ಅದೊಂದು ಕಾರ್ಯಾಗಾರ. ಕಾಗದ, ಕತ್ತರಿ, ಕಲ್ಪನೆ ಮತ್ತು ಕರಗಳ ಸಂಗಮದಲ್ಲಿ ಕಲಾಕೃತಿಯ ರಚನೆ. ವಿವಿಧ ಮಜಲುಗಳಲ್ಲಿ ಕಾಗದವನ್ನು ಮಡಚಿ ಕತ್ತರಿಯಿಂದ ಕತ್ತರಿಸಿ ಬಿಡಿಸಿದಾಗ ಅಲ್ಲೊಂದು ಅದ್ಭುತವಾದ ಕಲಾಕೃತಿ ಮೂಡುತ್ತಿತ್ತು. ಇಷ್ಟೆಲ್ಲಾ ಕಲಾಕೃತಿಗಳನ್ನು ಕತ್ತರಿಸುತ್ತಿದ್ದವರು ಸಾಂಝಿಕಲಾಲೋಕದ ಸಂಸ್ಥಾಪಕ ಸಾಂಝಿಕಲಾವಿದ ಗೆಳೆಯ ಎಸ್.ಎ್.ಹುಸೇನಿ. ಕಲಾ ಲೋಕದಲ್ಲಿ ಮೈಸೂರು ಹುಸೇನಿ ಎಂದೇ ಪ್ರಸಿದ್ದಿ. ನೋಡುತ್ತಿದ್ದವರೆಲ್ಲಾ ಬಿಟ್ಟಗಣ್ಣು ಬಿಟ್ಟಹಾಗೇ ನೋಡುತ್ತಾ ಆಶ್ಚರ್ಯ, ಆನಂದವನ್ನು ಹೊರಹಾಕಿ ತಾವೂ ಕತ್ತರಿಸಲು ಸಿದ್ಧರಾಗುತ್ತಿದ್ದರು. ಕಲಾವಿದ ಮತ್ತೊಮ್ಮೆ ಕಾಗದ ಮಡಚಿ ಕತ್ತರಿಸಿದ. ಮೊಗದೊಮ್ಮೆ ಮಾಡಿದ. ಒಂದೊಂದು ಬಾರಿಯ ಕಲಾಕೃತಿಯಲ್ಲೂ ವಿಶೇಷ, ವೈವಿಧ್ಯವಾದ ವೈಶಿಷ್ಟ್ಯ. ಒಮ್ಮೆ ನವಿಲು, ಮತ್ತೊಮ್ಮೆ ಗಣಪ, ಇನ್ನೊಮ್ಮೆ ಮುಖವಾಡ, ಮೊಗದೊಮ್ಮೆ ಗಂಡಭೇರುಂಡ, ರಂಗೋಲಿ ಚಿತ್ತಾರಗಳು.
ಅರೆ! ಎಂತಹ ಮಾಯಾಜಾಲ. ಲೀಲಾಜಾಲವಾಗಿ ಕತ್ತರಿ ಹಿಡಿದ ಕರ, ಕಾಗದದೊಟ್ಟಿಗೆ ಕಲ್ಪನೆಯ ಆಟ ಆಡುತ್ತಿದೆ. ಕಲಾವಿದನ ಮುಖದಲ್ಲಿ ಮಂದಹಾಸ, ಕಿರುನಗೆ. ಪ್ರತಿ ಕಲಾಕೃತಿಯ ಕೊನೆಯಲ್ಲಿ ಇದೇನು? ಎಂದು ಕೇಳುತ್ತಾ ಮುಂದಿನ ಕೃತಿಗೆ ಹೋಗುತ್ತಿದ್ದರು. ನೋಡುಗರೆಲ್ಲಾ ತಮಗೆ ತಿಳಿದಿದ್ದನ್ನು ಹೇಳುತ್ತಾ ಗೊತ್ತಾಗದದಿದ್ದರೆ ಮೌನವಾಗಿ ಗೊತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಿದ್ದರು. ಅದರ ವಿವರಣೆ ನೀಡುತ್ತಾ, ತನ್ನ ಕಲಾಚಾತುರ್ಯದ ಜೊತೆಗೆ ಕಲಾವಿದ ತನ್ನ ವಾಕ್ಚಾತುರ್ಯವನ್ನು