ಲೇ ಅವರಿಗೆ ವಿಘ್ನ ಎದುರಾಯಿತು.
ನಾಲ್ಕು ವರ್ಷಗಳ ಕಾಲ ವಿಧಿಸಿರುವ ಜೈಲು ಶಿಕ್ಷೆ ಮತ್ತು ನೂರು ಕೋಟಿ ರೂ. ದಂಡ ಕಡಿಮೆ ಮಾಡುವಂತೆ ಅವರು ಕೋರಿದ್ದರು. ಜತೆಗೆ ವಿಶೇಷ ನ್ಯಾಯಾಲಯ ತೀರ್ಪನ್ನು ಅಮಾನತ್ತಿನಲ್ಲಿಟ್ಟು ತಮಗೆ ಜಾಮೀನು ನೀಡುವಂತೆ ಮಧ್ಯಂತರ ಕೋರಿಕೆಯನ್ನು ಸಲ್ಲಿಸಿದ್ದರು.
ವಿಶೇಷ ನ್ಯಾಯಾಲಯದ ತೀರ್ಪು ಕಾನೂನು ಬಾಹಿರವಾಗಿದ್ದು, ಆ ತೀರ್ಪನ್ನು ರದ್ದುಗೊಳಿಸಬೇಕು. ಜತೆಗೆ ಮೇಲ್ಮನವಿ ಇತ್ಯರ್ಥವಾಗುವವರೆಗೂ ವಿಶೇಷ ನ್ಯಾಯಾಲಯದ ತೀರ್ಪನ್ನು ಅಮಾನತ್ತಿನಲ್ಲಿರಿಸಿ ಅವರು ಹುದ್ದೆಯಲ್ಲಿ ಮುಂದುವರೆಯುವಂತೆ ಅವಕಾಶ ಮಾಡಿಕೊಡಬೇಕೆಂದು ಜಯಪರ ವಕೀಲರು ಮೇಲ್ಮನವಿಯಲ್ಲಿ ತಿಳಿಸಿದ್ದರು.