ಬೆಂಗಳೂರು, ಅ. 8: ಪಶ್ಚಾತ್ತಾಪ ಪಡುವಂತಹ ತಪ್ಪನ್ನು ನಾನೇನು ಮಾಡಿಲ್ಲ, ನನ್ನ ಕೆಲಸವನ್ನು ಸರಿಯಾಗಿಯೇ ಮಾಡಿದ್ದೇನೆ ಎಂದು ಜಯಲಲಿತಾ ಪ್ರಕರಣದ ವಿಶೇಷ ಅಭಿಯೋಜಕ ಭವಾನಿ ಸಿಂಗ್ ಹೇಳಿದ್ದಾರೆ.ಜಯಲಲಿತಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ರದ್ದು ಮಾಡುವಂತೆ ಲಿಖಿತ ಆಕ್ಷೇಪಣೆಯಲ್ಲಿ ತಿಳಿಸಿದ್ದು, ವಿಚಾರಣೆ ವೇಳೆ ಜಾಮೀನು ನೀಡುವುದಕ್ಕೆ ಯಾವುದೇ ರೀತಿಯ ಆಕ್ಷೇಪಣೆ ಇಲ್ಲ ಎಂದು ಹೇಳಿಕೆ ನೀಡಿರುವ ಸಂಬಂಧ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ಸಿಆರ್‌ಪಿಸಿ 389ರ ಅನ್ವಯ ಜಯಲಲಿತಾ ಅವರಿಗೆ ಶಿಕ್ಷೆ ವಿಧಿಸಿರುವ ಆದೇಶ ರದ್ದುಪಡಿಸಲು ಹೈಕೋರ್ಟ್‌ಗೆ ಅಧಿಕಾರವಿದೆ. ಆದುದರಿಂದ ಜಾಮೀನು ಮಂಜೂರು ಮಾಡಬಹುದು ಎಂದು ಹೇಳಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪಕ್ರರಣ ಸಂಬಂಧ ಅಧೀನ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ನಾನು ಸಮರ್ಥವಾಗಿಯೇ ವಾದ ಮಂಡಿಸಿ ಜಯಲಲಿತಾರಿಗೆ ಶಿಕ್ಷೆ ವಿಧಿಸುವಂತೆ ಮಾಡಿದ್ದೇನೆ. ಅಲ್ಲದೆ, ವಿಶೇಷ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿ ವಿಚಾರಣೆಗೆ ಬಂದಿದ್ದಾಗ ವಿರೋಧಿಸಿದ್ದೆ. ಆದರೆ, ಜಾಮೀನು ಅರ್ಜಿ ವಿಚಾರಣೆ ವೇಳೆ ಜಯಾ ಪರ ವಕೀಲರು ಜಾಮೀನು ನೀಡುವುದಕ್ಕಿಂತ ಅಪರಾಧಿ ಎಂದು ನೀಡಿರುವ ಆದೇಶವನ್ನು ರದ್ದು ಮಾಡುವಂತೆ ಕೋರಿದ್ದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಕೇಳಿದ್ದೆ ಎಂದು ಅವರು ಹೇಳಿದ್ದಾರೆ.
ಬಹುಕೋಟಿ ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರಿಗೆ ಜಾಮೀನು ಮಂಜೂರಾಗಿದೆ ಎಂದು ವಾದವನ್ನು ಮತ್ತೊಂದು ರೀತಿಯಲ್ಲಿ ಕೊಂಡೊಯ್ದಿದ್ದರು. ಈ ವಿಷಯದಲ್ಲಿ ಜಾಮೀನು ನೀಡುವುದು ಬಿಡುವುದು ನ್ಯಾಯಾಧೀಶರಿಗೆ ಸಂಬಂಧಿಸಿದ ವಿಷಯವಾಗಿದೆ. ಇದರಲ್ಲಿ ನಾನು ಯಾವುದೇ ರೀತಿಯ ಹೇಳಿಕೆ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಭವಾನಿಸಿಂಗ್ ತಿಳಿಸಿದ್ದಾರೆ.
ಬೆೇಲ್ ಕೇಳುವ ರೀತಿ ಸರಿಯಿಲ್ಲ: ಜಯಾ ಪರ ವಕೀಲರ ವಾದದ ವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಭವಾನಿ ಸಿಂಗ್, ಅವರಿಗೆ ಯಾವ ಅಂಶಗಳ ಆಧಾರದ ಮೇಲೆ ಬೇಲ್ ಕೇಳಬೇಕು ಎಂಬುದೇ ತಿಳಿದಿಲ್ಲ ಎಂದಿದ್ದಾರೆ.
ಬೇಲ್‌ಗೆ ಆಕ್ಷೇಪಣೆ ಸಲ್ಲಿಸುವ ಸಂದರ್ಭದಲ್ಲಿ ಯಾವ ಆಂಶಗಳನ್ನು ಉಲ್ಲೇಖಿಸಬೇಕು ಎಂಬುದು ಜಯಲಲಿತಾ ಪರ ವಕೀಲರಿಗೆ ತಿಳಿದಿಲ್ಲ. ಆದುದರಿಂದಾಗಿ ಜಾಮೀನು ಸಿಗಲಿಲ್ಲ ಎಂದು ಭವಾನಿಸಿಂಗ್ ಹೇಳಿದ್ದಾರೆ.