ಅಭಿವ್ಯಕ್ತಸುತ್ತಿದ್ದ. ಅಲ್ಲೇ ಕುಳಿತಿದ್ದ ನನಗೆ ಗಂಡಭೇರುಂಡದ ಕಲಾಕೃತಿಯನ್ನು ತೋರಿಸಿದಾಗ ಬಂದ ವಿವರಣೆ ಸಾಕೆನಿಸಲಿಲ್ಲ. ಸರ್ಕಾರಿ ಬಸ್ಸುಗಳ ಮೇಲೆ ಈ ಚಿತ್ರವನ್ನು ನೋಡಿದ್ದೇವೆ ಎಂಬುದಷ್ಟೇ ಅಲ್ಲಿ ಕೇಳಿಬಂದ ವಿವರ. ಆದರೆ ಇದು ಕರ್ಣಾಟಕ ಸರ್ಕಾರದ ಲಾಂಛನವೂ ಆಗಿದೆ ಎಂಬುದು ಬಹುಮಂದಿಗೆ ತಿಳಿದಿರಲಿಲ್ಲ ಎನಿಸುತ್ತದೆ. ಗಂಡಭೇರುಂಡದ ಬಗ್ಗೆ ಮತ್ತಷ್ಟು ತಿಳಿಸಬೇಕೆನ್ನುವ ಬಯಕೆ ನನ್ನದಾಯಿತು. ಮರುದಿನದ ಕಾರ್ಯಾಗಾರದಲ್ಲಿ ಗಂಡಭೇರುಂಡದ ವಿವರ ನೀಡುತ್ತೇನೆಂದು ಹೇಳಿ, ಅವರಲ್ಲಿ ಕುತೂಹಲ ತುಂಬಿ ವಿಷಯ ಸಂಗ್ರಹಣೆಗೆ ಹೊರಟೆ. ಈ ಸಂದರ್ಭದಲ್ಲಿ ಅನ್ವೇಷಿಸಿದ ವಿಚಾರಗಳ ಕ್ರೋಢಿಕರಣವೇ ಈ ಲೇಖನ.
ಈ ಪಕ್ಷಿಯ ಪರಿಕಲ್ಪನೆ ಆರ್ವಾಚೀನವಾದುದ್ದು. ಈ ಪಕ್ಷಿಯ ಭೌಗೋಳಿಕ ವ್ಯಾಪ್ತಿಯೂ ವಿಶಾಲವಾದದ್ದು. ಸುಮಾರು ಕ್ರಿಸ್ತ ಪೂರ್ವ 1000 ವರ್ಷಗಳಿಗಿಂತಲೂ ಮೊದಲೇ ಈ ಪಕ್ಷಿಯ ಚಿತ್ರವುಳ್ಳ ಶಿಲೆಯನ್ನು ಗುರುತಿಸಬಹುದು. (ಕೆಲವು ಹಿಟ್ನೆಟ್ ಕಲಾ ಕೇಂದ್ರಗಳಲ್ಲಿ ಇದರ ಶಿಲ್ಪಕಲಾ ಶಿಲೆಗಳಿವೆಯಂತೆ) ಈಜಿಪ್ಟ್, ಅಸ್ಸೀರಿಯಾ ದೇಶಗಳಲ್ಲಿ ಫಲವಂತಿಕೆಯ ಆರಾಧನೆಗೆ ಸಂಬಂಧಪಟ್ಟ ಚಿಹ್ನೆಯಾಗಿ ಬಳಸುತ್ತಿದ್ದರು ಎಂಬ ಊಹೆಗಳು ನಮ್ಮ ವಿದ್ವಾಂಸರದ್ದಾಗಿದೆ. ಸಿಥಿಯನ್ನರಿಂದ ಇದು ರಷ್ಯಾ, ಜರ್ಮನಿ ಮೊದಲಾದ ದೇಶಗಳಿಗೂ ಹರಡಿತೆಂದು ಹೇಳಲಾಗಿದೆ. ತಕ್ಷಶಿಲೆಯಲ್ಲಿ ದೊರಕಿರುವ ಕ್ರಿಸ್ತಶಕಾರಂಭದ ಒಂದು ಶಿಲ್ಪ ಅತ್ಯಂತ ಪ್ರಾಚೀನವಾದುದೆಂದು ನಂಬಲಾಗಿದೆ. ಇದು ನಿಜವಾದ ಪಕ್ಷಿಯೋ, ಕಾಲ್ಪನಿಕ ಪಕ್ಷಿಯೋ ಎಂಬ ಜಿಜ್ಞಾಸೆ ವಿದ್ವಾಂಸರಲ್ಲಿದೆ.
