ಬೆಂಗಳೂರು, ಅ.8: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರ ಬದ್ಧ ಎಂದು ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶೇ.50ರ ಮೀಸಲಾತಿ ಮಿತಿಯನ್ನು ಹೆಚ್ಚಿಸಲು ಗಂಭೀರ ಚಿಂತನೆ ನಡೆಸಲಾಗುವುದೆಂದು ಭರವಸೆ ನೀಡಿದ್ದಾರೆ.
ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೀಸಲಾತಿ ಪ್ರಮಾಣ ಶೇ.50ನ್ನು ಮೀರಬಾರದು ಎಂದು ಸಂವಿಧಾನ ಮಿತಿಗೊಳಿಸಿದೆ. ಆದರೆ, ತಮಿಳುನಾಡು ಸರಕಾರ ಮೀಸಲಾತಿ ಪ್ರಮಾಣವನ್ನು ಶೇ.60ಕ್ಕೆ ಹೆಚ್ಚಳ ಮಾಡಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಮೀಸಲಾತಿ ಮಿತಿಯನ್ನು ಹೆಚ್ಚಳ ಮಾಡುವ ಮೂಲಕ ಅವಕಾಶ ವಂಚಿತ ಸಮುದಾಯ ಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಎಲ್ಲ ರಾಜಕೀಯ ಪಕ್ಷಗಳು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತವೆ. ಆದರೆ, ಸಾಮಾಜಿಕ ನ್ಯಾಯದ ಪರ ಬದ್ಧತೆಯಿಂದ ಯಾರು ಕೆಲಸ ಮಾಡುತ್ತಿದ್ದಾರೆಂಬುದನ್ನು ಸರಿಯಾಗಿ ಗುರುತಿಸಿಕೊಳ್ಳಬೇಕು. ಅಲ್ಲದೆ, ಅಂತಹವರಿಗೆ ಶಕ್ತಿ ತುಂಬುವ ಕೆಲಸವನ್ನು ಶೋಷಿತ ಸಮುದಾಯಗಳು ಮಾಡಬೇಕೆಂದು ಸಿದ್ದರಾಮಯ್ಯ ಕರೆ ನೀಡಿದರು.
ಸಮಬಾಳು-ಸಮಪಾಲು, ಸಾಮಾಜಿಕ ನ್ಯಾಯದ ಬಗ್ಗೆ ಸಂವಿಧಾನದಲ್ಲಿ ಹೇಳಲಾಗಿದೆ. ಆದರೂ, ಅಕ್ಷರಶಃ ಅದು ಇನ್ನೂ ಅನುಷ್ಠಾನಗೊಂಡಿಲ್ಲವೆಂದ ಸಿದ್ದರಾಮಯ್ಯ, ಅವಕಾಶ ವಂಚಿತ ಸಮುದಾಯಗಳು ಸಮಾಜದ ಮುಂಚೂಣಿಗೆ ಬರಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಮಹಾತ್ಮಾ ಗಾಂಧೀಜಿಗೆ ‘ರಾಮರಾಜ್ಯ’ದ ಕಲ್ಪನೆ ನೀಡಿದುದು ಮಹರ್ಷಿ ವಾಲ್ಮೀಕಿ. ರಾಮರಾಜ್ಯದ ಕಲ್ಪನೆ ಸಾಕಾರಗೊಳ್ಳಲು ಸಂಪತ್ತು ಮತ್ತು ಅಧಿಕಾರ ಎಲ್ಲರಿಗೂ ಸಮರ್ಪಕವಾಗಿ ಹಂಚಿಕೆಯಾಗಬೇಕಾದ ಅಗತ್ಯವಿದೆ ಎಂದು ಸಿದ್ದರಾಮಯ್ಯ ಇದೇ ವೇಳೆ ಪ್ರತಿಪಾದಿಸಿದರು.
ಪ್ರತಿಭೆ ಯಾರದೇ ಸ್ವತ್ತಲ್ಲ: ಹುಟ್ಟಿನಿಂದ ಯಾರೂ ಪ್ರತಿಭಾವಂತರಾಗಲು ಸಾಧ್ಯವಿಲ್ಲ. ಪ್ರತಿಭೆ-ಬುದ್ಧಿವಂತಿಕೆ ಯಾರೊಬ್ಬರ ಸ್ವತ್ತಲ್ಲ. ಎಲ್ಲ ಜಾತಿ, ವರ್ಗಗಳಲ್ಲೂ ಪ್ರತಿಭಾವಂತರಿದ್ದಾರೆಂದ ಸಿದ್ದರಾಮಯ್ಯ, ಅಕ್ಷರ ಸಂಸ್ಕೃತಿಯಿಂದ ವಂಚಿತರನ್ನಾಗಿ ಮಾಡಿ ‘ದಡ್ಡ’ ಎಂದರೆ ಅರ್ಥವಿಲ್ಲ. ಎಲ್ಲ ವರ್ಗಗಳಿಗೂ ಅವಕಾಶಗಳು ಸಿಕ್ಕರೆ ಪ್ರತಿಭೆ ಹೊರಬರಲು ಸಾಧ್ಯ ಎಂದರು. ತಳ ಸಮುದಾಯದ ಮಹಾತ್ಮರ ಬಗ್ಗೆ ಬಹಳ ಹಿಂದಿನಿಂದಲೂ ಅಪಪ್ರಚಾರವನ್ನು ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿವೆ. ಆ ಮೂಲಕ ಶೋಷಿತ ವರ್ಗಗಳನ್ನು ದಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದ್ದು, ಈ ಬಗ್ಗೆ ಸಮುದಾಯ ಸದಾ ಜಾಗೃತವಾಗಿರಬೇಕು ಎಂದು ಸಿದ್ದರಾಮಯ್ಯ ಸಲಹೆ ಮಾಡಿದರು.
