ಬೆಂಗಳೂರು: ಜೆಡಿಎಸ್ ಪಕ್ಷವನ್ನು ಕಟ್ಟಿದ್ದು ಕುಮಾರ ಸ್ವಾಮಿಯವರಲ್ಲ ಎಂದು ಚಾಮರಾಜಪೇಟೆಯ ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ಅಲ್ಪ ಸಂಖ್ಯಾತರ ಮುಖಂಡರ ಸಮಾವೇಶ ನಡೆಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ವಿರುದ್ಧ ನೇರ ವಾಗ್ದಾಳಿ ಮಾಡಿದರು. ಜೆಡಿಎಸ್ ನನ್ನ ಮಾತೃಪಕ್ಷವಾಗಿದ್ದು, ಯಾವುದೇ ಕಾರಣಕ್ಕೂ ತಾವು ಪಕ್ಷ ಬಿಟ್ಟುಹೋಗುವುದಿಲ್ಲ. ಅಲ್ಲದೆ ಪಕ್ಷದ ವತಿಯಿಂದ ತಮಗೆ ಯಾವುದೇ ಸ್ಥಾನ ಮಾನ ನೀಡಿದರೂ ತಾವು ಸ್ವೀಕರಿಸುವುದಿಲ್ಲ ಎಂದು ಹೇಳಿದರು.
‘ಜೆಡಿಎಸ್ ಪಕ್ಷವನ್ನು ಕಟ್ಟಿದ್ದು ಕುಮಾರ ಸ್ವಾಮಿ ಅವರಲ್ಲ. ಜೆಡಿಎಸ್ ಪಕ್ಷ ದೇವೇಗೌಡ ಮತ್ತು ಕಾರ್ಯಕರ್ತರ ಮೇಲೆ ನಿಂತಿದೆ. ನನಗೆ ಪಕ್ಷದಲ್ಲಿ ಯಾವುದೇ ಸ್ಥಾನ-ಮಾನ ನೀಡಿದರು ತಾವೂ ಸ್ವೀಕರಿಸುವುದಿಲ್ಲ. ಹಾಗೆಂದೂ ತಾವೇನು ಪಕ್ಷ ಬಿಡುವುದಿಲ್ಲ. ಅಂತೆಯೇ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿಯೂ ನಾನು ಪಾಲ್ಗೊಳ್ಳುವುದಿಲ್ಲ. ನನ್ನ ಕ್ಷೇತ್ರದಲ್ಲಿಯೇ ಇದ್ದು, ಕ್ಷೇತ್ರದ ಜನತೆಯ ಸೇವೆ ಮಾಡಿಕೊಂಡಿರುತ್ತೇನೆ ಎಂದು ಜಮೀರ್ ಹೇಳಿದ್ದಾರೆ.
ನನ್ನ ಮಾತಿಗೆ ಪಕ್ಷದಲ್ಲಿ ಬೆಲೆಯೇ ಇಲ್ಲ: ಹೊರಟ್ಟಿ ಅಳಲು
ಇದೇ ವೇಳೆ ಜೆಡಿಎಸ್ನಲ್ಲಿ ನನ್ನ ಮಾತಿಗೆ ಬೆಲೆಯೇ ಇಲ್ಲ. ಪಕ್ಷದ ಮುಖಂಡರು ನನ್ನ ಮಾತಿಗೆ ಮಹತ್ವ ನೀಡುತ್ತಿಲ್ಲ ಎಂದು ಜೆಡಿಎಸ್ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಹುಬ್ಬಳ್ಳಿಯ ಫಾರ್ಮ್ ಹೌಸ್ನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ ಅವರು ಪಕ್ಷದ ಮುಖಂಡರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಪಕ್ಷದ ಯಾವೊಬ್ಬ ಮುಖಂಡನೂ ಕೂಡ ತಮ್ಮ ಮಾತಿಗೆ ಬೆಲೆ ನೀಡುತ್ತಿಲ್ಲ. ಪಕ್ಷದ ಮುಖ್ಯಸ್ಥ ದೇವೇಗೌಡರೂ ಕೂಡ ನನ್ನ ಮಾತಿಗೆ ಮಹತ್ವ ನೀಡುತ್ತಿಲ್ಲ. ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಮಾಡುವ ಪ್ರಕ್ರಿಯೆಯಲ್ಲಿಯೂ ನನ್ನ ಅಭಿಪ್ರಾಯವನ್ನು ಮೂಲೆಗುಂಪು ಮಾಡಲಾಯಿತು ಎಂದು ಕಾರ್ಯಕರ್ತರ ಬಳಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.
ಜೆಡಿಎಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮೊದಲಿನಿಂದಲೂ ತಿಳಿದುಬಂದಿದ್ದೇ. ಒಂದು ಕಾಲದಲ್ಲಿ ರಾಮ-ಲಕ್ಷ್ಮಣರಂತಿದ್ದ ಜಮೀರ್ ಮತ್ತು ಕುಮಾರ ಸ್ವಾಮಿ ಅವರು ಇದೀಗ ಎದುರುಗಡೆ ಸಿಕ್ಕರೂ ಮುಖ ತಿರುಗಿಸಿಕೊಂಡು ಹೋಗುವಷ್ಟರ ಮಟ್ಟಿಗೆ ಗೊಂದಲ ಮೂಡಿಸಿಕೊಂಡಿದ್ದಾರೆ. ಇನ್ನು ಅಚ್ಚರಿ ವಿಚಾರವೆಂದರೆ ಜೆಡಿಎಸ್ ಪಕ್ಷ ಪ್ರಮುಖ ಮುಖಂಡರ ಸಾಲಿನಲ್ಲಿ ನಿಲ್ಲುವ ಬಸವರಾಜ್ ಹೊರಟ್ಟಿ ಅವರು ಕೂಡ ತಮ್ಮ ಅಸಮಾಧಾನವನ್ನು ಹೊರಹಾಕಿರುವುದು ಮತ್ತು ನೇರವಾಗಿ ದೇವೇಗೌಡರ ವಿರುದ್ಧವೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುವುದು ಜೆಡಿಎಸ್ ಪಕ್ಷದ ಹೀನಾಯ ಸ್ಥಿತಿಯನ್ನು ಬಿಂಬಿಸುತ್ತಿದೆ.