ಗಂಡಭೇರುಂಡ ನಾವು ನೀವು ತಿಳಿದುಕೊಂಡಂತೆ ಕಾಲ್ಪನಿಕ ಪಕ್ಷಿ. ಭೌತಿಕವಾಗಿ ಸಯಾಮಿ ಪಕ್ಷಿಯಂತೆ ಕಾಣಿಸುವುದು ವಿಶೇಷವಾಗಿದೆ. ವಿರುದ್ಧದಿಕ್ಕಿನತ್ತ ತಿರುಗಿರುವ ಎರಡು ತಲೆಗಳು, ಚೂಪಾದ ಕೊಕ್ಕುಗಳೊಂದಿಗೆ ದಷ್ಟ ಪುಷ್ಟವಾದ ಶರೀರದೊಂದಿಗೆ ಬಹಳ ಬಲಶಾಲಿ ಪಕ್ಷಿ ಎಂದೆನಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆಯಲ್ಲಿರುವ ಗಂಡಭೇರುಂಡ ಪಕ್ಷಿಯ ಪ್ರತಿಮೆ ಕರ್ನಾಟಕದ ಗಂಢಬೇರುಂಡ ಶಿಲ್ಪಗಳಲ್ಲಿ ಅತ್ಯಂತ ಪ್ರಾಚೀನವಾದುದು. ಎತ್ತರದ ಸ್ಥಂಭದ ಮೇಲೆ ನಿಂತಿರುವ ಈ ಶಿಲ್ಪದ ಶರೀರ ಮಾನವಾಕಾರವನ್ನು ಹೊಂದಿದ್ದು ಕಂಠದ ಮೇಲೆ ಮಾತ್ರ ಗಿಡುಗನ ತಲೆಯನ್ನು ಹೋಲುವ ಎರಡು ತಲೆಗಳಿವೆ. ಈ ಚಿತ್ರ ರಾಕ್ಷಸರನ್ನು ನುಂಗುತ್ತಿರುವಂತೆ ಚಿತ್ರಿತವಾಗಿದೆ. ಈ ಕಂಬದ ಅಡಿಯಲ್ಲಿರುವ ಶಾಸನದಲ್ಲಿ ಇದನ್ನು ಬೇರುಂಡೇಶ್ವರ ಎಂದು ಹೆಸರಿಸಿದೆ. ಕಲ್ಯಾಣ ಚಾಲುಕ್ಯರ ಮಹಾಮಂಡಲೇಶ್ವರನಾಗಿದ್ದ ಚಾವುಂಡರಾಯರಸ ಕ್ರಿ.ಶ. 969 ರಲ್ಲಿ ಸ್ಥಾಪಿಸಿದನೆಂದು ಈ ಶಾಸನವು ತಿಳಿಸುತ್ತದೆ.