‘ಮಹರ್ಷಿ ವಾಲ್ಮೀಕಿ ಬೇಡ ಸಮುದಾಯದವನಲ್ಲ, ಬದಲಿಗೆ ಆತ ಬ್ರಾಹ್ಮಣ’ನೆಂದು ಬಿಂಬಿಸುವ ಪುಸ್ತಕವೊಂದನ್ನು ಸರಕಾರ ಮುಟ್ಟಗೋಲು ಹಾಕಿಕೊಂಡಿದೆ. ಕನಕದಾಸರ ಬಗ್ಗೆಯೂ ಇದೇ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಕಾರಣ ಆ ಸಮುದಾಯಗಳು ಇವರನ್ನು ಕೈಬಿಡಲಿ ಎನ್ನುವ ಹುನ್ನಾರ ಎಂದು ಸಿದ್ದರಾಮಯ್ಯ ಆಕ್ಷೇಪಿಸಿದರು.
ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ವರ್ಗದವರ ಅಭಿವೃದ್ಧಿಗಾಗಿ 1074.18 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದ್ದು, ಕಳೆದ ವರ್ಷದ ಆಯವ್ಯಯಕ್ಕೆ ಹೋಲಿಸಿದಲ್ಲಿ ಶೇ. 28.29ರಷ್ಟು ಹೆಚ್ಚಿಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದ ಅವರು, ರಾಜ್ಯದಲ್ಲಿ ಎಸ್ಸಿ-ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಆ ವರ್ಗಗಳ ಅಭಿವೃದ್ಧಿಗೆ 15,834 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದರು.
ಪರಿಶಿಷ್ಟ ವರ್ಗದ ಸಾಮಾಜಿಕ,ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಪ್ರಸಕ್ತ ವರ್ಷ 4,515 ಕೋಟಿ ರೂ.ಗಳ ಯೋಜನೆಗಳನ್ನು ಪರಿಣಾಮಕಾರಿ ಕಾಯ್ದೆಯ ಮೂಲಕ ಜಾರಿಗೊಳಿಸಲಾಗಿದೆ ಎಂದ ಮುಖ್ಯಮಂತ್ರಿ, ಪರಿಶಿಷ್ಟ ವರ್ಗದ ಅಭಿವೃದ್ಧಿ ನಿಗಮದಿಂದ 115.93ಕೋಟಿ ರೂ.ಗಳನ್ನು ಒದಗಿಸಲಾಗಿದೆಯೆಂದು ತಿಳಿಸಿದರು. ರಾಜ್ಯ ಸರಕಾರವೇ ರಾಜ್ಯ, ಜಿಲ್ಲಾ, ತಾಲೂಕು ಮಟ್ಟಗಳಲ್ಲಿ ವಾಲ್ಮೀಕಿ ಜಯಂತಿ ಆಚರಿಸುತ್ತಿದೆ. ಇದರ ಉದ್ದೇಶ ಮಹರ್ಷಿ ವಾಲ್ಮೀಕಿಯ ವಿಚಾರಧಾರೆ, ಅವರ ತತ್ವಗಳು ಎಲ್ಲರಿಗೂ ತಲುಪಿಸುವುದಾಗಿದೆಯೆಂದ ಅವರು, ಆ ಮೂಲಕ ಸ್ವಾಭಿಮಾನಿ ಸಮಾಜ ನಿರ್ಮಾಣ ತಮ್ಮ ಧ್ಯೇಯ ಎಂದರು.
ಪ್ರಶಸ್ತಿ ಪ್ರದಾನ: ಚಿತ್ರದುರ್ಗ ಜಿಲ್ಲೆಯ ಶಿಕ್ಷಣ ತಜ್ಞ, ಸಮಾಜ ಸೇವಕ ಡಿ. ಬೋರಪ್ಪನವರಿಗೆ 2ಲಕ್ಷ ರೂ.ನಗದು ಒಳಗೊಂಡಿರುವ ಪ್ರತಿಷ್ಠಿತ ‘ಮಹರ್ಷಿ ವಾಲ್ಮೀಕಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ನಗರದ ಬಸವೇಶ್ವರ ವೃತ್ತದಿಂದ ವಿಧಾನಸೌಧದವರೆಗೆ ಜಾನಪದ ಕಲಾ ತಂಡಗಳ ಮೂಲಕ ಮಹರ್ಷಿ ವಾಲ್ಮೀಕಿಯ ಭಾವಚಿತ್ರದ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಶಿಕ್ಷಣ ತಜ್ಞ ಡಿ.ಬೋರಪ್ಪ, ಶಾಸಕ ಮಾಲಿಕಯ್ಯ ಗುತ್ತೇದಾರ್, ಮೇಲ್ಮನೆ ಸದಸ್ಯ ವಿ.ಎಸ್.ಉಗ್ರಪ್ಪ, ಮಾಜಿ ಸಂಸದರಾದ ಸಿ.ನಾರಾಯಣಸ್ವಾಮಿ, ಎಚ್.ವಿಶ್ವನಾಥ್, ಬೆಂಗಳೂರು ವಿವಿ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸಿದ್ದಲಿಂಗಯ್ಯ ಮತ್ತಿತರರು ಹಾಜರಿದ್ದರು.