ಬಳ್ಳಾರಿ, ಅ.8: ‘ಮಾದೇಶ’ ಚಿತ್ರದ ನಿರ್ಮಾಪಕ, ರಿಯಲ್ ಎಸ್ಟೇಟ್ ಉದ್ಯಮಿ ಗೋವರ್ಧನಮೂರ್ತಿ ವಿರುದ್ಧ ಮುಂಬೈ ಮೂಲದ ಯುವತಿಯೊಬ್ಬಳು ಅತ್ಯಾಚಾರ ಆರೋಪ ಹೊರಿಸಿದ್ದಾಳೆ. ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಬಾರ್‌ನಲ್ಲಿ ಸರ್ವೀಸ್ ಗರ್ಲ್ ಆಗಿದ್ದ ಈಕೆಯ ಮೇಲೆ ಗೋವರ್ಧನ್ 4 ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಅತ್ಯಾಚಾರಕ್ಕೊಳಗಾದ ಯುವತಿ ಖಾಸಗಿ ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾಳೆ.
ತಾನು ಬಾರ್‌ನಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದಾಗ ಗೋವರ್ಧನ್ ಅವರ ಪರಿಚಯವಾಗಿತ್ತು. ತದನಂತರ ಗೋವರ್ಧನ್ ಅವರ ಫಾರ್ಮ್ ಹೌಸ್‌ಗೆ ಬೆದರಿಸಿ ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರ ಕ್ಕೊಳಪಡಿಸಲಾಗಿದೆ ಎಂದು ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ಕರೆದ ಯುವತಿ ಹೇಳಿದ್ದಾಳೆ. ಗೋವರ್ಧನ್ ಬಳಿಗೆ ಹೋಗಲು ನಿರಾಕರಿಸಿದಾಗ ತನ್ನನ್ನು ಬಲವಂತವಾಗಿ ಕರೆಸಿಕೊಳ್ಳುತ್ತಿದ್ದು, ಕೊಲೆ ಬೆದರಿಕೆಯನ್ನೊಡ್ಡಲಾಗುತ್ತಿತ್ತು. ಕಳೆದ 1 ತಿಂಗಳಿನಲ್ಲಿ ತಾನು 4 ಬಾರಿ ಅವರನ್ನು ಭೇಟಿ ಮಾಡಿದ್ದು, ಆತನ ಫಾರ್ಮ್ ಹೌಸ್ ಎಲ್ಲಿದೆ ಎಂಬುದೂ ನನಗೆ ಗೊತ್ತಿಲ್ಲ ಎಂದು ಯುವತಿ ಹೇಳಿದ್ದಾಳೆ.
ನನಗೆ ಬೆಂಬಲ ನೀಡುವವರು ಯಾರೂ ಇಲ್ಲದೇ ಇರುವುದರಿಂದ ಇಲ್ಲಿಯವರೆಗೆ ಈ ಅನ್ಯಾಯವನ್ನು ಸಹಿಸಿಕೊಂಡು ಇದ್ದೆ ಎಂದು ಮಾಧ್ಯಮದ ಮುಂದೆ ಕಣ್ಣೀರಿಟ್ಟಿದ್ದಾಳೆ ಯುವತಿ.