-: ಪುರಾಣದಲ್ಲಿ ಈ ಪಕ್ಷಿಯ ಉಲ್ಲೇಖಗಳು :-
ಋಗ್ವೇದದಲ್ಲಿ ಈ ಪಕ್ಷಿಯ ಉಲ್ಲೇಖ ಇದೆ. ಈ ಉಲ್ಲೇಖದಂತೆ ವಿಷ್ಣುವಿನ ವಾಹನವಾದ ಗರುಡನಿಂದ ಹುಟ್ಟಿಬಂದ್ದದ್ದೆ ಗಂಡಭೇರುಂಡ ಎಂಬ ಊಹೆ ಇದೆ. ಇದೇ ಅಲ್ಲದೆ ಶ್ರೀವಿಷ್ಣು ದುಷ್ಟಸಂಹಾರಕ್ಕಾಗಿ ಹಲವಾರು ಅವತಾರವನ್ನೆತ್ತಿದ. ಆ ಅವತಾರಗಳಲ್ಲಿ ನರಸಿಂಹಾವತಾರವೂ ಒಂದು. ಇದರ ಪ್ರಕಾರ ವಿಷ್ಣು ಹಿರಣ್ಯಕಶ್ಯಪನನ್ನು ಸಂಹಾರ ಮಾಡಿ ತನ್ನ ಕೋಪ ಶಮನವಾಗದೇ ಇರುವಾಗ ಭಯಗೊಂಡ ದೇವತೆಗಳು ಶಿವನನ್ನು ಬೇಡುತ್ತಾರೆ. ಆಗ ಶಿವ ಶರಭಾವತಾರವನ್ನೆತ್ತಿ ನರಸಿಂಹನನ್ನು ಎದುರಿಸಿದ. ಆಗ ವಿಷ್ಣು ಈ ಎರಡೂ ಅವತಾರಗಳನ್ನು ಎದುರಿಸಲು ಮತ್ತೊಂದು ರೂಪವನ್ನು ತಾಳುತ್ತಾನೆ. ಅದೇ ಗಂಡಭೇರುಂಡ ಪಕ್ಷಿಯ ಅವತಾರ ಎಂಬ ಪ್ರತೀತಿ ಇದೆ. ತನ್ನೆರಡೂ ಕಾಲುಗಳಲ್ಲಿ ಒಂದೊಂದು ಆನೆಗಳನ್ನು ಹಿಡಿದು ಒಂದು ಬಾಯಿಂದ ಬೆಂಕಿಯನ್ನು ಮತ್ತೊಂದು ಬಾಯಿಯಿಂದ ಗಂಡಭೇರುಂಡವು ಶರಭಕ್ಕಿಂತ ಶಕ್ತಿಯುತವಾದ ಪಕ್ಷಿಯೆಂದೂ ಶರಭವೇ ಇದರ ಆಹಾರವೆಂದೂ ಹೇಳಲಾಗಿದೆ. (ಶರಭ ಎನ್ನುವುದು ಸಹ ಕಾಲ್ಪನಿಕ ಪ್ರಾಣಿ. ಸಿಂಹಕ್ಕಿಂತಲೂ ಬಲಿಷ್ಠವಾದ ಎಂಟುಕಾಲುಗಳನ್ನು ಒಳಗೊಂಡ ಪ್ರಾಣಿ, ಶಿವನ ಅವತಾರ )
-=: ಇತಿಹಾಸದಲ್ಲಿ ಗಂಡಭೇರುಂಡದ ಉಲ್ಲೇಖಗಳು :=-
ಇತಿಹಾಸದಲ್ಲಿ ಗಂಡಭೇರುಂಡ ಪಕ್ಷಿಯು ಹಲವಾರು ರಾಜರುಗಳ, ರಾಜ್ಯಗಳ ಲಾಂಛನವಾಗಿ ಪ್ರಕಟಗೊಂಡಿದೆ. ಲಾಂಛನವಾಗಿ ಇದು ಬಳಕೆಗೆ ಬಂದದ್ದು 13ನೇ ಶತಮಾನದ ಉತ್ತರಾರ್ಧಭಾಗದಲ್ಲಿ. ಹೊಯ್ಸಳ ದೊರೆ 3ನೇ ನರಸಿಂಹ ( ಕ್ರಿ.ಶ. 1253-1293) ಮತ್ತು 3ನೇ ಬಲ್ಲಾಳ ( ಕ್ರಿ.ಶ. 1293-1324)ರ ಕಾಲದಲ್ಲಿ. ಇವರ ಕಾಲದ ಕೆಲವು ಶಾಸನಗಳಲ್ಲಿ ಇದರ ಚಿತ್ರಗಳಿವೆ. ವಿಜಯನಗರ ಸಾಮ್ರಾಜ್ಯದ ಅರಸ ಅಚ್ಚುತರಾಯನ( ಕ್ರಿ.