ಬೆಂಗಳೂರು :ನವಜಾತ ಶಿಶುವನ್ನು ಅದಲು ಬದಲು ಮಾಡಿದ ಆರೋಪದಲ್ಲಿ ಸೃಷ್ಟಿ ಗ್ಲೋಬಲ್ ಹಾಸ್ಪಿಟಲ್ ಮುಖ್ಯಸ್ಥ ಕೆ.ಟಿ.ಗುರುಮೂರ್ತಿಯನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿ ಇಂದು ನ್ಯಾ. ಜೈಶಂಕರ್ ಅವರ ಮುಂದೆ ಹಾಜರುಪಡಿಸಿದ್ದಾರೆ.
ಹಿಂದಿನ ವರದಿ :
ನವಜಾತ ಶಿಶು ಅದಲು-ಬದಲು;ಸೃಷ್ಟಿ ಗ್ಲೋಬಲ್ ಸೆಂಟರ್‌ನ ಕೆ.ಟಿ.ಗುರುಮೂರ್ತಿ ಬಂಧನ
ಬೆಂಗಳೂರು : ನವಜಾತ ಶಿಶುವನ್ನು ಅದಲು-ಬದಲು ಮಾಡಿದ ಆರೋಪ ಸಂಬಂಧ ನಗರದ ಸೃಷ್ಟಿ ಗ್ಲೋಬಲ್ ಆ್ಯಂಡ್ ಮೆಡಿಕೇರ್ ಸೆಂಟರ್ ಸಂಸ್ಥಾಪಕ ಕೆ.ಟಿ.ಗುರುಮೂರ್ತಿ ಎಂಬವನನ್ನು ಇಲ್ಲಿನ ನಂದಿನಿ ಲೇಔಟ್ ಠಾಣಾ ಪೊಲೀಸರು ಶನಿವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಪ್ರಕರಣ ಸಂಬಂಧ ನಂದಿನಿ ಲೇಔಟ್ ಪೊಲೀಸರಿಗೆ ರಾಜಸ್ಥಾನ ಮೂಲದ ದಂಪತಿ ದೂರು ನೀಡಿದ್ದರು.ಆ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಗುರುಮೂರ್ತಿ ಎಂಬವನನ್ನು ಬಂಧಿಸಿದ್ದು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳಾಗದ ಹಿನ್ನೆಲೆಯಲ್ಲಿ ರಾಜಸ್ಥಾನ ಮೂಲದ ದಂಪತಿ 2008ರಲ್ಲಿ ಸೃಷ್ಟಿ ಗ್ಲೋಬಲ್ ಮೆಡಿಕೇರ್ ಸೆಂಟರ್‌ಗೆ ಬಂದಿದ್ದು, ಸಂಸ್ಥೆಯ ಮುಖ್ಯಸ್ಥ ಗುರುಮೂರ್ತಿ ದಂಪತಿಗಳಿಂದ 3.50 ಲಕ್ಷ ರೂ.ಗಳನ್ನು ಹಣ ಪಡೆದು ದಂಪತಿಯ ಅಂಡಾಣು ಮತ್ತು ವೀರ್ಯಾಣು ಪಡೆದು ಬಾಡಿಗೆ ತಾಯಿಯೊಬ್ಬರಿಂದ ಮಗು ಮಾಡಿಕೊಡುವುದಾಗಿ ಭರವಸೆ ನೀಡಿದ್ದ.
ಅನಂತರ ಏಳು ತಿಂಗಳ ಬಳಿಕ ಗುರುಮೂರ್ತಿ ದಂಪತಿಗೆ ದೂರವಾಣಿ ಕರೆ ಮಾಡಿ ನಿಮಗೆ ಹೆಣ್ಣು ಮಗುವಾಗಿದೆ, ಮನೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಅತೀವ ಸಂತಸದಿಂದ ಹೆಣ್ಣು ಮಗುವನ್ನು ಮನೆಗೆ ಕರೆದೊಯ್ದ ದಂಪತಿಗೆ ಆಘಾತವೊಂದು ಕಾದಿತ್ತು. ಈ ಮಧ್ಯೆಯೆ ಹೆಣ್ಣು ಮಗುವಿಗೆ ಅಂಗವೈಕಲ್ಯ ಕಂಡು ಬಂದಿತ್ತು.
ಆ ಹಿನ್ನೆಲೆಯಲ್ಲಿ ಸಂಶಯಗೊಂಡ ರಾಜಸ್ಥಾನ ಮೂಲದ ದಂಪತಿ ಹೈದರಾ ಬಾದ್‌ನಲ್ಲಿ ಹೆಣ್ಣು ಮಗು ಹಾಗೂ ಸ್ವತಃ ದಂಪತಿ ಕೂಡ ಡಿಎನ್‌ಎ ಪರೀಕ್ಷೆಗೆ ಒಳಪಟ್ಟಿದ್ದು, ಹೆಣ್ಣು ಮಗು ಬೇರೆಯವರದ್ದೆಂಬುದು ದೃಢಪಟ್ಟಿದೆ. ಆ ಹಿನ್ನೆಲೆಯಲ್ಲಿ ಹೆಣ್ಣು ಮಗುವನ್ನು ಸೃಷ್ಟಿ ಗ್ಲೋಬಲ್ ಮೆಡಿಕೇರ್‌ನ ಗುರುಮೂರ್ತಿ ಅದಲು-ಬದಲು ಮಾಡಿದ್ದಾರೆಂದು ನಂದಿನಿ ಲೇಔಟ್ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧ ಮೊಕದ್ದಮೆ ದಾಖಲು ಮಾಡಿಕೊಂಡಿರುವ ನಂದಿನಿ ಲೇಔಟ್ ಠಾಣಾ ಪೊಲೀಸರು, ಸೃಷ್ಟಿ ಗ್ಲೋಬಲ್ ಮೆಡಿಕೇರ್ ಸೆಂಟರ್‌ನ ಮುಖ್ಯಸ್ಥ ಗುರುಮೂರ್ತಿಯನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿದ್ದಾರೆ.