ಶ.1530-1542) ಚಿನ್ನ ಮತ್ತು ತಾಮ್ರದ ನಾಣ್ಯಗಳ ಮೇಲೆ ಗಂಡಭೇರುಂಡ ಪಕ್ಷಿಯ ಚಿತ್ರವಿದೆ. ಇದರ ಬಲವನ್ನು ನಿರ್ಧರಿಸುವ ಕೆಲವು ಚಿತ್ರಗಳಂತೂ ರೋಮಾಂಚನಗೊಳಿಸುತ್ತದೆ. ಸೊಂಡಿಲು ಮತ್ತು ಬಾಲವನ್ನು ಮೇಲೆತ್ತಿಕೊಂಡಿರುವ ಆನೆಗಳನ್ನು ಈ ಪಕ್ಷಿ ತನ್ನ ಎರಡೂ ಕಾಲುಗಳಲ್ಲಿ ಸಿಕ್ಕಿಸಿಕೊಂಡಿರುವ ಚಿತ್ರವಂತೂ ಪಕ್ಷಿಯ ಭೀಮಬಲವನ್ನು ಪ್ರದರ್ಶಿಸುತ್ತದೆ. ವಿಜಯನಗರ ಅರಸರ ನಂತರ ಮಧುರೆಯ ನಾಯಕರು, ಕೆಳದಿಯ ರಾಜರುಗಳು ಈ ಪಕ್ಷಿಯನ್ನು ತಮ್ಮ ಲಾಂಛನವನ್ನಾಗಿ ಬಳಸಿದರು. ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ಇದನ್ನು ನೋಡಬಹುದು. ನಂತರದಲ್ಲಿ ಮುಖ್ಯವಾಗಿ ಮೈಸೂರು ಒಡೆಯರು ತಮ್ಮ ಧ್ವಜದ ಮೇಲೆ ಪ್ರತಿಷ್ಠಾಪಿಸಿದರು. ಅದು ಇಂದಿಗೂ ಉಳಿದು ಬಂದಿದೆ. ಮೈಸೂರು ಒಡೆಯರ ರಾಜ್ಯ ನಿರ್ಮಾಣದೊಂದಿಗೆ ಗಂಡಭೇರುಂಡ ಲಾಂಚನವೂ ಬಂದು, ಇಂದಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆ.ಎಸ್.ಆರ್.ಟಿ.ಸಿ.) ಲಾಂಛನವಾಗಿ ಮನ್ನಣೆ ಗಳಿಸಿದೆ. ಈ ಪಕ್ಷಿಯು ಹಿಂದಿನಿಂದಲೂ ಹಲವಾರು ರಾಜ ಪ್ರಭುತ್ವಗಳಲ್ಲಿ ಲಾಂಛನವಾಗಿ ಹೊರ ಹೊಂದಿದೆ. ಕರ್ನಾಟಕದ ಹಲವು ರಾಜವಂಶಗಳಲ್ಲಿ ಪ್ರಚಲಿತದಲ್ಲಿದ್ದು ಈ ಪಕ್ಷಿಯ ಶಕ್ತಿಯ ಪರಾಕಾಷ್ಠತೆಯ ಚಿಹ್ನೆಯಾಗಿದೆ. ಈ ಕಾರಣಕ್ಕಾಗಿಯೇ ಇರಬೇಕು ಇದನ್ನು ರಾಜಚಿಹ್ನೆಯಾಗಿ ಬಳಸಿಕೊಂಡರು. ರಾಜ ಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಮೈಸೂರು ಸಂಸ್ಥಾನ ಎಂದಾಗಿ, ನಂತರದಲ್ಲಿ ಮೈಸೂರು ರಾಜ್ಯವಾಗಿ ತದನಂತರದಲ್ಲಿಕರ್ನಾಟಕ ಎಂದಾಯಿತು. ಮೈಸೂರಿನ ಅರಸರ ಲಾಂಛನವಾಗಿದ್ದ ಈ ಗಂಡಭೇರುಂಡ ಪಕ್ಷಿಯ ಸೆಳೆತ ರಾಜಮನೆತನಗಳಿಗೆ ಸೀಮಿತವಾಗಿ ಅವರೊಟ್ಟಿಗೆ ನಾಶವಾಗದೆ ಇಂದಿನ ಕರ್ನಾಟಕ ಸರ್ಕಾರವೂ ಸಹ ಈ ಪಕ್ಷಿಯ ಲಾಂಚನವನ್ನು ಉಳಿಸಿಕೊಂಡಿದೆ. ಸರ್ಕಾರಿ ಬಸ್ಸುಗಳ ಮೇಲೆ ಈ ಪಕ್ಷಿಯ ಚಿಹ್ನೆ ಎಲ್ಲರನ್ನೂ ಆಕರ್ಷಿಸುತ್ತದೆ.
ಈ ಲೇಖನಕ್ಕೆ ಪೂರಕವಾಗಿ ಪ್ರೇರಕರಾದದ್ದು ಮೊದಲೇ ಹೇಳಿದಂತೆ ಗೆಳೆಯ ಮೈಸೂರು ಹುಸೇನಿ ಸಾಂಝಿ ಕಲಾವಿದ. ಮೈಸೂರು ದಸರೆಯ ವಿಶೇಷವಾಗಿ ಕಾಗದ ಕತ್ತರಿಸಿ ಕಲಾಕೃತಿಗಳನ್ನು ಕ್ಷಣಮಾತ್ರದಲ್ಲಿ ರಚಿಸಬಲ್ಲ ಮಾಂತ್ರಿಕ. ಕಾಗದ ಕತ್ತರಿಯನ್ನು ಅವರ ಮುಂದಿಟ್ಟರೆ ಸಾಕು ಕರಗಳನ್ನು ಬಳಸಿ ಕಲ್ಪನೆಯ ಕಲಾಕೃತಿಗಳು ಸಿದ್ಧಗೊಳಿಸಬಲ್ಲ ದೈತ್ಯಶಕ್ತಿಯ ಅದ್ಭುತ ಕಲಾವಿದ. ನೂರಾರು ಸಾಂಝಿ ಕಲೆಯ ಕಾರ್ಯಾಗಾರಗಳನ್ನು ಏರ್ಪಡಿಸಿ ಸಾಂಝಿ ಎಂಬ ಕಲೆಯನ್ನು ಮನೆಮಾತಾಗಿಸುವ ಪಥ ಇವರದು. ಅವರ ಕಲಾ ಕೃತಿಗಳ ಚಿತ್ರ ಸಂಪುಟವೂ ಇಲ್ಲಿದೆ. ನೋಡಿ ಆನಂದಿಸಿ. ಸಾಧ್ಯವಾದರೆ ಅವರನ್ನೊಮ್ಮೆ ಭೇಟಿ ಮಾಡಿ. ಕಾಣುತ್ತಲೆ ಕಲಾವಿದರಾಗಬಯಸುವುರಾದರೆ ಸದಾ ಸ್ವಾಗತ ಕೋರುವ ಸಾಂಝಿ ಕಲಾಲೋಕದ ಸ್ಥಾಪಕ ಎಸ್.ಎ್.ಹುಸೇನಿಯವರ ಸಂಪರ್ಕಕ್ಕಾಗಿ,
(ಶಾಲಾ ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಇವರ ಕಾರ್ಯಾಗಾರ ಆಯೋಜಿಸಲು ಮತ್ತು ಹುಸೇನಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯ ಬೇಕಾಗಿದ್ದಲ್ಲಿ 9845153277ಕ್ಕೆ ಕರೆ ಮಾಡಬಹುದು ಇಲ್ಲವೆ ಇವರ ಮಿಂಚಂಚೆ(ಇ-ಚಿಟ) : ಜಿಟಿ@ಚಿಟ.ಛಿ ಸಂಪರ್ಕಿಸಬಹುದು. ಬ್ಲಾಗ್: ಥಿಡಿಟಿ.ಟಠಿಣ.ಟಿ ನಲ್ಲಿ ಸಾಂಝಿ ಕಾಗದ ಕಲೆಯ ಚಿತ್ರಗಳನ್ನು ನೋಡಬಹುದು.)
* ಪಿ.ಎಂ ಸುಬ್ರಮಣ್ಯ.ಬ.ಹಳ್ಳಿ